ರಂಜಾನ್ ಸಂಭ್ರಮ, ಸಾಮೂಹಿಕ ಪ್ರಾರ್ಥನೆ
ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ಸಾಮೂಹಿಕ ಪ್ರಾರ್ಥನೆ, ಅತಿಥಿಗಳ ಸತ್ಕಾರ ಸೇರಿ ವಿವಿಧ ಧಾರ್ಮಿಕ ಚಟುವಟಿಕೆಯೊಂದಿಗೆ ಮುಸ್ಲಿಂ ಬಾಂಧವರು ಸೋಮವಾರ ರಂಜಾನ್ ಹಬ್ಬವನ್ನು ಆಚರಿಸಿದ್ದು ಚುನಾವಣಾ ಸಂದರ್ಭದಲ್ಲಿ ಆಹ್ವಾನವಿಲ್ಲದ್ದರೂ ಹಾಜರಾಗುತ್ತಿದ್ದ ಬಹುತೇಕ ರಾಜಕೀಯ ನಾಯಕರು ದೂರವಿರುವ ಮೂಲಕ ಪ್ರದರ್ಶಿಸಿದ ಧೋರಣೆಯು ಚರ್ಚೆಗೆಗ್ರಾಸವಾಯಿತು.
ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರದ ಬಿ.ಬಿ.ರಸ್ತೆಯಲ್ಲಿನ ಮಸೀದಿಯಿಂದ ಮೆರವಣಿಗೆ ಆರಂಭಿಸಿದ ಸಾವಿರಾರು ಮುಸ್ಲಿಮರು ಪ್ರಮುಖ ರಸ್ತೆಗಳಲ್ಲಿ ಕಾಲ್ನಡಿಗೆ ಮೂಲಕ ಈದ್ಗಾ ಮೈದಾನಕ್ಕೆ ಆಗಮಿಸಿದರು. ಮೌಲ್ವಿಗಳ ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಪರಸ್ಪರ ಅಪ್ಪಿಕೊಂಡು ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ನಗರಸಭಾ ಉಪಾಧ್ಯಕ್ಷ ಜೆ.ನಾಗರಾಜ್ ಮತ್ತಿತರರು ಇದ್ದರು.
*ಬೇಸಿಗೆ ಹಿನ್ನೆಲೆಯಲ್ಲಿ ವ್ಯವಸ್ಥೆ
ಬೇಸಿಗೆಯ ಬಿಸಿಲಿನ ಬೇಗೆ ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಾರ್ಥನೆಗೆ ಶಾಮೀಯಾನ, ನೆಲಹಾಸು ಬಟ್ಟೆ ಹಾಕಲಾಗಿತ್ತು. ನಗರಸಭಾ ವತಿಯಿಂದ ಬೆಳಿಗ್ಗೆಯೇ ಸ್ವಚ್ಛತಾ ಕಾರ್ಯಕ್ರಮ ಕೈಗೊಳ್ಳಲಾಯಿತು.
ನಗರದ ಮಸೀದಿ ಹಾಗೂ ಈದ್ಗಾ ಮೈದಾನ, ಜಾಮಿಯಾ ಮಸೀದಿ, ಮಸ್ಜಿದ್ ಖುರ್ದು, ಮಸ್ಜಿದ್ ನೂರಾನಿ, ಮಸ್ಜಿದ್ ಹುಸೇನಿಯಾ, ಮಸ್ಜಿದ್ ರಜಿಯಾ, ಮಸ್ಜಿದ್ ಅಕ್ಸಗಳಲ್ಲಿ ಪ್ರತ್ಯೇಕವಾಗಿ ಪ್ರಾರ್ಥನೆ ಸಲ್ಲಿಸಲಾಯಿತು.
*ಹಲವರ ಗೈರು
ಪ್ರತಿ ವರ್ಷ ರಂಜಾನ್ ಹಬ್ಬದ ಸಾಮೂಹಿಕ ಪ್ರಾರ್ಥನೆಯಲ್ಲಿ ಸಂಸದರು, ಮಾಜಿ ಸಂಸದರು, ಶಾಸಕರು, ಮಾಜಿ ಶಾಸಕರು, ವಿವಿಧ ಪಕ್ಷಗಳ ಮುಖಂಡರು, ಸಮಾಜ ಸೇವಕರು ಸೇರಿ ಹಲವರು ಪ್ರಾರ್ಥನೆಯಲ್ಲಿ ಭಾಗವಹಿಸುವ ಮೂಲಕ ಸೌಹಾರ್ದತೆ ಮೆರೆಯುವಂತಹುದು ಸಾಮಾನ್ಯ. ಅದರಲ್ಲೂ ಚುನಾವಣೆಯ ಸಂದರ್ಭದಲ್ಲಿ ಮಾತ್ರ ಈದ್ಗಾ ಮೈದಾನದಲ್ಲಿ ಹೆಚ್ಚಿನ ಸಮಯ ಕಾಲ ಕಳೆದು, ಶುಭಾಶಯ ಕೋರುವುದರಲ್ಲಿ ಗಮನ ಸೆಳೆಯುತ್ತಾರೆ. ಇದರಲ್ಲಿ ಕಳೆದ 2023 ವಿಧಾನಸಭಾ ಚುನಾವಣೆ, 2024 ಲೋಕಸಭಾ ಚುನಾವಣೆಯಲ್ಲಿ ಪೈಪೋಟಿ ಇತ್ತು. ಆದರೆ, ಈ ಬಾರಿ ಹಲವು ನಾಯಕರು ಮಾತ್ರ ಗೈರಾಗಿದ್ದು ಚರ್ಚೆಗ್ರಾಸವಾಯಿತು.
*ಬಂದೋಬಸ್ತ್
ಸಾಮೂಹಿಕ ಪ್ರಾರ್ಥನೆ ಹಿನ್ನೆಲೆಯಲ್ಲಿ ನಗರದ ಪ್ರಶಾಂತನಗರದ ದಿನ್ನೇಹೊಸಹಳ್ಳಿ ರಸ್ತೆ ಜನರಿಂದ ತುಂಬಿ ತುಳುಕಾಡುತ್ತಿತ್ತು. ಅನೇಕ ಮುಸ್ಲಿಮರು ಈದ್ಗಾ ಮೈದಾನದ ಸುತ್ತಲು ಇರುವ ಬಡವರಿಗೆ ಹಬ್ಬದ ಅಂಗವಾಗಿ ದಾನ ನೀಡುವ ಮೂಲಕ ಗಮನ ಸೆಳೆದರು. ಬಂಧು ಬಳಗ, ಗೆಳೆಯರನ್ನು ಮನೆಗೆ ಕರೆದು ಅತಿಥ್ಯ ನೀಡಿದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಗಿ ಬಂದೋ ಬಸ್ತ್ ಕೈಗೊಂಡಿದ್ದರು.