ಜಿಲ್ಲೆ

ಮೈಸೂರಿನ ಶಿಲ್ಪಿ ಅರುಣ್ ಕೆತ್ತಿದ ರಾಮನೇ ಅಂತಿಮ

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ ರಾಮಲಲ್ಲಾ ಮೂರ್ತಿಯೇ ಅಯೋಧ್ಯೆಯ ರಾಮಮಂದಿರದಲ್ಲಿ ಜ. 22ರಂದು ಪ್ರತಿಷ್ಠಾಪನೆಗೊಳ್ಳುವುದು ಖಚಿತವಾಗಿದ್ದು, ಇದು ಸಾಂಸ್ಕೃತಿಕ ನಗರಿಗೆ ಹಿರಿಮೆ-ಗರಿಮೆಯಾಗಿದೆ.

ಅರುಣ್ ಯೋಗಿರಾಜ್ ಅವರು ಕೆತ್ತಿರುವ ಮೂರ್ತಿಯೇ ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿದೆ ಎಂಬ ಸುದ್ದಿ ಈ ಮೊದಲೇ ಹರಡಿತ್ತು. ಬಳಿಕ ಅದು ಖಚಿತವಾಗಿರಲಿಲ್ಲ. ಸೋಮವಾರ ಈ ವಿಷಯವನ್ನು ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ದೃಢಪಡಿಸಿದೆ.

ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ನಿರ್ಮಿಸಿರುವ ರಾಮನಮೂರ್ತಿ ಆಯ್ಕೆ ಎಂದು ಘೋಷಿಸಲಾಗಿದೆ. ಇದು ರಾಜ್ಯ ಹಾಗೂ ಸಾಂಸ್ಕೃತಿಕ ನಗರಿಯ ಜನರಲ್ಲಿ ಸಂತಸ ಮೂಡಿಸಿದೆ. ಅರುಣ್ ಯೋಗಿರಾಜ್ ಕುಟುಂಬದವರಿಗೂ ಆನಂದ ಉಂಟುಮಾಡಿದೆ.

5 ವರ್ಷದ ಬಾಲಕನ ಪ್ರತಿರೂಪದಂತೆ ಶ್ರೀರಾಮನ ಮೂರ್ತಿ ಸಿದ್ಧಪಡಿಸಲು ಮೂವರು ಶಿಲ್ಪಿಗಳನ್ನು ಆಯ್ಕೆ ಮಾಡಲಾಗಿತ್ತು. ಮೈಸೂರಿನ ಅರುಣ್ ಯೋಗಿರಾಜ್, ಬೆಂಗಳೂರಿನ ಜಿ.ಎಲ್.ಭಟ್ ಮತ್ತು ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಅವರು ಏಕಕಾಲದಲ್ಲಿ ಮೂರ್ತಿ ಕೆತ್ತನೆಯಲ್ಲಿ ತೊಡಗಿದ್ದರು. ತಿಂಗಳುಗಟ್ಟಲೆ ಶ್ರಮವಹಿಸಿದ ಈ ಕಲಾವಿದರ ಕೈಚಳಕದಲ್ಲಿ ಮೂರ್ತಿಗಳು ಅರಳಿವೆ.

ಇವುಗಳಲ್ಲಿ ಒಂದನ್ನು ಆಯ್ಕೆ ಮಾಡುವ ಸವಾಲಿನ ಕೆಲಸ ಟ್ರಸ್ಟ್‌ನ ಎದುರು ಇತ್ತು. ಮೂರ್ತಿ ಬಳಕೆ, ಕೆತ್ತಿರುವ ಕಲ್ಲಿನ ಗುಣಮಟ್ಟ ಸೇರಿದಂತೆ ಇನ್ನಿತರ ಮಾನದಂಡಗಳನ್ನು ಆಧರಿಸಿ ಅರುಣ್ ಯೋಗಿರಾಜ್ ಕೆತ್ತಿರುವ ವಿಗ್ರಹವನ್ನು ಅಂತಿಮಗೊಳಿಸಲಾಗಿದೆ.

ಕೃಷ್ಣಶಿಲೆ ಬಳಕೆ


ಮೈಸೂರು ಜಿಲ್ಲೆಯ ಕೃಷ್ಣಶಿಲೆಯಲ್ಲಿ ಈ ರಾಮನ ಮೂರ್ತಿ ಅರಳಿದೆ. ಇದುವೇ ಮತ್ತೊಂದು ವಿಶೇಷ. ಈ ಕಲ್ಲು ಬಳಸಿಕೊಂಡು ರಾಮಲಲ್ಲಾ ಮೂರ್ತಿ ಕೆತ್ತನೆ ಮಾಡಲು ಅರುಣ್ ಅವರು ಆರು ತಿಂಗಳು ಸಮಯ ತೆಗೆದುಕೊಂಡಿದ್ದಾರೆ. ‘ಕಠಿಣ ಶ್ರಮವಹಿಸಿ ಮೂರ್ತಿಗೆ ಅಂತಿಮ ರೂಪ ನೀಡಲಾಗಿದೆ. ಬಿಲ್ಲು ಮತ್ತು ಬಾಣವನ್ನು ಹಿಡಿದಿರುವ ಬಾಲಕನಂತೆ ಗೋಚರವಾಗುವ ಶ್ರೀರಾಮನ ಮೂರ್ತಿ ಇದಾಗಿದೆ.

ಇದು 8 ಅಡಿ ಎತ್ತರ, ಮೂರೂವರೆ ಅಡಿ ಅಗಲ ಇದೆ. 5 ವರ್ಷದ ಬಾಲಕನ ದೇಹ ಸ್ವರೂಪ, ಶ್ರೀರಾಮನ ದೈವಿಕತೆಯನ್ನು ಕಣ್ಣಿನಲ್ಲಿ ತುಂಬಿಕೊಂಡು ಈ ಮೂರ್ತಿಯನ್ನು ಕೆತ್ತನೆ ಮಾಡಿದ್ದೇನೆ ಎಂದು ಶಿಲ್ಪಿ ಅರುಣ್ ತಿಳಿಸಿದ್ದಾರೆ.


ಜ. 22ರಂದು ನಡೆಯುವ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಸಮಾರಂಭಕ್ಕೆ ಆಹ್ವಾನ ಪಡೆದ 2000 ಗಣ್ಯರ ಪೈಕಿ ಅರುಣ್ ಅವರಿಗೂ ಆಹ್ವಾನ ಬಂದಿದೆ.

ಹೆಸರು ತಂದುಕೊಟ್ಟ ಶಂಕರಾಚಾರ್ಯರ ಪ್ರತಿಮೆ


ಈ ಹಿಂದೆಯೇ ಅನೇಕ ಪ್ರತಿಷ್ಠಿತ ಪ್ರತಿಮೆಗಳನ್ನು ರಚನೆ ಮಾಡಿ ಅರುಣ್ ಯೋಗಿರಾಜ್ ಸೈ ಎನಿಸಿಕೊಂಡಿದ್ದಾರೆ. ದೆಹಲಿಯಲ್ಲಿರುವ ಸುಭಾಷ್ ಚಂದ್ರಬೋಸರ ಪ್ರತಿಮೆ, ಉತ್ತರಾಖಂಡದ ಕೇದಾರನಾಥದಲ್ಲಿ ಶಂಕರಾಚಾರ್ಯರ ಪ್ರತಿಮೆ ಮಾಡಿ ರಾಷ್ಟ್ರದ ಗಮನ ಸೆಳೆದಿದ್ದರು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದರು. ಮೋದಿ ಅನಾವರಣಗೊಳಿಸಿದ ಆದಿ ಶಂಕರಾಚಾರ್ಯರ ಪ್ರತಿಮೆ ಕೆತ್ತಿದ ನಂತರ ಅರುಣ್ ಅವರು ದೇಶಾದ್ಯಂತ ಹೆಸರುವಾಸಿಯಾದರು.

ಓದಿದ್ದು ಎಂಬಿಎ, ಆಯ್ದುಕೊಂಡಿದ್ದು ಶಿಲ್ಪ ಕೆತ್ತನೆ:


ಅರುಣ್ ಯೋಗಿರಾಜ್ ಎಂಬಿಎ ಪದವೀಧರರು. ಓದು ಮುಗಿದ ಬಳಿಕ ಖಾಸಗಿ ಕಂಪನಿಗೆ ಕೆಲಸಕ್ಕೂ ಸೇರಿಕೊಂಡರು. ಅದು ಅವರಿಗೆ ಹಿಡಿಸಲಿಲ್ಲ. ಹೀಗಾಗಿ, ಶಿಲ್ಪ ಕೆತ್ತನೆಯತ್ತ ಆಕರ್ಷಿತಗೊಂಡರು. ಕಲ್ಲಿಗೆ ಮೂರ್ತಿ ರೂಪ ನೀಡಿ ತಮ್ಮ ಉಜ್ವಲ ಜೀವನವನ್ನು ಕೆತ್ತಿಕೊಂಡರು.


ಅರುಣ್ ಅವರದು ಶಿಲ್ಪಕಾರರ ಕುಟುಂಬ. ಅವರ ತಂದೆ ಯೋಗಿರಾಜ್ ಮತ್ತು ಅಜ್ಜ ಬಸವಣ್ಣ ಕೂಡ ಶಿಲ್ಪಿಗಳು. ತಲೆಮಾರುಗಳಿಂದ ಶಿಲ್ಪ ಕೆತ್ತನೆ ಕಲೆಯಲ್ಲಿ ಇಡೀ ಕುಟುಂಬ ಸಕ್ರಿಯವಾಗಿದೆ. ಇವರು ಶಿಲ್ಪ ಕಲಾಕೃತಿಯ 5ನೇ ತಲೆಮಾರಿನವರು.


ಮೈಸೂರಿನ ಬ್ರಹ್ಮಶ್ರೀ ಕಶ್ಯಪ ಶಿಲ್ಪಕಲಾನಿಕೇತನದ ಅರುಣ್, 14 ವರ್ಷಗಳಿಂದ ಶಿಲ್ಪ ಕೆತ್ತನೆ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ತಂದೆಯ ಶಿಲ್ಪಕಲೆಯಿಂದ ಇವರು ಈ ಕಲೆಯತ್ತ ಬಂದರು. ರಾಮಕೃಷ್ಣ ಪರಮಹಂಸ, ಸರ್ ಎಂ.ವಿಶ್ವೇಶ್ವರಯ್ಯ, ಡಾ.ಬಿ.ಆರ್.ಅಂಬೇಡ್ಕರ್, ಜಯಚಾಮರಾಜ ಒಡೆಯರ್, ಶ್ರೀ ಶಿವಕುಮಾರ ಸ್ವಾಮೀಜಿ, ಹನುಮಂತ ಸೇರಿದಂತೆ ಅನೇಕ ಪ್ರತಿಮೆಗಳನ್ನು ಕೆತ್ತನೆ ಮಾಡಿದ್ದಾರೆ.

ಕುಟುಂಬದಲ್ಲೂ ಸಂತಸದ ಸಿಹಿ:


ಅರುಣ್ ಸಿದ್ಧಪಡಿಸಿದ ಮೂರ್ತಿ ಆಯ್ಕೆ ಖಚಿತವಾಗುತ್ತಿದ್ದಂತೆ ಅವರ ಕುಟುಂಬದಲ್ಲಿ ಸಂಭ್ರಮ ಮೇಳೈಸಿದೆ. ತಾಯಿ ಸರಸ್ವತಿ, ಪತ್ನಿ ವಿಜೇತಾ ಎಂ.ರಾವ್, ಮಗಳು ಸಾನ್ವಿ, ಸಹೋದರ ಸೂರ್ಯಪ್ರಕಾಶ್ ಅವರು ಸಂತಸಗೊಂಡಿದ್ದು, ಇವರಿಗೆ ಬಂಧುಗಳು, ಸಾರ್ವಜನಿಕರು ಅಭಿನಂದನೆ ಸಲ್ಲಿಸುತ್ತಿದ್ದಾರೆ.