ಹುಬ್ಬಳ್ಳಿ : ಅಯೋಧ್ಯೆಯ ರಾಮಮಂದಿರದಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಯಾಗಿ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ನೃಪತುಂಗ ಬೆಟ್ಟ ಬಳಿಯ ಪಿರಮಿಡ್ ಧ್ಯಾನ ಮಂದಿರದಲ್ಲಿ ಜ. 11ರಂದು ಸಂಜೆ 6 ಗಂಟೆಗೆ ರಾಮ ಮಂದಿರದ ಮಾದರಿ ಪ್ರದರ್ಶನದ ಉದ್ಘಾಟನೆ ನೆರವೇರಲಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಪಿರಾಮಿಡ್ ಮಾಸ್ಟರ್ ವಿಶಾಲಾಕ್ಷಿ ಆಕಳವಾಡಿ, ರಾಮಮಂದಿರ ಮಾದರಿಯನ್ನು ಜ. 16ರವರೆಗೆ ಸಾರ್ವಜನಿಕರು ವೀಕ್ಷಿಸಬಹುದಾಗಿದೆ ಎಂದರು.
ಉದ್ಘಾಟನೆ ಸಮಾರಂಭದ ಸಾನ್ನಿಧ್ಯವನ್ನು ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ವಹಿಸುವರು. ನಿರಾಮಯ ಫೌಂಡೇಷನ್ ಸಂಸ್ಥಾಪಕ ಡಾ. ಮಲ್ಲಿಕಾರ್ಜುನ ಬಾಳಿಕಾಯಿ, ಕನಕದಾಸ ಶಿಕ್ಷಣ ಸಂಸ್ಥೆ ಪ್ರಾಚಾರ್ಯ ಸಂದೀಪ ಬೂದಿಹಾಳ ಅತಿಥಿಗಳಾಗಿ ಭಾಗವಹಿಸುವರು ಎಂದು ತಿಳಿಸಿದರು.
ಹುಣ್ಣಿಮೆ ಅಂಗವಾಗಿ ಅಂದು ಸಂಜೆ 4 ರಿಂದ 6 ಗಂಟೆಯವರೆಗೆ ಉಚಿತ ಸಾಮೂಹಿಕ ಧ್ಯಾನವನ್ನೂ ಆಯೋಜಿಸಲಾಗಿದೆ ಎಂದರು.
ವಿನಯರಾಮ ಗುರೂಜಿ ಮಾತನಾಡಿ, ರಾಮ ಮಂದಿರದ ಮಾದರಿಯು 15 ಅಡಿ ಉದ್ದ ಹಾಗೂ ಅಗಲ ಇದ್ದು, 10 ಅಡಿ ಎತ್ತರ ಇದೆ. ರಾಜ್ಯದ ವಿವಿಧ 108 ಸ್ಥಳಗಳಲ್ಲಿ ಪ್ರದರ್ಶಿಸುವ ಸಂಕಲ್ಪ ಮಾಡಲಾಗಿದೆ. ಹುಬ್ಬಳ್ಳಿಯದ್ದು 76ನೇ ಪ್ರದರ್ಶನ ಇದಾಗಿದೆ ಎಂದು ಹೇಳಿದರು.
ಚನ್ನು ಹೊಸಮನಿ, ಬಸವರಾಜ ಹೊಸಮನಿ, ಜೀವನ ವಸ್ತ್ರದ, ನಿಲಂಕಠ ಆಕಳವಾಡಿ ಸುದ್ದಿಗೋಷ್ಠಿಯಲ್ಲಿ ಇದ್ದರು.