ಶಿಕಾರಿಪುರ: ರಕ್ಷಾಬಂಧನ ಎಂದರೆ ಮಮತೆ, ವಾತ್ಸಲ್ಯ, ಭ್ರಾತ್ವತ್ವದ ಸಂಕೇತ. ಕೇವಲ ಇದೊಂದು ದಾರವಲ್ಲ, ಹೃದಯಪೂರ್ವಕವಾಗಿ ನಮಗೆ ಕಟ್ಟುವ ಶ್ರೀರಕ್ಷೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಬಣ್ಣಿಸಿದರು.
ನಗರದಲ್ಲಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಆಯೋಜಿಸಿದ್ದ ರಕ್ಷಾಬಂಧನ ಮತ್ತು ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಉದ್ಘಾಟಿಸಿದ ಅವರು, ಸದ್ವಿಚಾರಗಳನ್ನು ರಕ್ಷಾಬಂಧನ ಉತ್ಸವ ಹಂಚುತ್ತದೆ. ಸಹೋದರತ್ವವನ್ನು ಸೃಜಿಸುವಂತೆ ಮಾಡುತ್ತದೆ. ಇದು ಸಂಸ್ಕೃತಿ ಮತ್ತು ಸಚ್ಚಾರಿತ್ರ್ಯದ ಸಂಕೇತ ಎಂದರು.
ಪರಿಶುದ್ಧ ಮನಸ್ಸು ಮತ್ತು ಸಂಸ್ಕಾರಗಳು ರಕ್ಷೆಯೊಳಗೆ ಅಡಗಿವೆ. ಈ ರಕ್ಷೆ ಸಮಾಜ ರಕ್ಷಣೆಯ ಪಥದಲ್ಲಿ ನಾವು ಸಾಗುವಂತೆ ಮಾಡುತ್ತದೆ. ಇದು ನಮ್ಮ ಹಿರಿಯರು ನಮಗೆ ನೀಡಿದ ಪರಂಪರೆಯ ಕೊಡುಗೆ. ತಮ್ಮ ಬದುಕನ್ನೇ ಸಮಾಜ ಸೇವೆಗೆ ಸಮರ್ಪಣೆ ಮಾಡಿದ ಸ್ನೇಹಕ್ಕ ಅವರ ಮತ್ತು ಅನಸೂಯಮ್ಮ ಅವರ ಬದುಕು ಸರ್ವರಿಗೂ ಪ್ರೇರಣಾದಾಯಕ ಎಂದು ಹೇಳಿದರು.
ರಾಜಯೋಗಿನಿ ಬಿ.ಕೆ.ಅಂಶಿವಕ್ಕ, ಭಾವೈಕ್ಯ, ಪವಿತ್ರ ಸಂಬಂಧಗಳ ನೆನಪು ತಂದುಕೊಡುವಂತಹ ರಕ್ಷಾಬಂಧನ ನಮ್ಮನ್ನು ರಕ್ಷಿಸುತ್ತದೆ. ನಮ್ಮನ್ನು ನಾವು ನಕಾರಾತ್ಮಕ ಶಕ್ತಿಯಿಂದ ರಕ್ಷಣೆ ಮಾಡಿಕೊಳ್ಳಲು ಪರಮಾತ್ಮ ಶಿವನನ್ನು ಧ್ಯಾನಿಸಬೇಕು ಎಂದು ತಿಳಿಸಿದರು.
ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಸಂಸ್ಥೆಯ ಸಂಚಾಲಕಿ ಸ್ನೇಹಕ್ಕ, ಸೌಭಾಗ್ಯಕ್ಕ ಇತರರಿದ್ದರು.