ರಾಮನಗರ: ಹಣ ಡ್ರಾ ಮಾಡಿಕೊಡುವ ನೆಪದಲ್ಲಿ ಎಟಿಎಂ ಕಾರ್ಡ್ ಎಗರಿಸಿ ವಂಚಿಸುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ರಾಮನಗರ ಐಜೂರು ಪೊಲೀಸರು ಯಶಸ್ವಿ ಆಗಿದ್ದಾರೆ.
ಕೋಲಾರ ಜಿಲ್ಲೆ ಬಂಗಾರ ಪೇಟೆಯ ವಿವೇಕಾನಂದ ನಗರದ ನಿವಾಸಿ ತಿಮ್ಮರಾಯಪ್ಪ (38) ಮತ್ತು ಮಾಲೂರಿನ ಮಾರುತಿ ಎಕ್ಸ್‌ಟೆಂಷನ್ ನಿವಾಸಿ ಮಂಜುನಾಥ್ (37) ಬಂಧಿತ ಆರೋಪಿಗಳು.
ಎಟಿಎಂಗಳಿಗೆ ಹಣ ಡ್ರಾ ಮಾಡಲು ಬರುವ ವಯೋವೃದ್ಧರು ಮತ್ತು ಅವಿಧ್ಯಾವಂತರನ್ನೇ ಟಾರ್ಗೆಟ್ ಮಾಡಿ, ಅವರಿಗೆ ಹಣ ಡ್ರಾ ಮಾಡಿಕೊಡುವ ನೆಪದಲ್ಲಿ ಎಟಿಎಂ ಕಾರ್ಡ್ ಮತ್ತು ಪಿನ್ ಪಡೆದು, ನಂತರ ಹಣ ಬರುತ್ತಿಲ್ಲ ಎಂದು ಸುಳ್ಳು ಹೇಳಿ ಮತ್ತೊಂದು ಕಾರ್ಡ್ ಕೊಟ್ಟು ಕಳುಹಿಸುತ್ತಿದ್ದರು. ನಂತರ ಹಣ ಡ್ರಾ ಮಾಡಿಕೊಂಡು ವಂಚಿಸುತ್ತಿದ್ದರು.
ಫೆ.9ರಂದು ರಾಮನಗರದ ಯೂನಿಯನ್ ಬ್ಯಾಂಕ್ ಎಟಿಎಂಗೆ ಹಣ ಡ್ರಾ ಮಾಡಲು ಬಂದಿದ್ದ ಅರಳಿಮರದದೊಡ್ಡಿ ಗ್ರಾಮದ ಶಾಂತಮ್ಮ ಎಂಬುವರಿಗೆ ಇದೇ ರೀತಿ ವಂಚಿಸಿ, 12 ಸಾವಿರ ರೂ.ಗಳನ್ನು ಲಪಟಾಯಿಸಿದ್ದರು. ಈ ಸಂಬಂಧ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನಂತರ ಅಂದಿನಿಂದ ಕಾರ್ಯಾಚರಣೆ ನಡೆಸಿದ ಐಜೂರು ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದು, ಗುರುವಾರ ಸಿಕ್ಕಿಬಿದ್ದಿದ್ದಾರೆ. ಬಂಧಿತರಿಂದ 20 ವಿವಿಧ ಬ್ಯಾಂಕ್‌ಗಳ ಎಟಿಎಂಗಳು, 50 ಸಾವಿರ ನಗದು, 2 ,ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದ್ದು, ರಾಮನಗರ ಜಿಲ್ಲೆಯ ವಿವಿಧ ತಾಲೂಕುಗಳು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೂ ಇದೇ ರೀತಿಯ ಕೃತ್ಯವನ್ನು ನಡೆಸಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.