ಜಿಲ್ಲೆ

ಅಮೀನಗಡ ಕುರಿ ಸಾಕಣೆಯಿಂದ ಲಾಭ ನಿರ್ವಹಣೆಯೂ ಸುಲಭ

ಅಭಿಲಾಷ್ ತಿಟ್ಟಮಾರನಹಳ್ಳಿ, ಚನ್ನಪಟ್ಟಣ

ಅಮೀನಗಡ ತಳಿಯ ಕುರಿ ಸಾಕಣೆ ತಾಲೂಕಿನ ರೈತರ ಕೈಹಿಡಿದಿದ್ದು, ಹೈಟೆಕ್ ಮಾದರಿಯ ಈ ಉಪಕಸುಬು ಲಾಭ ತಂದುಕೊಟ್ಟಿದೆ.

ಮಕ್ಕಳು ವಿದ್ಯೆಯಲ್ಲಿ ಹಿಂದುಳಿದರೆ ಕುರಿ ಮೇಯಿಸು ಎಂದು ಪಾಲಕರು ಮೂದಲಿಸುತ್ತಿದ್ದ ಕಾಲವಿತ್ತು. ಆದರೆ ಈಗ ಅದು ಬದಲಾಗಿದ್ದು, ಕುರಿ ಮೇಯಿಸುವುದು ಆರ್ಥಿಕ ಅಭಿವೃದ್ಧಿಯ ಮೂಲ ಎನಿಸಿದೆ. ಇದಕ್ಕೆ ಉದಾಹರಣೆ ಎಂಬಂತೆ ತಾಲೂಕಿನಾದ್ಯಂತ ಬಾಗಲಕೋಟೆ ಜಿಲ್ಲೆಯ ಅಮೀನಗಡ ತಳಿಯ ಕುರಿಗಳ ಸಾಕಣೆ ಮಾಡಿ ಹಲವು ರೈತರು ಸೈ ಎನಿಸಿಕೊಂಡಿದ್ದು, ಹೆಚ್ಚಿನ ಶ್ರಮವಿಲ್ಲದೆ ಉತ್ತಮ ಲಾಭ ತಮ್ಮದಾಗಿಸಿಕೊಂಡಿದ್ದಾರೆ.

ಬಕ್ರೀದ್ ಸಮಯದಲ್ಲಿ ಕುರಿಗಳು ಸಾಕಷ್ಟು ಮಾರಾಟವಾಗುತ್ತವೆ. ಅನೇಕ ಮಂದಿ ಹಬ್ಬಕ್ಕೂ ಮುನ್ನವೇ ಕುರಿಗಳನ್ನು ಖರೀದಿಸುತ್ತಾರೆ. ಆ ಕುರಿಗಳಲ್ಲಿ ಅಮೀನಗಡ ತಳಿ ಅವರ ಬಹು ಇಷ್ಟವಾದ ಕುರಿಯಾಗಿದ್ದು, ದಷ್ಪಪುಷ್ಟವಾಗಿ ಬೆಳೆಯುವ ಈ ಕುರಿಗಳನ್ನು ಗ್ರಾಹಕರು ಹೆಚ್ಚಾಗಿ ಬಯಸುತ್ತಾರೆ. ತಾಲೂಕಿನ ಹಲವೆಡೆ ಈ ತಳಿಯ ಕುರಿ ಸಾಕಿದ್ದು, ಬಕ್ರೀದ್ ಸ್ಪೆಷಲ್ ಎನ್ನಲಾಗುತ್ತಿದೆ. ಈಗಾಗಲೇ ರೈತರು ಉತ್ತಮ ಬೆಲೆಗೆ ಬಿಕರಿ ಮಾಡಿದ್ದಾರೆ. ಕನಿಷ್ಠ 25ರಿಂದ ಗರಿಷ್ಠ 50 ಸಾವಿರಕ್ಕಿಂತ ಹೆಚ್ಚಿನ ಬೆಲೆಗೆ ಮಧ್ಯವರ್ತಿಗಳು ಖರೀದಿಸಿದ್ದಾರೆ. ಖರೀದಿಸಿದ ಕುರಿಗಳನ್ನು ವಿವಿಧ ರಾಜ್ಯಗಳಿಗೆ ಮಾರಾಟ ಮಾಡಲಾಗುತ್ತಿದೆ.

ಉತ್ತಮ ಲಾಭ

ಈ ತಳಿಯ ಕುರಿ ಸಾಕಣೆ ರೈತರಿಗೆ ಲಾಭದಾಯಕವಾಗಿದ್ದು, ಕುರಿ ಸಾಕಿ ಲಾಭ ಮಾಡಿರುವ ತಾಲೂಕಿನ ಪಟ್ಲು ಗ್ರಾಮದ ರೈತ ರಾಜು 20 ಕುರಿಗಳನ್ನು ಸಾಕಿದ್ದಾರೆ. ವೆಚ್ಚ, ಬಂಡವಾಳ ಎಲ್ಲವನ್ನೂ ಕಳೆದು 2 ಲಕ್ಷಕ್ಕೂ ಹೆಚ್ಚಿನ ಲಾಭ ಸಿಕ್ಕಿದೆ. ಈ ಕುರಿ ಬೆಳೆಸಲು ಹೆಚ್ಚಿನ ಶ್ರಮದ ಅವಶ್ಯಕತೆಯೂ ಇಲ್ಲವಾಗಿದ್ದು, ಕುರಿ ಸಾಕಣೆ ಶೆಡ್ ನಿರ್ಮಾಣ ಮಾಡಿಕೊಂಡಿದ್ದು ಸಹಾಯವಾಗಿದೆ ಎಂದು ಪತ್ರಿಕೆಗೆ ತಿಳಿಸಿದ್ದಾರೆ.

ನರೇಗಾ ಯೋಜನೆ ಸಾಥ್

ತಾಲೂಕಿನ ಹಲವು ಗ್ರಾಮಗಳಲ್ಲಿ ಹೈಟೆಕ್ ಮಾದರಿ ಕುರಿ ಸಾಕಾಣಿಕೆ ನಡೆಯುತ್ತಿದ್ದು, ಹಲವು ಗ್ರಾಮಗಳಲ್ಲಿ ನರೇಗಾ ಯೋಜನೆಯ ಮೂಲಕ ಕುರಿ ಶೆಡ್ ನಿರ್ಮಿಸಿಕೊಂಡಿದ್ದು, ರೈತರು ಲಾಭದಾಯಕವಾದ ಕುರಿ ಸಾಕಾಣಿಕೆ ಮಾಡಲು ಯೋಜನೆ ಸಾಥ್ ನೀಡಿದೆ ಎನ್ನಬಹುದಾಗಿದೆ. ಕಳೆದ ವರ್ಷ ತಾಲೂಕಿನ ಹಲವು ಗ್ರಾಮಗಳಲ್ಲಿ 300ಕ್ಕೂ ಹೆಚ್ಚು ಕುರಿ ಸಾಕಾಣಿಕೆ ಶೆಡ್ ನಿರ್ಮಿಸಲಾಗಿದೆೆ. ಈ ವರ್ಷ 25 ಶೆಡ್ ನಿರ್ಮಾಣಗೊಂಡಿದ್ದು, 100ಕ್ಕೂ ಹೆಚ್ಚು ಶೆಡ್‌ಗಳ ನಿರ್ಮಾಣ ಪ್ರಗತಿಯಲ್ಲಿದೆ. ನರೇಗಾ ಯೋಜನೆಯಡಿ ಮಾಡಿರುವ ಕುರಿ ಶೆಡ್‌ಗಳಿಂದ ರೈತರು ಲಾಭ ಗಳಿಸಿರುವುದು ಖುಷಿಯ ವಿಚಾರ ಎಂದು ತಾಪಂ ಇಒ ಶಿವಕುಮಾರ್ ವಿಜಯವಾಣಿಗೆ ತಿಳಿಸಿದ್ದಾರೆ.