ಉಡುಪಿ: ಇಂದಿರಾನಗರ ಕುಕ್ಕಿಕಟ್ಟೆ ನಿವಾಸಿ ರಕ್ಷಾ (26) ಸಾವು ಪ್ರಕರಣವನ್ನು ಸಿಒಡಿ ತನಿಖೆ ನಡೆಸಲು ಗೃಹಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಶಾಸಕ ಕೆ.ರಘುಪತಿ ಭಟ್, ವೈದ್ಯಕೀಯ ನಿರ್ಲಕ್ಷೃದಿಂದಾಗಿ ರಕ್ಷಾ ಮೃತಪಟ್ಟಿದ್ದಾರೆಂಬ ಆರೋಪವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಮನೆಮಂದಿಯ ಮನವಿ ಮೇರೆಗೆ ಗೃಹ ಸಚಿವರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಈ ಸೂಚನೆ ನೀಡಿದ್ದಾರೆ. ವೈದ್ಯಕೀಯ ನಿರ್ಲಕ್ಷೃದಂತಹ ಪ್ರಕರಣಗಳು ಸಂಭವಿಸಿದಾಗ ಸುಪ್ರೀಂಕೋರ್ಟ್ ಆದೇಶದಂತೆ ಸರ್ಕಾರದ ಮಟ್ಟದಲ್ಲಿ ವೈದ್ಯರ ತಂಡ ತನಿಖೆ ನಡೆಸಿ ವರದಿ ಸಲ್ಲಿಸಬೇಕಾಗುತ್ತದೆ. ಅದರಂತೆ ಜಿಲ್ಲಾಸ್ಪತ್ರೆ ವೈದ್ಯ ಡಾ.ಚಂದ್ರಶೇಖರ ಅಡಿಗ ನೇತೃತ್ವದ 7 ವೈದ್ಯರನ್ನು ಒಳಗೊಂಡ ಸಮಿತಿ ರಚಿಸಿ ತನಿಖೆ ನಡೆಸಲಾಗುವುದು. 5 ದಿನದ ಒಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರಾಧ್ಯಕ್ಷ ಮಹೇಶ್ ಠಾಕೂರ್, ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ ಉಪಸ್ಥಿತರಿದ್ದರು.
ಶವ ಹಸ್ತಾಂತರಕ್ಕೆ ಹೊಸ ನಿಯಮ: ಕುಂದಾಪುರದಲ್ಲಿ ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಶವ ಅದಲು ಬದಲಾದ ಹಿನ್ನೆಲೆಯಲ್ಲಿ ಮತ್ತೆ ಇಂಥ ಪ್ರಕರಣ ಮರುಕಳಿಸದಂತೆ ಎಚ್ಚರ ವಹಿಸಲಾಗಿದೆ. ಶವ ಪಡೆಯಲು ಆಯಾ ತಾಲೂಕಿನ ಮೆಡಿಕಲ್ ಅಧಿಕಾರಿ ಜಿಲ್ಲಾ ಶವಾಗಾರಕ್ಕೆ ಆಗಮಿಸುವುದು ಕಡ್ಡಾಯ. ಜತೆಗೆ ಸಂಬಂಧಿಕರಿಂದ ವ್ಯಕ್ತಿಯ ಬಗ್ಗೆ ದೃಢೀಕರಣ ಪಡೆದು ವೈದ್ಯಾಧಿಕಾರಿಗೆ ಹಸ್ತಾಂತರಿಸಲಾಗುವುದು. ಬೆಳಗ್ಗೆ 9 ರಿಂದ ಸಾಯಂಕಾಲ 6ಗಂಟೆ ಮಧ್ಯೆ ಮಾತ್ರ ಕೋವಿಡ್‌ನಿಂದ ಮೃತಪಟ್ಟವರ ಶವ ನೀಡಲಾಗುವುದು ಎಂದು ಶಾಸಕ ಭಟ್ ತಿಳಿಸಿದರು.
ಕುಟುಂಬಕ್ಕೆ ನ್ಯಾಯ ಸಿಗಲಿ: ಆಸ್ಪತ್ರೆ ಹಾಗೂ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಂಡು ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಮೀನುಗಾರಿಕಾ ಫೆಡರೇಷನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಸರ್ಕಾರವನ್ನು ಆಗ್ರಹಿಸಿದ್ದಾರೆ. ಇಂತಹ ಪ್ರಕರಣಗಳು ಮರುಕಳಿಸದಂತೆ ಸಂಬಂಧಪಟ್ಟ ಇಲಾಖೆಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.
ಮಹಿಳೆ ಸಾವಿನ ಬಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಆಗಿದೆ ಎಂದು ಆರೋಪಿಸಲಾಗಿರುವ ಲೋಪದ ತನಿಖೆ ನಡೆಸಲು 7 ವೈದ್ಯರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ಲೋಪ ಸಾಬೀತಾದರೆ ಆಸ್ಪತ್ರೆ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಜಿ.ಜಗದೀಶ್ ಜಿಲ್ಲಾಧಿಕಾರಿ, ಉಡುಪಿ