ಮಂಗಳೂರು: ಸ್ವಚ್ಛತೆ ನಿಜವಾದ ದೇವರ ಸೇವೆ. ಸ್ವಚ್ಛಾಂಜಲಿ ಕಾರ್ಯಕ್ರಮದ ಮೂಲಕ ಸಮಾಜಕ್ಕೆ ಈ ಸೇವೆ ಅರ್ಪಣೆಯಾಗಲಿ. ರಾಮಕೃಷ್ಣ ಮಠ ಮತ್ತು ಮಂಗಳೂರಿನ ಜನತೆಯ ನಡುವೆ ಉತ್ತಮ ಸಂಬಂಧ ಮುಂದುವರಿಯಲಿ ಇದನ್ನು ಉಳಿಸುವ ಪ್ರಯತ್ನ ನಮ್ಮಿಂದಾಗಲಿ ಎಂದು ನಿಟ್ಟೆ (ಪರಿಗಣಿಸಲ್ಪಟ್ಟ) ವಿಶ್ವವಿದ್ಯಾಲಯದ ಕುಲಾಧಿಪತಿ ಎನ್. ವಿನಯ ಹೆಗ್ಡೆ ಹೇಳಿದರು.
ಪ್ರಧಾನ ಮಂತ್ರಿ ಕರೆಯಂತೆ ಮಂಗಳೂರಿನ ರಾಮಕೃಷ್ಣ ಮಠದಲ್ಲಿ ನಡೆದ ಸ್ವಚ್ಛಾಂಜಲಿ - ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮದಲ್ಲಿ ಎರಡನೇ ಹಂತದ ಸ್ವಚ್ಛ ಮಂಗಳೂರು ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.
ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಸಾನಿಧ್ಯ ವಹಿಸಿದ್ದರು. ಸ್ವಚ್ಛಾಂಜಲಿಯ ಮೂಲಕ ಸ್ವಚ್ಛತೆಯ ಈ ಸೇವೆ, ಭಾರತ ಮಾತೆಗೆ ಹಾಗೂ ಸ್ವಚ್ಛತೆಯ ಕನಸು ಕಂಡ ಮಹಾತ್ಮಾ ಗಾಂಧೀಜಿಯವರಿಗೆ ಅರ್ಪಣೆಯಾಗಲಿ. ಜನರಲ್ಲಿ ಸ್ವಚ್ಛತೆಯ ಜಾಗೃತಿ ಮೂಡಿಸುವುದೇ ನಮ್ಮ ಮುಖ್ಯ ಉದ್ದೇಶ. ಎರಡನೇ ಆವೃತ್ತಿಯ ಸ್ವಚ್ಛ ಮಂಗಳೂರು ಅಭಿಯಾನದಲ್ಲಿ ಜನ ಜಾಗೃತಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ಶಾಸಕರಾದ ಡಿ.ವೇದವ್ಯಾಸ ಕಾಮತ್, ಪ್ರತಾಪ್ ಸಿಂಹ ನಾಯಕ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಗೌರವ ಅತಿಥಿಗಳಾಗಿದ್ದರು. ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಪಾಲಿಕೆಯ ಆಯುಕ್ತ ಆನಂದ್ ಹಾಗೂ ಕೆನರಾ ಬ್ಯಾಂಕ್ ಮಂಗಳೂರು ವೃತ್ತ ಕಚೇರಿಯ ಉಪಪ್ರಧಾನ ವ್ಯವಸ್ಥಾಪಕ ಸುಧಾಕರ ಕೊಟ್ಟಾರಿ ಉಪಸ್ಥಿತರಿದ್ದರು.
ಮೊದಲ ಬಾರಿಗೆ ಬೃಹತ್ ಪ್ಲಾಗ್ಗಿಂಗ್ : ಈ ಸಂದರ್ಭದಲ್ಲಿ ನಡೆದ ಬೃಹತ್ ಪ್ಲಾಗಿಂಗ್ ಅಭಿಯಾನವನ್ನು ಎಂ.ಆರ್.ಪಿ.ಎಲ್. ಸಂಸ್ಥೆಯ ಹೆಚ್.ಅರ್. ವಿಭಾಗದ ಪ್ರಧಾನ ವ್ಯವಸ್ಥಾಪಕರಾದ ಕೃಷ್ಣ ಹೆಗ್ಡೆ ಉದ್ಘಾಟಿಸಿದರು. ಪ್ಲಾಗಿಂಗ್ ಎಂಬ ವಿನೂತನ ಪ್ರಯೋಗವು ಮಂಗಳೂರಿನಲ್ಲಿ ಮೊತ್ತ ಮೊದಲ ಬಾರಿಗೆ ಯಶಸ್ವಿಯಾಗಿ ನಡೆಯಿತು. ಜಾಗಿಂಗ್ ನಡೆಸುತ್ತಾ ಕಸವನ್ನು ಹೆಕ್ಕುವ ಮೂಲಕ ಸ್ವಯಂಸೇವಕರು ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾದರು.
ಪ್ರಮುಖ ಸಂಘ ಸಂಸ್ಥೆಗಳು ಭಾಗಿ
ಎಂ. ಆರ್. ಪಿ. ಎಲ್., ಕೆನರಾ ಬ್ಯಾಂಕ್, ಶ್ರೀರಾಮ್ ಟ್ರಾನ್ಸ್‌ಪೋರ್ಟ್, ಶ್ರೀನಿವಾಸ ಫೈನಾನ್ಸ್, ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಹಲವಾರು ಸಂಸ್ಥೆಯ ಉದ್ಯೋಗಿಗಳು ನಿಟ್ಟೆ ವಿಶ್ವವಿದ್ಯಾಲಯ, ಶ್ರೀನಿವಾಸ ವಿಶ್ವವಿದ್ಯಾಲಯ, ಸಹ್ಯಾದ್ರಿ ವಿದ್ಯಾಸಂಸ್ಥೆ, ಕೆನರಾ ಕಾಲೇಜು, ಎಸ್.ಡಿ.ಎಂ. ವ್ಯವಹಾರ ಅಧ್ಯಯನ ಕಾಲೇಜು, ಎಸ್.ಡಿ.ಎಂ. ಸ್ನಾತಕೋತ್ತರ ಅಧ್ಯಯನ ಕಾಲೇಜು, ಮೂಡುಬಿದಿರೆ ಆಳ್ವಾಸ್ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 800 ಕ್ಕೂ ಹೆಚ್ಚು ಸ್ವಯಂಸೇವಕರು ಈ ಶ್ರಮದಾನದಲ್ಲಿ ಭಾಗವಹಿಸಿದರು.