ಜಿಲ್ಲೆ

ಉಪವಿಭಾಗಾಧಿಕಾರಿ ಮಂಜುನಾಥ್ ಅಮಾನತು ಸರ್ಕಾರದ ಆದೇಶ ಆದಾಯಕ್ಕಿಂತ 6.45 ಕೋಟಿ ರೂ. ಹೆಚ್ಚು ಗಳಿಕೆ

 ರಾಮನಗರ
ಎಸಿಬಿ ದಾಳಿಗೆ ಒಳಗಾಗಿದ್ದ ರಾಮನಗರ ಉಪವಿಭಾಗದ ಉಪವಿಭಾಗಾಧಿಕಾರಿ ಸಿ.ಮಂಜುನಾಥ್ ಅವರನ್ನು ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ಅಂದಿನ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಮಂಜುನಾಥ್ ಅವರಿಗೆ ಸೇರಿದ್ದ ಸ್ಥಳಗಳ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಅಮಾನತಿಗೆ ಶಿಾರಸು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮಾ.17ರಂದು ಸರ್ಕಾರ ಮಂಜುನಾಥ್ ಅವರನ್ನು ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

ಹಿನ್ನೆಲೆ ಏನು?
2022ರ ಮಾರ್ಚ್ 15ರಂದು ರಾಮನಗರ ಎಸಿಬಿಯಲ್ಲಿ ಸಿ.ಮಂಜುನಾಥ್ ಅವರ ವಿರುದ್ಧ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದಡಿ ಪ್ರಕರಣ ದಾಖಲಾಗಿತ್ತು. ಮಾ.16ರಂದು ಮಂಜುನಾಥ್ ಅವರಿಗೆ ಸೇರಿದ ಬೆಂಗಳೂರು, ಯಲಹಂಕ ಮತ್ತಿತರ ಆಸ್ತಿಗಳ ಮೇಲೆ ಎಸಿಬಿ ದಾಳಿ ನಡೆಸಿತ್ತು. ಈ ವೇಳೆ ಒಟ್ಟು 9.43 ಕೋಟಿ ರೂ. ಮೌಲ್ಯದ ಚರ ಮತ್ತು ಸ್ಥಿರಾಸ್ತಿ ಪತ್ತೆಯಾಗಿತ್ತು. ಆದರೆ ಮಂಜುನಾಥ್ ಅವರ ಒಟ್ಟು ಆದಾಯ 2.98 ರೂ.ಗಳಾಗಿದ್ದು, ಆದಾಯಕ್ಕಿಂತ 6.45 ಕೋಟಿ ಹೆಚ್ಚು ಆದಾಯ ಹೊಂದಿರುವುದು ಬೆಳಕಿಗೆ ಬಂದಿದೆ. ಇದು ಅವರ ಒಟ್ಟಾರೆ ಆದಾಯಕ್ಕಿಂತ ಶೇ.216.25 ಪಟ್ಟು ಹೆಚ್ಚು ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ.
ಇದೇ ಹುದ್ದೆಯಲ್ಲಿ ಮಂಜುನಾಥ್ ಅವರನ್ನು ಮುಂದುವರಿಸಿದರೆ, ತನಿಖೆ ಮೇಳೆ ಪ್ರಭಾವ ಬೀರಬಹುದು ಎನ್ನುವ ಕಾರಣವನ್ನೂ ನೀಡಿ, ದಾಳಿ ನಡೆದ ಸುಮಾರು ಒಂದು ವರ್ಷದ ನಂತರ ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.