ಜಿಲ್ಲೆ

ರಾಮ ನಮ್ಮೆಲ್ಲರ ಆದರ್ಶ ಪುರುಷ

ಮೈಸೂರು: ಪ್ರಜೆಗಳ ಪ್ರೀತಿಯ ರಾಜನಾಗಿ, ಸೀತೆಯ ಅರಸನಾಗಿ, ಶತ್ರುಗಳಿಗೆ ಭಯಂಕರನಾಗಿ, ನಂಬಿದವರನ್ನು ಕೈ ಬಿಡದ ಪ್ರಾಮಾಣಿಕ ಯೋಧನಾಗಿ, ಹಲವು ಮುಖಗಳಿಂದ ರಾಮ ನಮ್ಮೆಲ್ಲರ ಆದರ್ಶ ಪುರುಷನಾಗಿದ್ದಾನೆ ಎಂದು ಮೈವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ತಿಳಿಸಿದರು.

ಮೈವಿವಿಯ ಪ್ರಾಚ್ಯವಿದ್ಯಾ ಸಂಶೋಧನಾಲಯ (ಒಆರ್‌ಐ) ವತಿಯಿಂದ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಸೆಮಿನಾರ್ ಹಾಲ್‌ನಲ್ಲಿ ಶನಿವಾರ ಆಯೋಜಿಸಿದ್ದ ‘ಶ್ರೀಮದ್ರಾಮಾಯಣ ಚಿಂತನಮ್’ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಮಾಯಣದ ಕಥೆಗಳನ್ನು ಕೇಳುತ್ತಾ ಹೋದರೆ ಮನಸ್ಸಿಗೆ ಸಂತಸ ಉಂಟಾಗುತ್ತದೆ ಎಂದರು.

ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆ ಕೇವಲ ಸಾಂಕೇತಿಕ. ಅದಕ್ಕೆ ನಿಜವಾದ ಅರ್ಥ ಸಿಗುವುದು ರಾಮಾಯಣದ ರಾಮನ ಮೌಲ್ಯಗಳು ನಮ್ಮ ಜೀವನದ ಭಾಗವಾದಾಗ ಮಾತ್ರ. ಮನುಷ್ಯರ ನಡುವೆ ಮಾನವೀಯ ಮೌಲ್ಯಗಳ ಸಂಬಂಧವನ್ನು ಗಟ್ಟಿ ಮಾಡಿ, ಎಲ್ಲ ವರ್ಗದ ಜನರಿಗೂ ಮನಮುಟ್ಟುವಂತೆ ಜೀವಂತ ದೃಷ್ಟಾಂತವನ್ನು ನಿರೂಪಿಸಿದ ಪ್ರಪಂಚದ ಮೇರು ಕೃತಿ ರಾಮಾಯಣ. ಹತ್ತಾರು ಸಾವಿರ ವರ್ಷಗಳು ಕಳೆದರೂ, ರಾಮಾಯಣ ಅಂದಿಗೂ, ಇಂದಿಗೂ ಎಂದೆಂದಿಗೂ ಪ್ರಸ್ತುತ ಎಂದರು.

ಸೋಸಲೆ ಶ್ರೀ ವ್ಯಾಸರಾಜ ಮಠದ ಪೀಠಾಪತಿ 108ನೇ ಶ್ರೀ ವಿದ್ಯಾಶ್ರೀಶತೀರ್ಥ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಪ್ರೊ.ನಾರಾಯಣ ಪೂಜಾರ್, ಡಾ.ಎಚ್.ವಿ.ನಾಗರಾಜರಾವ್, ಡಾ.ಎನ್.ರಾಮಕೃಷ್ಣಾಚಾರ್ಯ, ರೋಹಿತ್ ಚಕ್ರತೀರ್ಥ ಅವರು ‘ಶ್ರೀಮದ್ರಾಮಾಯಣ ಚಿಂತನಮ್’ ವಿಷಯ ಕುರಿತು ವಿಚಾರ ಮಂಡಿಸಿದರು.

ಪ್ರಾಚ್ಯವಿದ್ಯಾ ಸಂಶೋಧನಾಲಯ ನಿರ್ದೇಶಕ ಡಾ.ಡಿ.ಪಿ.ಮಧುಸೂದನಾಚಾರ್ಯ, ಉಪನಿರ್ದೇಶಕಿ ಪಾರ್ವತಿ, ನಿವೃತ್ತ ಉಪನಿರ್ದೇಶಕ ಡಾ.ಟಿ.ವಿ.ಸತ್ಯನಾರಾಯಣ, ವಿದ್ವಾನ್ ಎನ್.ವಿ.ಸುಮುಖ ಇತರರು ಇದ್ದರು.