ಹಿರೇಕೆರೂರ: ಮಳೆಗಾಲ ಸಮೀಪಿಸುತ್ತಿದ್ದರೂ ತಾಲೂಕಿನ ಕಾಲ್ವೀಹಳ್ಳಿ ಗ್ರಾಮದ ರಾಮನಕೆರೆಯ ಕಾಲುವೆ ದುರಸ್ತಿಯಾಗಿಲ್ಲ. ಹೀಗಾಗಿ, ಮಳೆಗಾಲದಲ್ಲಿ ಕೆರೆ ನೀರು ಜಮೀನುಗಳಿಗೆ ನುಗ್ಗಿ ಬೆಳೆ ಹಾನಿಯಾಗುವ ಆತಂಕ ರೈತರನ್ನು ಕಾಡುತ್ತಿದೆ.
ಕಾಲ್ವೀಹಳ್ಳಿ ಗ್ರಾಮದ ರಾಮನಕೆರೆ ಮಳೆಗಾಲದಲ್ಲಿ ತುಂಬಿ ಕೋಡಿ ಬೀಳುತ್ತದೆ. ಕೋಡಿ ಬಿದ್ದು ನೀರು ಹರಿಯುವ ಕಾಲುವೆಯಲ್ಲಿ ಮಣ್ಣು ತುಂಬಿದ್ದು, ಅಲ್ಲಲ್ಲಿ ಸಿಡಿಗಳು ಹಾಳಾಗಿವೆ. ಇದರಿಂದ ನೀರು ಸರಾಗವಾಗಿ ಹರಿಯದೆ 15 ರೈತರ ಸುಮಾರು 60 ಎಕರೆ ಪ್ರದೇಶಕ್ಕೆ ನೀರು ನುಗ್ಗಿ ಬೆಳೆಗಳು ನಾಶವಾಗುತ್ತಿವೆ. ಇಲ್ಲಿ ಹತ್ತಿ, ಮೆಕ್ಕೆಜೋಳ, ಭತ್ತ ಮತ್ತಿತರ ಬೆಳೆ ಬೆಳೆಯಲಾಗುತ್ತಿದ್ದು, ಪ್ರತಿವರ್ಷ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಸ್ಥಿತಿ ನಿರ್ಮಾಣವಾಗುತ್ತಿದೆ.
ಹಾನಗಲ್ಲ ಸಣ್ಣ ನೀರಾವರಿ ಇಲಾಖೆಗೆ ಮನವಿ ಸಲ್ಲಿಸಿದರೆ, ಕೆರೆ-ಕಾಲುವೆ ನಮ್ಮ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ ಎಂದು ನುಣುಚಿಕೊಂಡಿದ್ದಾರೆ. ಹಾಳಾಗಿರುವ ಕಾಲುವೆ ದುರಸ್ತಿ ಮಾಡುವಂತೆ ಹಾನಗಲ್ಲ ಸಣ್ಣನೀರಾವರಿ ಇಲಾಖೆ, ಜಿಪಂ ಮತ್ತು ಕೆರೆ ಅಭಿವೃದ್ಧಿ ಸಮಿತಿ ಹಾಗೂ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ ಎಂದು ರೈತರು ದೂರುತ್ತಿದ್ದಾರೆ.
ಕಳೆದ ವರ್ಷ ನೀರು ನುಗ್ಗಿ ಬೆಳೆ ಹಾಳಾದ ಸಂದರ್ಭದಲ್ಲಿ ತಹಸೀಲ್ದಾರರು ಭೇಟಿ ನೀಡಿ ಸೂಕ್ತ ಪರಿಹಾರ ದೊರಕಿಸುವುದಾಗಿ ಹೇಳಿದ್ದರೂ, ನಯಾಪೈಸೆ ಹಣ ಬಂದಿಲ್ಲ. ಹಲವಾರು ವರ್ಷಗಳಿಂದ ಬೆಳೆಗಳು ಹಾಳಾಗುತ್ತಿದ್ದು, ನಮ್ಮ ನೋವು, ತೊಂದರೆಯನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಇಲ್ಲಿನ ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಕೊನೆಗೆ ಶಾಸಕ ಯು.ಬಿ. ಬಣಕಾರ ಅವರ ಗಮನಕ್ಕೆ ತಂದಾಗ, ಸ್ಥಳಕ್ಕೆ ತೆರಳಿ ಪರಿಶೀಲಿಸಿ ವರದಿ ಸಲ್ಲಿಸುವಂತೆ ಜಿಪಂ ಅಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ಜಿಪಂ ಅಧಿಕಾರಿಗಳು ಪರಿಶೀಲಿಸಿದ್ದು, ಈವರೆಗೆ ಕಾಲುವೆ ಸರಿಪಡಿಸುವ ಗೋಜಿಗೆ ಹೋಗಿಲ್ಲ. ಮಳೆಗಾಲ ಸಮೀಪಿಸುತ್ತಿದ್ದು, ಬೆಳೆಗಳು ಹಾಳಾಗುವ ಮೊದಲೆ ಕೋಡಿ ಕಾಲುವೆ ದುರಸ್ತಿಗೊಳಿಸಬೇಕು ಎಂಬುದು ರೈತರ ಒತ್ತಾಯವಾಗಿದೆ.
ಶಾಸಕರ ಸೂಚನೆ ಮೇರೆಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದೇವೆ. ಕೋಡಿ ಕಾಲುವೆ ಸಂಪೂರ್ಣ ಮಣ್ಣನಿಂದ ಮುಚ್ಚಿ ಹಾಳಾಗಿದೆ. ಕಲ್ಲಿನಿಂದ ಪಿಚ್ಚಿಂಗ್ ಮಾಡಿ, ಕಾಂಕ್ರೀಟ್ ಕಾಲುವೆ ಹಾಗೂ ಸಿಡಿ ನಿರ್ಮಿಸಿದರೆ ಶಾಶ್ವತ ಪರಿಹಾರ ದೊರಯಲಿದೆ. ಏಪ್ರಿಲ್‌ನಲ್ಲಿ ಅನುದಾನ ಬರುವ ನಿರೀಕ್ಷೆಯಿದ್ದು, ಕಾಮಗಾರಿ ಕೈಗೊಳ್ಳಲಾಗುವುದು. ಕೃಷ್ಣ, ಜಿಪಂ ಸಹಾಯಕ ಇಂಜಿನಿಯರ್ ಹಿರೇಕೆರೂರ ಪ್ರತಿವರ್ಷ ಮಳೆಗಾಲದಲ್ಲಿ ರಾಮನಕೆರೆ ಕೋಡಿ ಹರಿಯುವುದರಿಂದ ಅಕ್ಕಪಕ್ಕದ ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾಳಾಗುತ್ತಿವೆ. ಸಂಬಂಧಿಸಿದ ಎಲ್ಲರ ಬಳಿ ಅಳಲು ಹೇಳಿಕೊಂಡರೂ ಪ್ರಯೋಜನವಾಗಿಲ್ಲ. ಮಳೆಗಾಲದ ಒಳಗಾಗಿ ಇದನ್ನು ಅಭಿವೃದ್ಧಿಪಡಿಸಬೇಕು ಕರಬಸಪ್ಪ ಕೋರಿ, ರೈತ