ಜಿಲ್ಲೆ

ಕಲ್ಪತರು ನಾಡಿನಲ್ಲಿ ರಾಮಮಂದಿರ ಸಂಭ್ರಮ ; ರಾಮನ ಹೆಸರಲ್ಲಿ ಮಠ, ಮಂದಿರಗಳಲ್ಲಿ ವಿಶೇಷ ಪೂಜೆ

Tumakuru

ತುಮಕೂರು : ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸುವ ಸುದಿನದಂದು ಕಲ್ಪತರು ನಾಡಿನೆಲ್ಲೆಡೆ ಸಂಭ್ರಮಾಚರಣೆ ಮನೆ ಮಾಡಿತ್ತು. ಮನೆ-ಮನಗಳಲ್ಲಿ ರಾಮನ ಹೆಸರಲ್ಲಿ ದೀಪ ಹಚ್ಚಿ ಪ್ರಾರ್ಥಿಸಿದರೆ, ಮಠ, ಮಂದಿರಗಳಲ್ಲಿ ರಾಮನ ಹೆಸರಲ್ಲಿ ರುದ್ರಾಭಿಷೇಕ, ವಿಶೇಷ ಪೂಜೆಗಳು, ರಾಮ ನಾಮ ಜಪ ಮೊಳಗಿದವು.

ಬುಧವಾರ ಅಭಿಜಿನ್ ಮುಹೂರ್ತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದು ಜಿಲ್ಲೆಯ ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ನಗರದ ಪ್ರಮುಖ ವೃತ್ತಗಳನ್ನು ತಳಿರು, ತೋರಣ, ಶ್ರೀರಾಮನ ಚಿತ್ರವುಳ್ಳ ಕೇಸರಿ ಬಾವುಟಗಳಿಂದ ಅಲಂಕೃತಗೊಳಿಸಲಾಗಿತ್ತು. ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸಂಭ್ರಮಾಚರಣೆ ಹಮ್ಮಿಕೊಳ್ಳಲಾಗಿತ್ತು. ವಿಎಚ್‌ಪಿ, ಬಜರಂಗದಳ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಗರದ ಕೆ.ಆರ್.ಬಡಾವಣೆಯ ಶ್ರೀರಾಮಮಂದಿರವನ್ನು ವಿಶೇಷವಾಗಿ ಅಲಂಕರಿಸಿ, ಪೂಜೆ ಸಲ್ಲಿಸಲಾಯಿತು.

ರುದ್ರಾಭಿಷೇಕ: ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣದ ಶಂಕುಸ್ಥಾಪನಾ ಮಹೂರ್ತದ ಹಿನ್ನೆಲೆಯಲ್ಲಿ ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಕುಣಿಗಲ್‌ತಾಲೂಕಿನ ಎಡೆಯೂರು ಸಿದ್ದಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ರುದ್ರಾಭಿಷೇಕ, ಏಕಾದಶರುದ್ರಾಭಿಷೇಕ ಹಾಗೂ ಅರ್ಚನೆ ಸೇವೆಗಳನ್ನು ನೆರವೇರಿಸಲಾಯಿತು. ದೇವರಾಯದುರ್ಗ ಶ್ರೀ ಲಕ್ಷ್ಮೀನರಸಿಂಹಸ್ವಾಮಿ, ಹಳೇವೂರು ಹುಲಿಯೂರಮ್ಮ ದೇವಸ್ಥಾನ , ಸಿದ್ಧರಬೆಟ್ಟ ಸಿದ್ದೇಶ್ವರಸ್ವಾಮಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಸಾರ್ಥಕ ಕ್ಷಣ: ರಾಮಮಂದಿರ ಬಿಜೆಪಿಯ ಜೀವಾಳವಾಗಿದೆ. 40 ವರ್ಷಗಳ ಕಾನೂನು ಸಂಘರ್ಷ ಹಾಗೂ 1992ರಲ್ಲಿ ಲಾಲ್‌ಕೃಷ್ಣ ಆಡ್ವಾಣಿ ಅವರ ರಾಮಯಾತ್ರೆ, 1992 ಡಿಸೆಂಬರ್ 6ರ ಬಾಬ್ರಿ ಮಸೀದಿ ದ್ವಂಸಗೊಳಿಸಿದ ಕರಸೇವಕರ ಹೋರಾಟ, ಹಲವು ರಾಮಭಕ್ತರ ಬಲಿದಾನ ಇಂದು ಸಾರ್ಥಕವಾಗುತ್ತಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್ ಹೇಳಿದರು. ಜಿಲ್ಲಾಧ್ಯಕ್ಷ ಬಿ.ಸುರೇಶ್‌ಗೌಡ, ಶಾಸಕ ಜಿ.ಬಿ.ಜ್ಯೋತಿಗಣೇಶ್, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಎಸ್.ಶಿವಪ್ರಸಾದ್, ಕಾರ್ಪೋರೇಟರ್ ಸಿ.ಎನ್.ರಮೇಶ್ ಇತರರಿದ್ದರು. ನಗರಪ್ರಧಾನಕಾರ್ಯದರ್ಶಿ ರಾಜೀವ್ ಕೆ. ನಿರೂಪಿಸಿದರು, ಗಣೇಶ್ ಜಿ ಪ್ರಸಾದ್ ವಂದಿಸಿದರು.

ಬಿಜೆಪಿ ಕಚೇರಿಯಲ್ಲಿ ಸಂಭ್ರಮ: ಶಿಲಾನ್ಯಾಸದ ಕಾರ್ಯಕ್ರಮವನ್ನು ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. 1992ರ ಅಯೋಧ್ಯೆಯ ಕರಸೇವೆಯಲ್ಲಿ ಭಾಗವಹಿಸಿದ್ದ ನಗರದ ಎಚ್.ಕೆ.ಶಿವಣ್ಣ ಅವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, 1992ರ ಡಿಸೆಂಬರ್ 6 ರಂದು ಬಾಬ್ರಿ ಮಸೀದಿ ಕೆಡವಿದ ಸಂದರ್ಭದಲ್ಲಿ ಅಲ್ಲಿಗೆ ತೆರಳಿದ್ದ ನಾನು

ಅದರ ಗುರುತಿಗಾಗಿ 4 ಇಟ್ಟಿಗೆಗಳನ್ನು ಅಲ್ಲಿಂದ ತಂದಿದ್ದು ಇಂದಿಗೂ ಅದನ್ನು ಇಟ್ಟಿರುವೆ. ಇವತ್ತು ಅದರ ಭೂಮಿ ಪೂಜೆ ಆಗುತ್ತಿರುವುದು

ತುಂಬಾ ಸಂತೋಷವಾಗಿದೆ ಎಂದರು.

ಎಡೆಯೂರಿನಲ್ಲಿ ವಿಶೇಷ ಪೂಜೆ: ಕುಣಿಗಲ್ ತಾಲೂಕಿನ ಎಡೆಯೂರು ಸಿದ್ದಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ರಾಮಮಂದಿರ ನಿರ್ಮಾಣದ ಶಂಕುಸ್ಥಾಪನೆ ಹಿನ್ನೆಲೆಯಲ್ಲಿ ರುದ್ರಾಭಿಷೇಕ, ಏಕಾದಶ ರುದ್ರಾಭಿಷೇಕ ಹಾಗೂ ಅರ್ಚನೆ ಸೇವೆಗಳನ್ನು ನೆರವೇರಿಸಲಾಯಿತು. ದೇವರಾಯದುರ್ಗ ಶ್ರೀಲಕ್ಷ್ಮೀನರಸಿಂಹಸ್ವಾಮಿ, ಹಳೇವೂರು ಹುಲಿಯೂರಮ್ಮ ದೇವಸ್ಥಾನ , ಸಿದ್ಧರಬೆಟ್ಟ ಸಿದ್ದೇಶ್ವರಸ್ವಾಮಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಇವತ್ತಿನ ಭೂಮಿ ಪೂಜೆಯ ಕಾರ್ಯ ಇಡೀ ದೇಶಕ್ಕೆ ಮಾತ್ರವಲ್ಲ, ವಿಶ್ವವೇ ಇದರ ಸಂಭ್ರಮದಲ್ಲಿ ಭಾಗಿಯಾಗಿದೆ. ಅಮೆರಿಕದ ನ್ಯೂಯಾರ್ಕ್‌ನ ಸಿಟಿಯಲ್ಲಿಯೂ ಈ ಸಂಭ್ರಮಾಚರಣೆ ಮಾಡುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ. ಜಿ.ಬಿ.ಜ್ಯೋತಿಗಣೇಶ್, ನಗರ ಶಾಸಕ ಸುಮಾರು 500 ವರ್ಷಗಳ ಕನಸು ನನಸಾಗುತ್ತಿದೆ. ಎಲ್ಲ ಕಾರ್ಯಕರ್ತರು ದೀಪಾವಳಿಗೂ ಮಿಗಿಲಾಗಿ ಹಬ್ಬವನ್ನಾಗಿ ಆಚರಿಸಬೇಕು. ರಾಷ್ಟ್ರ ನಿರ್ಮಾಣ ಕಾಯಕದಲ್ಲಿ ಬಿಜೆಪಿಗೆ ಹಾಗೂ ಪಕ್ಷದ ಕಾರ್ಯಕರ್ತರ ಮೇಲೆ ಪ್ರಭು ಶ್ರೀರಾಮಚಂದ್ರನ ಕೃಪೆ ಇರಲಿ. ಬಿ.ಸುರೇಶ್‌ಗೌಡ ಜಿಲ್ಲಾಧ್ಯಕ್ಷ