ಜಿಲ್ಲೆ

ವಾಟ್ಸ್​ಆ್ಯಪ್​ನಲ್ಲಿ ಪಕ್ಷದ ಚಿಹ್ನೆ ಬಳಸಿ ರಾಮನವಮಿ ಶುಭಾಶಯ: ಕಾಂಗ್ರೆಸ್​ ನಾಯಕರಿಗೆ ನೋಟಿಸ್​ ಜಾರಿ

ಮಡಿಕೇರಿ: ಕೊಡಗಿನಲ್ಲಿ ಇಬ್ಬರು ರಾಜಕೀಯ ಮುಖಂಡರಿಗೆ ಚುನಾವಣಾ ನೀತಿ‌ ಸಂಹಿತೆ ಉಲ್ಲಂಘನೆಯ ಬಿಸಿ ಮುಟ್ಟಿದೆ. ಕಾಂಗ್ರೆಸ್ ಯುವ ಮುಖಂಡ ಡಾ.ಮಂತರ್ ಗೌಡ ಮತ್ತು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ಅವರಿಗೆ‌ ಕಾರಣ ಕೇಳಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಗುರುವಾರ ನೋಟಿಸ್​ ಜಾರಿ ಮಾಡಿದ್ದಾರೆ.

ಮಂತರ್ ಗೌಡ ಅವರು ವಾಟ್ಸ್​ಆ್ಯಪ್​ ಮೂಲಕ ಹಲವು ಗ್ರೂಪ್‌ಗಳ ಸಂಭಾಷಣೆಯಲ್ಲಿ ಯಾವುದೇ ಪೂರ್ವ ಅನುಮತಿ ಪಡೆಯದೇ ರಾಜಕೀಯ ಪಕ್ಷದ ಚಿಹ್ನೆಯನ್ನು ಬಳಸಿ ನಾಡಿನ ಸಮಸ್ತ ಜನತೆಗೆ ರಾಮನವಮಿ ಹಬ್ಬದ ಶುಭಾಶಯ ಕೋರಿ ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಮಾಡಿರುವ ಆರೋಪ‌ ಎದುರಿಸುತ್ತಿದ್ದಾರೆ.

ವಿ.ಪಿ ಶಶಿಧರ್ ಅವರು ಅಡ್ಮಿನ್ ಆಗಿರುವ ವಾಟ್ಸ್​ಆ್ಯಪ್​ ಗ್ರೂಪ್‌ ಒಂದರ ಮೂಲಕ ಯಾವುದೇ ಪೂರ್ವ ಅನುಮತಿ ಪಡೆಯದೇ ರಾಜಕೀಯ ಪ್ರೇರಿತ ಹೇಳಿಕೆಯ ವಿಡಿಯೋ ತುಣುಕನ್ನು ಹಂಚಿಕೊಳ್ಳುವ ಮೂಲಕ ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಆರೋಪ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿರುವ ಬಗ್ಗೆ ನಿಮ್ಮ ಮೇಲೆ ಏಕೆ ಮುಂದಿನ ಕಾನೂನು ಕ್ರಮ ಜರುಗಿಸಬಾರದು ಎಂದು ಕೇಳಿ 24 ಗಂಟೆಯೊಳಗಾಗಿ ಖುದ್ದು ಲಿಖಿತ ಸಮಜಾಯಿಷಿಕೆಯನ್ನು ನೀಡಲು ಸೂಚಿಸಲಾಗಿದೆ. ತಪ್ಪಿದಲ್ಲಿ ನಿಮ್ಮ ಸಮಜಾಯಿಷಿ ಏನು ಇಲ್ಲವೆಂದು ಪರಿಗಣಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.