ಜಿಲ್ಲೆ

ಪೂರ್ಣ ಸಿದ್ಧಗೊಳ್ಳದ ಸರ್ವೀಸ್ ರಸ್ತೆ ನಿಷೇಧಿತ ವಾಹನಗಳಿಗೆ ಕಿರಿಕಿರಿ ಬೆಂ-ಮೈ ಹೆದ್ದಾರಿಯಲ್ಲಿ ಕೆಲ ವಾಹನಗಳ ಸಂಚಾರಕ್ಕೆ ಬ್ರೇಕ್

ಚೇತನ್ ಚಕ್ಕೆರೆ ಬಿಡದಿ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಬೈಕ್ ಹಾಗೂ ಕೆಲವು ಲಘು ವಾಹನಗಳ ಸಂಚಾರಕ್ಕೆ ಇಂದಿನಿಂದ ಬ್ರೇಕ್ ಬೀಳುತ್ತಿದೆ. ಹಾಗಾಗಿ ನಿಷೇಧಿತ ವಾಹನಗಳು ಸರ್ವೀಸ್ ರಸ್ತೆಯಲ್ಲಿ ಸಂಚಾರ ಮಾಡಬೇಕಿದೆ. ಆದರೆ ಸರ್ವೀಸ್ ರಸ್ತೆ ಪೂರ್ಣ ಪ್ರಮಾಣದಲ್ಲಿ ಸಿದ್ಧಗೊಳ್ಳದ ಹಿನ್ನೆಲೆಯಲ್ಲಿ ವಾಹನ ಸವಾರರು ಕಿರಿಕಿರಿ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬೆಂ-ಮೈ ಎಕ್ಸ್‌ಪ್ರೆಸ್ ಹೈವೆ ಉದ್ಘಾಟನೆಯಾದ ದಿನದಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗಿದ್ದು, ಇದನ್ನು ತಡೆಯಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಜಿಲ್ಲಾ ಪೊಲೀಸರು ಹಲವು ಕ್ರಮಗಳನ್ನು ಜಾರಿ ಮಾಡಿದ್ದಾರೆ. ಅಲ್ಲದೆ ದ್ವಿಚಕ್ರ ವಾಹನ, ಆಟೋ, ಟ್ರ್ಯಾಕ್ಟರ್ ಸೇರಿ ಹಲವು ವಾಹನಗಳ ಹೆದ್ದಾರಿ ಸಂಚಾರಕ್ಕೆ ನಿರ್ಬಂಧ ಹೇರಿ ಶಾಕ್ ಕೊಟ್ಟಿದ್ದಾರೆ.

ಸವಾರರಿಗೆ ಕಿರಿಕಿರಿ: ಹೆದ್ದಾರಿಯಲ್ಲಿ ಸಂಚಾರ ನಿರ್ಬಂಧಕ್ಕೆ ಒಳಗಾಗಿರುವ ವಾಹನಗಳು ಸರ್ವೀಸ್ ರಸ್ತೆಯಲ್ಲಿ ಸಂಚಾರ ಮಾಡಬೇಕಾದ ಅನಿವಾರ್ಯತೆ ಬಂದಿದೆ. ಆದರೆ ಈ ರಸ್ತೆಗಳು ಪೂರ್ಣಗೊಂಡಿಲ್ಲ. ಬಿಡದಿಯ ಕಾಡುಮನೆ ಕ್ರಾಸ್ ಬಳಿ ಇರುವ ರೈಲು ಹಳಿಯ ಬಳಿ ಸರ್ವೀಸ್ ರಸ್ತೆ ಪೂರ್ಣಗೊಂಡಿಲ್ಲ. ಬೆಂಗಳೂರು ಕಡೆಯಿಂದ ಸರ್ವೀಸ್ ರಸ್ತೆಯಲ್ಲಿ ಬರುವ ವಾಹನಗಳು ರೈಲು ಹಳಿವರೆಗೂ ಸಾಗಿ ಮುಂದೆ ದಾರಿ ಇಲ್ಲದೆ ಮತ್ತೆ ಹಿಂದಿರುಗಿ ಹಳೇ ಹೆದ್ದಾರಿಯಲ್ಲೇ ಸಂಚಾರ ಮಾಡಬೇಕಿದೆ. ಇನ್ನು ಮೈಸೂರು ಕಡೆಯಿಂದ ಬರುವ ವಾಹನಗಳು ಇದೇ ರೈಲು ಹಳಿವರೆಗೂ ಬಂದು ದಾರಿ ಇಲ್ಲದೆ, ಮತ್ತೆ 2-3 ಕಿಲೋಮೀಟರ್ ಸಾಗಿ ಹಳೇ ಹೆದ್ದಾರಿಯಲ್ಲಿ ಬೆಂಗಳೂರಿನತ್ತ ಪ್ರಯಾಣ ಮಾಡಬೇಕಿದೆ.

ಪೂರ್ಣಗೊಳ್ಳದ ಸರ್ವೀಸ್ ರಸ್ತೆ:

ಹೆದ್ದಾರಿ ಪಕ್ಕದಲ್ಲಿ ಸರ್ವೀಸ್ ರಸ್ತೆ ಕಡೆ ಸಮಸ್ಯೆಯಿದ್ದು ವಾಹನಗಳ ಸವಾರರನ್ನು ಕಾಡುತ್ತಿದೆ. ಇನ್ನೂ ಕೆಲವು ಕಡೆ ಸರ್ವೀಸ್ ರಸ್ತೆ ನಿರ್ಮಾಣ ಮಾಡಬೇಕಿದೆ. ಹೆದ್ದಾರಿ ಪಕ್ಕದಲ್ಲಿನ ಎರಡು ಬದಿ ಸರ್ವೀಸ್ ರಸ್ತೆ ದುರಸ್ತಿ ಪೂರ್ಣಗೊಂಡಿಲ್ಲ. ಹೀಗಾಗಿ ಹೆದ್ದಾರಿ ಸಂಚಾರದಿಂದ ನಿರ್ಬಂಧಕ್ಕೊಳಪಟ್ಟ ವಾಹನಗಳಿಗೆ ಅತ್ತ ಹೆದ್ದಾರಿಯಲ್ಲೂ, ಇತ್ತ ಸರ್ವೀಸ್ ರಸ್ತೆಯಲ್ಲೂ ಸಂಚರಿಸದ ಸ್ಥಿತಿ ಎದುರಾಗಲಿದೆ.

ದಶಪಥ ಹೆದ್ದಾರಿಯಲ್ಲಿ ದ್ವಿಚಕ್ರ, ತ್ರಿಚಕ್ರ ಸೇರಿ ಕೆಲ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ನಿಯಮ ಉಲ್ಲಂಘಿಸಿ ಹೈವೇಗೆ ಇಳಿದರೆ 500 ರೂ. ದಂಡ ವಿಧಿಸಲಾಗುತ್ತದೆ. ಬೈಕ್, ಆಟೋ, ಟ್ರ್ಯಾಕ್ಟರ್‌ಗಳು ಹೆದ್ದಾರಿಯಲ್ಲಿ ಸಂಚರಿಸುವಂತಿಲ್ಲ. ಬದಲಿಗೆ ಸರ್ವೀಸ್ ರಸ್ತೆ ಬಳಸಬೇಕು. ಜು.12ರಂದೇ ಈ ಬಗ್ಗೆ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ನಿಯಮ ಅನ್ವಯ ಆಗಲಿದೆ. ಕೆಲವೆಡೆ ಸರ್ವೀಸ್ ರಸ್ತೆಯಲ್ಲಿ ಸಮಸ್ಯೆ ಇದೆ. ಅದನ್ನು ಶೀಘ್ರವಾಗಿ ಸರಿಪಡಿಸುವಂತೆ ಹೆದ್ದಾರಿ ಅಧಿಕಾರಿಗಳ ಜತೆ ಮಾತನಾಡಲಾಗಿದೆ. ವಾಹನ ಸವಾರರು ನಿಯಮ ಪಾಲನೆ ಮಾಡಬೇಕಿದೆ.

ಕಾರ್ತಿಕ್ ರೆಡ್ಡಿ, ರಾಮನಗರ ಎಸ್‌ಪಿ

ಹೆದ್ದಾರಿಯಲ್ಲಿ ಕಾರು, ಬಸ್ ಸೇರಿ ಭಾರಿ ವಾಹನಗಳ ನಡುವೆ ಅಪಘಾತಗಳು ನಡೆದಿವೆ. ಬೈಕ್ ಹಾಗೂ ಆಟೋಗಳ ನಡುವೆ ಅಪಘಾತಗಳು ಹೆಚ್ಚಾಗಿ ಸಂಭವಿಸಿಲ್ಲ. ನಿರ್ಬಂಧಿತ ವಾಹನಗಳು ಸಂಚಾರ ಮಾಡಬೇಕಿರುವ ಸರ್ವೀಸ್ ರಸ್ತೆ ಪೂರ್ಣವಾಗಿಲ್ಲ. ಹಳೇ ಹೆದ್ದಾರಿಯೂ ಸರಿಯಿಲ್ಲ. ಹಳೇ ಹೆದ್ದಾರಿ, ಸರ್ವೀಸ್ ರಸ್ತೆ ದುರಸ್ತಿ ಪಡಿಸಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಿ. ಇಲ್ಲವಾದರೆ ಹೋರಾಟ ಮಾಡಬೇಕಾಗುತ್ತದೆ.

ಗಾಣಕಲ್ ನಟರಾಜ್, ಬಿಡದಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ