ಜಿಲ್ಲೆ

ಅರ್ಕಾವತಿಯಲ್ಲಿ ನೀರುನಾಯಿಗಳು!

ಗಂಗಾಧರ ಬಿ ವಿ

ರಾಮನಗರ: ತಾಲೂಕಿನ ಕಸಬಾ ಹೋಬಳಿ ಸುಗ್ಗನಹಳ್ಳಿ ಸೇತುವೆ ಬಳಿಯ ಅರ್ಕಾವತಿ ನದಿಯಲ್ಲಿ ಆರು ನೀರು ನಾಯಿಗಳು ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿವೆ.

ರಾಮನಗರ ಭಾಗದಲ್ಲಿ ಇದುವರೆಗೂ ನೀರುನಾಯಿಗಳು ಕಂಡುಬಂದ ಉದಾಹರಣೆಗಳಿಲ್ಲ. ನದಿಗೆ ಮಂಚನಬೆಲೆ ಬಳಿ ಡ್ಯಾಂ ನಿರ್ವಾಣ ವಾಡಲಾಗಿದೆ. ಅಲ್ಲಿಂದ ತಾಲೂಕಿನ ಉಗ್ಗನಹಳ್ಳಿ, ಹರೀಸಂದ್ರ ರಾಮನಗರ ನಗರ ಪ್ರದೇಶದಲ್ಲಿ ಹರಿಯುವ ನದಿ ಹುಣಸನಹಳ್ಳಿ ಕೈಲಾಂಚ ಮೂಲಕ ಕನಕಪುರ ಗಡಿ ದಾಟುತ್ತದೆ. ರಾಮನಗರ ತಾಲೂಕಿನಲ್ಲಿ 32 ಕಿ.ಮೀ.ಗಳಷ್ಟು ನದಿ ಹರಿಯುತ್ತದೆ. ಸುಗ್ಗನಹಳ್ಳಿ ಬಳಿ ಬುಧವಾರ ಬೆಳಗ್ಗೆ 6 ನೀರುನಾಯಿಗಳು ಕಾಣಿಸಿಕೊಂಡು ಸಂಜೆವರೆಗೂ ನದಿ ತಟದಲ್ಲಿ ಅಡ್ಡಾಡಿವೆ. ಇವುಗಳನ್ನು ನೋಡಲು ಜನ ತಂಡೋಪತಂಡವಾಗಿ ನದಿ ಬಳಿ ಸೇರಿದ್ದರು. ಸಂಜೆ ನಂತರ ಮರೆಯಾಗಿವೆ. ಆದರೆ ಇಲ್ಲಿಗೆ ಹೇಗೆ ಬಂದವು ಎಂಬುದೇ ಯಕ್ಷಪ್ರಶ್ನೆಯಾಗಿದೆ. ಈ ಬಾರಿ ನದಿಯಲ್ಲಿ ಹೆಚ್ಚಿನ ನೀರು ಬಂದಿತ್ತು. ಅಲ್ಲದೆ ಮುಂಗಾರಿನಿಂದಲೂ ನೀರು ಹರಿಯುತ್ತಲೇ ಇದೆ. ಮಳೆಗಾಲದಲ್ಲಿ ಮಂಚನಬೆಲೆ ಡ್ಯಾಂಗೆ ಬೇರೆ ಕಡೆಯಿಂದ ಬಂದಿರುವ ನೀರು ನಾಯಿಗಳು ಅರ್ಕಾವತಿ ನದಿಯಲ್ಲಿ ಕಂಡುಬಂದಿರಬಹುದು ಎಂದು ಅಂದಾಜಿಸಲಾಗಿದೆ. ನದಿ ತಟದಲ್ಲಿರುವ ನೀರುನಾಯಿಗಳನ್ನು ಸ್ಥಳೀಯ ಯುವಕರು ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾರೆ.