ಜಿಲ್ಲೆ

ರಾಮಮಂದಿರ ನಿರ್ಮಾಣಕ್ಕೆ 15ರಿಂದ ನಿಧಿ ಸಮರ್ಪಣಾ ಅಭಿಯಾನ : ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕ್ಷೇತ್ರ ಕಾರ್ಯವಾಹ ನಾ.ತಿಪ್ಪೇಸ್ವಾಮಿ

Ramanagara

ರಾಮನಗರ : ಅಯೋಧ್ಯೆ ಶ್ರೀ ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ಜ.15ರಿಂದ ಫೆ.5 ರವರೆಗೆ ನಡೆಯಲಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕ್ಷೇತ್ರ ಕಾರ್ಯವಾಹ ನಾ.ತಿಪ್ಪೇಸ್ವಾಮಿ ಹೇಳಿದರು.

ಗುರುವಾರ ಅಯೋಧ್ಯೆ ರಾಮಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ಜಿಲ್ಲಾ ಕಾರ್ಯಾಲಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ರಾಮಮಂದಿರಕ್ಕೆ ಭಾರತೀಯರೆಲ್ಲರೂ ನಿಧಿ ಸಮರ್ಪಿಸಲು ಅವಕಾಶ ಮಾಡಿಕೊಡಲಾಗಿದೆ. ಇದರ ಅಂಗವಾಗಿ ಕಚೇರಿ ಉದ್ಘಾಟನೆ ಮಾಡಲಾಗಿದೆ. ಪ್ರತಿ ಗ್ರಾಮದಲ್ಲಿ ನಿಧಿ ಸಮರ್ಪಣಾ ಅಭಿಯಾನ ನಡೆಯಲಿದೆ. ಮಂದಿರ ನಿರ್ಮಾಣದ ಮೂಲಕ ಸ್ವಾವಲಂಬಿ, ಸಶಕ್ತ, ಸಮೃದ್ಧ ರಾಷ್ಟ್ರ ನಿರ್ಮಾಣದ ಆಶಯವನ್ನು ಅಭಿಯಾನ ಹೊಂದಿದೆ. ಕನಿಷ್ಠ ಹತ್ತು ರೂಪಾಯಿಯಿಂದ ಎರಡು ಸಾವಿರದವರೆಗೆ ಕೂಪನ್ ಮೂಲಕ ಸಂದಾಯ ಮಾಡಬಹುದು. ಎರಡು ಸಾವಿರದಿಂದ ಇಪ್ಪತ್ತು ಸಾವಿರದವರೆಗಿನ ನಿಧಿಯನ್ನು ರಶೀದಿ ಪಡೆದು ಸಲ್ಲಿಸಬಹುದಾಗಿದೆ ಎಂದರು.

ಕನಕಪುರದ ಮರಳೇಗವಿ ಮಠದ ಶ್ರೀ ಡಾ.ಶಿವರುದ್ರ ಸ್ವಾಮೀಜಿ ಮಾತನಾಡಿ, ಮೊತ್ತ ಯಾವುದಾದರೂ ಸಮರ್ಪಣಾ ಭಾವದಿಂದ ನೀಡುವುದು ಮುಖ್ಯವಾಗಿದೆ. ಕೋಟ್ಯಂತರ ಸಾಮಾನ್ಯ ಜನರ ಸಂಕಲ್ಪ ಶಕ್ತಿಯಿಂದ ಮಂದಿರ ನಿರ್ಮಾಣ ಆಗುತ್ತಿದ್ದು ಅಭಿಯಾನದಲ್ಲಿ ಪಾಲ್ಗೊಂಡು ಕೃತಾರ್ಥರಾಗಲು ಉತ್ತಮ ಅವಕಾಶ ಎಂದು ಮಠದಿಂದ 25 ಸಾವಿರ ರೂ. ನಿಧಿ ಸಮರ್ಪಣೆ ಮಾಡಿದರು.

ಬೇವೂರು ಮಲ್ಲಿಕಾರ್ಜುನ ಸ್ವಾಮಿ ಮಠದ ಶ್ರೀ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯರಾದ ಸಿ.ಪಿ.ಯೋಗೇಶ್ವರ್ ಸೇರಿ ಜಿಲ್ಲೆಯ ವಿವಿಧ ಕ್ಷೇತ್ರಗಳ ಪ್ರಮುಖರು, ಕಾರ್ಯಕರ್ತರು ಭಾಗವಹಿಸಿದ್ದರು.