ಜಿಲ್ಲೆ

ಅಸ್ತಿ ಬಿಡಲು ಹೊರಟಿದ್ದ ವ್ಯಕ್ತಿ ಅಪಘಾತದಲ್ಲಿ ಸಾವು

ಚನ್ನಪಟ್ಟಣ:

ಕಾರು ಮತ್ತು ಹಾಲಿನ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಒರ್ವ ಮೃತಪಟ್ಟು ನಾಲ್ಕು‌ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ತಿಟ್ಟಮಾರನಹಳ್ಳಿ ಗ್ರಾಮದ ಸಮೀಪ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.ದತ್ತಾತ್ರೇಯ ಆಚಾರ್(67) ಸಾವಿಗೀಡಾದ ವ್ಯಕ್ತಿ.

ಅಪಘಾತದಲ್ಲಿ ಕಾರಿನಲ್ಲಿದ್ದ ಇತರೆ ನಾಲ್ಕು ಮಂದಿಗೂ ಸಹ ಪೆಟ್ಟಾಗಿದ್ದು, ಅವರಿಗೆ ಮುದುಗೆರೆ ಸಮೀಪದ ಚಾಮುಂಡೇಶ್ವರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಅಸ್ಥಿ ಬಿಡಲು ಬಂದು ಮಸಣಕ್ಕೆ!

ಬೆಂಗಳೂರಿನ ನಿವಾಸಿಗಳಾದ ದತ್ತಾತ್ರೇಯ ಆಚಾರ್ ಹಾಗೂ ಅವರ ಸಂಬಂಧಿಕರು ಮೃತರ ಅಸ್ತಿಯನ್ನು ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಲ್ಲಿ ವಿಸರ್ಜನೆ ಮಾಡಲು ಟಯೋಟ ಇಟಿಯೋಸ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.

ತಿಟ್ಟಮಾರನಹಳ್ಳಿ ಸಮೀಪದ ಬೈಪಾಸ್ ರಸ್ತೆಯಲ್ಲಿ ಮುಂದೆ ಹೋಗುತ್ತಿದ್ದ ಹಾಲಿನ ಲಾರಿಯನ್ನು ಹಿಂದಿಕ್ಕುವಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಡಿವೈಡರ್ ಹಾರಿ ರಸ್ತೆ ಮತ್ತೊಂದು ಬದಿಯಲ್ಲಿ ಮಗುಚಿ ಬಿದ್ದಿದೆ.ಘಟನೆಗೆ ಸಂಬಂಧಿಸಿದಂತೆ ಚನ್ನಪಟ್ಟಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.