ಹಾವೇರಿ: ಕೇಂದ್ರ ಸರ್ಕಾರ ಜಾರಿಗೊಳಿಸಿದ ಕೃಷಿ ಕಾಯ್ದೆ ವಿರೋಧಿಸಿ ದೆಹಲಿ ಹಾಗೂ ಬೆಂಗಳೂರಿನಲ್ಲಿ ಹಮ್ಮಿಕೊಂಡ ಟ್ರ್ಯಾಕ್ಟರ್ ಪರೇಡ್ಗೆ ಬೆಂಬಲ ಸೂಚಿಸಿ ಜಿಲ್ಲೆಯ ವಿವಿಧ ರೈತಪರ ಸಂಘಟನೆಗಳ ವತಿಯಿಂದ ಮಂಗಳವಾರ ನಗರದಲ್ಲಿ ಟ್ರ್ಯಾಕ್ಟರ್ ಪರೇಡ್ ನಡೆಸಲಾಯಿತು.
ನಗರದ ಕಾಗಿನೆಲೆ ವೃತ್ತದಿಂದ ಆರಂಭಗೊಂಡ ಟ್ರ್ಯಾಕ್ಟರ್ ರ್ಯಾಲಿಯೂ ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಿತು. ರೈತರು ಹೊಸಮನಿ ಸಿದ್ದಪ್ಪ ವೃತ್ತಕ್ಕೆ ಬಂದು ಕೆಲಕಾಲ ರಸ್ತೆ ಸಂಚಾರ ಬಂದ್ ಮಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೊಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಗುತ್ತಲ ರಸ್ತೆ ಮಾರ್ಗವಾಗಿ ತಹಸೀಲ್ದಾರ್ ಕಚೇರಿ, ಸುಭಾಸ್ ಸರ್ಕಲ್ ಮೂಲಕ ಜಿಲ್ಲಾ ಕ್ರೀಡಾಂಗಣಕ್ಕೆ ಆಗಮಿಸಿದ ರೈತರು ಪ್ರತಿಭಟನಾ ಸಮಾವೇಶ ನಡೆಸಿದರು.
ನೇತೃತ್ವ ವಹಿಸಿದ್ದ ರೈತ ಮುಖಂಡ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಕಳೆದ ಎರಡು ತಿಂಗಳಿಂದ ದೆಹಲಿಯಲ್ಲಿ ಕೊರೆಯುವ ಚಳಿಯನ್ನು ಲೆಕ್ಕಿಸದೇ ಕೇಂದ್ರ ಸರ್ಕಾರದ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಹೋರಾಟದ ಸಂದರ್ಭದಲ್ಲಿ ಅನೇಕ ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ಕೇಂದ್ರ ಸರ್ಕಾರ ರೈತರ ಬೇಡಿಕೆ ಈಡೇರಿಸಲು ಮುಂದಾಗದೆ ಇರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
2015-16ರಿಂದ 2019-20 ರವರೆಗೆ ಬೆಳೆ ವಿಮೆಯಲ್ಲಿ ಸಾಕಷ್ಟು ತಾರತಮ್ಯವಾಗಿದ್ದು ಸಮರ್ಪಕವಾಗಿ ರೈತರ ಖಾತೆಗೆ ಹಣ ಜಮೆ ಮಾಡುವಲ್ಲಿ ಜಿಲ್ಲಾಡಳಿತ ವಿಫಲಗೊಂಡಿದೆ. ಈ ಕುರಿತು ಹಲವಾರು ಬಾರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ ಸಮಸ್ಯೆ ಬಗೆಹರಿಸಿಲ್ಲ. ಆದ್ದರಿಂದ ವಿಮಾ ಕಂಪನಿ, ಬ್ಯಾಂಕ್ ಅಧಿಕಾರಿಗಳು ಹಾಗೂ ರೈತ ಮುಖಂಡರ ಸಭೆ ಕರೆದು ಬಾಕಿ ಉಳಿದಿರುವ ಬೆಳೆ ವಿಮೆ ಹಣವನ್ನು ತಕ್ಷಣ ರೈತರ ಖಾತೆಗೆ ಜಮೆ ಮಾಡಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಂತರ ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಮುಖಂಡರಾದ ಮಹಮ್ಮದಗೌಸ್ ಪಾಟೀಲ, ಅಡಿವೆಪ್ಪ ಆಲದಕಟ್ಟಿ, ಗಂಗಣ್ಣ ಎಲಿ, ಶಿವಬಸಪ್ಪ ಗೋವಿ, ಮರಿಗೌಡ ಪಾಟೀಲ, ರುದ್ರಗೌಡ ಪಾಟೀಲ, ಪ್ರಭುಗೌಡ ಪ್ಯಾಟಿ, ಶಂಕ್ರಪ್ಪ ಶಿರಗಂಬಿ, ದಿಳ್ಳೆಪ್ಪ ಮಣ್ಣೂರ, ಚಂದ್ರಶೇಖರ ಜಾವಗಲ್ಲ, ಕರಬಸಪ್ಪ ಅಗಸಿಬಾಗಿಲು ಸೇರಿ ನೂರಾರು ರೈತರು ಪಾಲ್ಗೊಂಡಿದ್ದರು.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ದೆಹಲಿ ಮತ್ತು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ರೈತರ ಟ್ರ್ಯಾಕ್ಟರ್ ಪರೇಡ್ ಬೆಂಬಲಿಸಿ ನಗರದಲ್ಲಿಯೂ ರೈತಪರ ಸಂಘಟನೆಗಳ ಕಾರ್ಯಕರ್ತರು ರಾಣೆಬೆನ್ನೂರ ನಗರದಲ್ಲಿ ಮಂಗಳವಾರ ಟ್ರ್ಯಾಕ್ಟರ್ ರ‍್ಯಾಲಿ ನಡೆಸಿದರು.
ನಗರದ ಹೊರವಲಯದ ಮಾಗೋಡ ವೃತ್ತದಿಂದ ಆರಂಭಗೊಂಡ ಟ್ರ್ಯಾಕ್ಟರ್ ರ‍್ಯಾಲಿ ಪಿ.ಬಿ. ರಸ್ತೆ ಮೂಲಕ ಎನ್ವಿ ಹೋಟೆಲ್, ಬಸ್ ನಿಲ್ದಾಣ ವೃತ್ತ, ಕೋರ್ಟ್ ವೃತ್ತ, ಕುರುಬಗೇರಿ ಕ್ರಾಸ್ ಸೇರಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಹಸೀಲ್ದಾರ್ ಕಚೇರಿ ತಲುಪಿತು.
ರೈತ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿ, ‘ಕೃಷಿ ಕಾಯ್ದೆ ಹಿಂಪಡೆಯಲು ಒತ್ತಾಯಿಸಿ ಕೊರೆಯುವ ಚಳಿಯಲ್ಲಿಯೂ ರೈತರು ಸುಮಾರು ಎರಡು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ತನ್ನ ಹಠಮಾರಿ ಧೋರಣೆ ಬಿಟ್ಟು ಕೂಡಲೆ ಕೃಷಿ ಕಾಯ್ದೆ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ತಹಸೀಲ್ದಾರ್ ಶಂಕರ ಜಿ.ಎಸ್. ಮೂಲಕ ರೈತರು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಮಾಜಿ ಸಚಿವ ರುದ್ರಪ್ಪ ಲಮಾಣಿ, ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶ ಕೋಳಿವಾಡ, ಎಪಿಎಂಸಿ ಅಧ್ಯಕ್ಷ ಬಸವರಾಜ ಸವಣೂರ, ನಗರಸಭೆ ಸದಸ್ಯ ನಿಂಗರಾಜ ಕೋಳಿವಾಡ, ಸುರೇಶ ಬೀರಾಳ, ಚಂದ್ರಣ್ಣ ಬೇಡರ, ಹನುಮಂತಪ್ಪ ಕಬ್ಬಾರ, ಭೀಮೇಶ ಮಾಕನೂರ, ಸುರೇಶ ಜಡಮಲಿ, ಬಸವರಾಜ ಕೊಂಗಿ, ಕಿರಣ ಗುಳೇದ, ರಾಜು ಓಲೇಕಾರ, ಮಾರುತಿ ದೊಡ್ಡಮನಿ, ಜಮಾಲಸಾಬ್ ಶೇತಸನದಿ, ದಿಳ್ಳೆಪ್ಪ ಸತ್ಯಪ್ಪನವರ, ಗಣೇಶ ಬೀರಾಳ, ಇಕಾಲಸಾಬ್ ರಾಣೆಬೆನ್ನೂರ, ಸುರೇಶ ಯಲ್ಲಾಪುರ, ಭೀಮಪ್ಪ ಪೂಜಾರ ಇತರರು ಪಾಲ್ಗೊಂಡಿದ್ದರು.