ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರ ಕಲ್ಯಾಣನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ವತಿಯಿಂದ ಪ್ರತಿ ವರ್ಷದಂತೆ ಶರನ್ನವರಾತ್ರಿ ಉತ್ಸವವನ್ನು ಸೆ. 21ರಿಂದ ಸಂಭ್ರಮದಿಂದ ಆಚರಿಸಲಾಗುವುದು ಎಂದು ಆಶ್ರಮದ ಅಧ್ಯಕ್ಷ ಸ್ವಾಮಿ ತೇಜಸಾನಂದ ಮಹಾರಾಜರು ತಿಳಿಸಿದರು.
ನಗರದ ಆಶ್ರಮದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಣನಗರ ರಂಗ ಮಂದಿರದಲ್ಲಿ ದೇವಿ ಪ್ರತಿಷ್ಠಾಪನೆ ಮೂಲಕ ಉತ್ಸವವು ಭಕ್ತಿ ಭಾವದಿಂದ ನಡೆಯಲಿದೆ. ಸೆ. 21ರಂದು ಸಂಜೆ 5ಕ್ಕೆ ಶ್ರೀ ರಂಭಾಪುರಿ ಕಲ್ಯಾಣ ಮಂಟಪದಿಂದ ಆಶ್ರಮದವರೆಗೆ ದೇವಿ ಮೂರ್ತಿ ಮೆರವಣಿಗೆ ನಡೆಯಲಿದೆ ಎಂದರು.
ಸೆ. 22ರಂದು ಬೆಳಗ್ಗೆ 9ಕ್ಕೆ ಶ್ರೀದುರ್ಗಾ ಪ್ರತಿಷ್ಠಾಪನೆ ನಂತರ ಗಣಹೋಮ, ನವಗ್ರಹ ಹೋಮ, ಶ್ರೀ ದುರ್ಗಾ ಹೋಮ, ಮಧ್ಯಾಹ್ನ ಮಹಾಮಂಗಳಾರತಿ, ಮಹಾಪ್ರಸಾದ ನಡೆಯಲಿದೆ. ಸಂಜೆ 5ಕ್ಕೆ ಲಲಿತಾ ಕುಂಕುಮಾರ್ಚನೆ, 6ಕ್ಕೆ ಕಾರ್ಯಕ್ರಮಗಳ ಉದ್ಘಾಟನೆಯನ್ನು ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ನೆರವೇರಿಸುವರು. ಪಾಲಿಕೆ ಸದಸ್ಯ ಉಮೇಶಗೌಡ ಕೌಜಗೇರಿ ಪಾಲ್ಗೊಳ್ಳುವರು ಎಂದರು.
ಸೆ. 23ರಿಂದ ನಿತ್ಯ ಬೆಳಗ್ಗೆ 11.15ಕ್ಕೆ ಪ್ರಹ್ಲಾದಾಚಾರ ಕಾತೋಟಿ ಅವರು ದೇವಿ ಮಹಾತ್ಮೆ ಕುರಿತು ಪ್ರವಚನ ನೀಡುವರು. ಬೆಳಗ್ಗೆಯಿಂದ ಹೋಮ, ಭಕ್ತಿ ಸಂಗೀತ, ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 6ಕ್ಕೆ ಅಂಧ ವಿದ್ಯಾರ್ಥಿಗಳಿಂದ ಮಲ್ಲಕಂಬ ಮತ್ತು ಯೋಗ ಪ್ರದರ್ಶನ ನಡೆಯಲಿದೆ.
ಸೆ. 24ರಂದು ಸಂಜೆ 6ಕ್ಕೆ ಅಂಗುಲಿಮಾಲ ದೊಡ್ಡಾಟವನ್ನು ಜನಪದ ಕಲಾ ಬಳಗ ಟ್ರಸ್ಟ್ ನವರು ನಡೆಸಿಕೊಡುವರು. ಹೀಗೆ ನಿತ್ಯವೂ ಒಂದೊಂದು ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂದುವರಿಯಲಿವೆ ಎಂದರು.
ಆಶ್ರಮವು ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುತ್ತ ಬಂದಿದ್ದು, ಈ ಬಾರಿಯೂ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕಲಾವಿದರು ತಮ್ಮ ಕಲೆ ಪ್ರದರ್ಶನ ಮಾಡಲಿದ್ದಾರೆ. ಯುವಕರಿಗೆ ಹಲವಾರು ವ್ಯಕ್ತಿತ್ವ ನಿರ್ಮಾಣ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಸದ್ಯ ಆಶ್ರಮದ ಕಟ್ಟಡ 30 ವರ್ಷಕ್ಕೂ ಹಳೆಯದಾಗಿದ್ದು, ಇದನ್ನು ಪುನರುಜ್ಜೀವನಗೊಳಿಸಿ ವಿದ್ಯಾರ್ಜನೆಗೆ ಬರುವವರಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಹೊಂದಲಾಗಿದೆ. ಮಹಾನವಮಿ ನಂತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು.
ಆಶ್ರಮದ ಶಾಖಾ ಕೇಂದ್ರ ತಡಸ ಬಳಿಯ ಕಮಲಾನಗರದಲ್ಲಿ ಪಂಚವಟಿ ಕ್ಷೇತ್ರ ಇದ್ದು, ಅಲ್ಲಿ ಸುಸಜ್ಜಿತ ಗೋಶಾಲೆ ನಡೆಸಲಾಗುತ್ತಿದೆ. ಇಲ್ಲಿ 45 ಹಸುಗಳನ್ನು ಪಾಲನೆ ಮಾಡಲಾಗುತ್ತಿದೆ ಎಂದರು.
ಧರ್ಮದರ್ಶಿಗಳಾದ ಸಂಭಾಜಿ ಕಲಾಲ, ಬಸವರಾಜ ಬಿಳೆಅಂಗಡಿ, ದಯಾನಂದರಾವ್, ಡಾ. ನಾಗಲಿಂಗ ಮುರಗಿ ಗೋಷ್ಠಿಯಲ್ಲಿದ್ದರು.