ಜಿಲ್ಲೆ

ಜಿಲ್ಲಾಧಿಕಾರಿ ನಿವಾಸದ ಎದುರೇ ಸಮಸ್ಯೆ ರಸ್ತೆಯಲ್ಲಿ ನೀರು ನಿಂತು ಸವಾರರಿಗೆ ಕಿರಿಕಿರಿ ಬೆಂ-ಮೈ ಹಳೇ ಹೆದ್ದಾರಿ ನಿರ್ಲಕ್ಷ್ಯ

ಗಂಗಾಧರ ಬಿ ವಿ

ರಾಮನಗರ

ಬೆಂಗಳೂರು - ಮೈಸೂರು ದಶಪಥ ಹೆದ್ದಾರಿ ನಿರ್ಮಾಣದ ನಂತರ ಹಳೇ ಹೆದ್ದಾರಿ ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಒಂದೆಡೆ ರಸ್ತೆ ವಿಭಜಕದಲ್ಲಿ ಬೆಳೆದಿರುವ ಗಿಡಗಳು ಹೆದ್ದಾರಿಗೆ ಚಾಚಿಕೊಂಡು ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದರೆ, ಮತ್ತೊಂದೆಡೆ ಗುಂಡಿಗಳು ಸಹ ಅಪಾಯಕ್ಕೆ ಬಾಯಿ ತೆರೆದುಕೊಂಡಿವೆ. ಇದರ ಜತೆಗೆ ಜಿಲ್ಲಾಧಿಕಾರಿ ನಿವಾಸದ ಎದುರೇ ಹೆದ್ದಾರಿಯಲ್ಲಿ ನೀರು ನಿಂತು ವಾಹನ ಸವಾರರು ಪರಿತಪಿಸುವಂತೆ ಆಗಿದೆ.

ಸಮಸ್ಯೆ ಸರಿಪಡಿಸುತ್ತಿಲ್ಲ

ಜಾನಪದ ಲೋಕದ ಬಳಿ ಇರುವ ಜಿಲ್ಲಾಧಿಕಾರಿ ನಿವಾಸದ ಎದುರು ಬೆಂಗಳೂರು ಕಡೆಗೆ ಹೋಗುವ ರಸ್ತೆಯಲ್ಲಿ ನೀರು ತುಂಬಿರುತ್ತದೆ. ಇದರ ಮೇಲೆ ವಾಹನಗಳು ಚಲಿಸಿದರೆ ಮೈಸೂರು ಕಡೆಗೆ ಹೋಗುವ ವಾಹನ ಸವಾರರು ಅದರಲ್ಲೂ ಬೈಕ್ ಸವಾರರಿಗೆ ಈ ನೀರು ಹಾರುತ್ತದೆ. ಇದೇ ರಸ್ತೆಯಲ್ಲಿ ಜಿಲ್ಲಾಧಿಕಾರಿಗಳು ಪ್ರತಿದಿನ ಸಂಚರಿಸಿದರೂ ಸರಿಪಡಿಸುವ ಕೆಲಸ ಆಗಿಲ್ಲ. ಇನ್ನು ಮಳೆ ಬಂದರೆ ಮುಗಿದೇ ಹೋಯಿತು, ಜಾನಪದ ಲೋಕ, ಸರ್ಕಾರಿ ಇಂಜಿನಿಯಂಗ್ ಕಾಲೇಜಿನ ಪ್ರವೇಶದ ದ್ವಾರದ ಎದುರು ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ಮಳೆ ನೀರು ನಿಂತು ಬೈಕ್ ಸವಾರರು ಓಡಾಡದ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಮೂಲ ಕಾರಣ

ರಾಮನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡಲು ಚನ್ನಪಟ್ಟಣದಿಂದ ಹಾದು ಹೋಗಿರುವ ಪೈಪ್‌ಲೈನ್ ಜಿಲ್ಲಾಧಿಕಾರಿ ನಿವಾಸದ ಎದುರಿಗೆ ಸೋರುತ್ತಿದೆ. ಇಲ್ಲಿ ಹರಿಯುವ ನೀರು ಹೆದ್ದಾರಿಗೆ ಹರಿದು ಸಂಗ್ರಹವಾಗಿ, ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಇದನ್ನು ಸರಿಪಡಿಸಬೇಕಾದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ತನಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುವಂತಿದೆ.

ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಲಿ

ಜಿಲ್ಲಾಧಿಕಾರಿ ನಿವಾಸದ ಎದುರೇ ಸಮಸ್ಯೆ ಇದ್ದರೂ ಪರಿಹಾರ ಕಾಣದಿರುವುದು ವಿಪರ್ಯಾಸ. ಪ್ರತಿದಿನ ಇದೇ ರಸ್ತೆಯಲ್ಲಿ ಓಡಾಡುವ ಜಿಲ್ಲಾಧಿಕಾರಿಗಳು ಕೂಡಲೇ ಈ ಸಮಸ್ಯೆ ಪರಿಹಾರಕ್ಕೆ ಸಂಬಂಧಪಟ್ಟವರಿಗೆ ಸೂಚನೆ ನೀಡಬೇಕಿದೆ.