ನರಗುಂದ: ಹೃದಯಾಘಾತದಿಂದ ಯೋಧ ಮೃತಪಟ್ಟ ಘಟನೆ ಸಿಕ್ಕಿಂ ರಾಜ್ಯದಲ್ಲಿ ಭಾನುವಾರ ಸಂಭವಿಸಿದೆ.
ತಾಲೂಕು ರಡ್ಡೇರನಾಗನೂರ ಗ್ರಾಮದ ರಾಮನಗೌಡ ಚಂದ್ರಗೌಡ ಕರಬಸನಗೌಡ್ರ (44) ಮೃತ ಯೋಧ.
ರಡ್ಡೇರನಾಗನೂರಿನ ಚಂದ್ರಗೌಡ, ಪದ್ಮಾವತಿ ದಂಪತಿಯ ಪುತ್ರನಾದ ರಾಮನಗೌಡ 2002ರಲ್ಲಿ ಚಂಡೀಗಡದ ಐಟಿಬಿಪಿ (ಇಂಡಿಯನ್ ಟಿಬೆಟಿಯನ್ ಬಾರ್ಡ್‌ರ್ ಸೆಕ್ಯೂರಿಟಿ ಪೋರ್ಸ್‌ಗೆ) ನೇಮಕವಾಗಿದ್ದರು. 2006ರಲ್ಲಿ ಜಯಶ್ರೀ ಎಂಬುವವರ ಜತೆ ವಿವಾಹವಾಗಿದ್ದರು.
ಉತ್ತರಾಖಂಡದ ಜೋಶಿಮಠ, ಆಸ್ಸಾಂ, ಸಿಕ್ಕಿಂ, ಮಿಜೋರಾಂ, ಚಂಡೀಗಡ ಸೇರಿ ದೇಶದ ವಿವಿಧೆಡೆ 22 ವರ್ಷ ಸೇವೆ ಸಲ್ಲಿಸಿರುವ ರಾಮನಗೌಡ ಈ ವರ್ಷದ ಏಪ್ರಿಲ್‌ನಲ್ಲಿ ಸೇವಾ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಮರಳುವ ಇರಾದೆ ಹೊಂದಿದ್ದರು.
ಆಸ್ಸಾಂ ಮತ್ತು ಸಿಕ್ಕಿಂ ನಡುವಿನ ಬಾಂಗ್ ಡೊಂಗ್ರ್ ಎಂಬಲ್ಲಿ ಹಿಮಪಾತದ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸುವಾಗ ರಕ್ತದೊತ್ತಡದಲ್ಲಿ ತೀವ್ರ ಏರುಪೇರಾಗಿ ಹೃದಯಾಘಾತವಾಗಿದೆ. ತಕ್ಷಣವೇ ಸಹದ್ಯೋಗಿಗಳು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಗ್ಗೆ ಯೋಧ ನಿಧನ ಹೊಂದಿದ್ದಾರೆ. ಫೆ.7ರಂದು ಪಾರ್ಥಿವ ಶರೀರ ಸ್ವಗ್ರಾಮಕ್ಕೆ ಆಗಮಿಸಲಿದ್ದು, ಅಂದೇ ಅಂತ್ಯಕ್ರಿಯೆ ನೆರವೇರಲಿದೆ ಎಂದು ತಹಸೀಲ್ದಾರ್ ಶ್ರೀಶೈಲ್ ತಳವಾರ ಹಾಗೂ ಯೋಧನ ಕುಟುಂಬಸ್ಥರು ‘ವಿಜಯವಾಣಿ’ಗೆ ಮಾಹಿತಿ ನೀಡಿದ್ದಾರೆ.