ಜಿಲ್ಲೆ

ಮನುಷ್ಯ ಸಂಬಂಧಗಳನ್ನು ಪ್ರಬಲಗೊಳಿಸುವ ಹಬ್ಬ ರಕ್ಷಾಬಂಧನ

ಮಡಿಕೇರಿ: ಸಹೋದರತ್ವದ ಭಾವವನ್ನು ಹರಡುವ ಮೂಲಕ ಮನುಷ್ಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಸುಂದರವಾದ ಮತ್ತು ಅತ್ಯಂತ ಮಹತ್ವದ ಹಬ್ಬ ರಕ್ಷಾ ಬಂಧನವಾಗಿದೆ ಎಂದು ನಗರದ ಬ್ರಹ್ಮಕುಮಾರಿ ಸಂಸ್ಥೆಯ ಪ್ರಮುಖರಲ್ಲಿ ಬಬ್ಬರಾದ ಧನಲಕ್ಷಿ ಅವರು ಅಭಿಪ್ರಾಯಪಟ್ಟರು.

ಸ್ಥಳೀಯ ಬ್ರಹ್ಮಕುಮಾರಿ ಸಂಸ್ಥೆಯ ಲೈಟ್ ಹೌಸ್‌ನಲ್ಲಿ ಆಯೋಜಿತ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಭಾರತದ ಶ್ರೀಮಂತ ಸಂಸ್ಕೃತಿ ವಿಶ್ವದಾದ್ಯಂತ ಪಸರಿಸಿದೆ. ಇಲ್ಲಿನ ಸಂಸ್ಕೃತಿಯ ಭಾಗವಾಗಿರುವ ರಕ್ಷಾ ಬಂಧನ ಹಬ್ಬವು ಪರಸ್ಪರ ಪ್ರೀತಿ ವಿಶ್ವಾಸ, ಸೌಹಾರ್ದತೆಯ ಭಾವನೆಗಳನ್ನು ಮೂಡಿಸುವ ಮೂಲಕ, ವಿಶ್ವ ಭಾತೃತ್ವವನ್ನು ಮೂಡಿಸಲು ಸಹಕಾರಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಬಂಧನ ಎಂದರೆ ಪರಮಾತ್ಮನೊಂದಿಗಿನ ಬಂಧನ ಮತ್ತು ಜನರೊಂದಿಗಿನ ಸೌಹಾರ್ದ ಸಂಬಂಧವೆಂದೇ ಅರ್ಥ. ರಕ್ಷಾ ಬಂಧನದ ಪವಿತ್ರವಾದ ಈ ದಿನದಂದು ಯಾರೊಂದಿಗಾದರು ಮುನಿಸಿಕೊಂಡಿದ್ದರೆ ಅಂತವಹವರಿಗೂ ಶುಭಾಶಯಗಳನ್ನು ತಿಳಿಸಿ ಉತ್ತಮ ಸಂಬಂಧಗಳನ್ನು ಬೆಳೆಸಿಕೊಳ್ಳಲು ಪ್ರತಿಯೊಬ್ಬರು ಮುಂದಾಗಬೇಕೆಂದು ಧನಲಕ್ಷ್ಮಿ ಕರೆ ನೀಡಿದರು.

ರಕ್ಷಾ ಬಂಧನ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಫೀ.ಮಾ.ಕೆಂ.ಎಂ ಕಾರ್ಯಪ್ಪ ಕಾಲೇಜಿನ ಉಪನ್ಯಾಸಕ ಪ್ರೊ.ರವಿ ಶಂಕರ್ ಉದ್ಘಾಟಿಸಿ ಮಾತನಾಡಿ, ಬ್ರಹ್ಮಕುಮಾರಿ ಸಂಸ್ಥೆ ಜಾತಿ ಮತ ಪಂಥಗಳ ಭೇದವಿಲ್ಲದೆ ರಕ್ಷಾ ಬಂಧನ ಕಾರ್ಯಕ್ರಮವನ್ನು ಎಲ್ಲರನ್ನು ಒಳಗೊಂಡಂತೆ ನಡೆಸುತ್ತಿರುವ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿ, ಬ್ರಹ್ಮಕುಮಾರಿ ಸಂಸ್ಥೆಯ ಒಬ್ಬ ದೇವರು ಒಂದು ಕುಟುಂಬ ಎನ್ನುವ ಧ್ಯೇಯ ವಾಕ್ಯ ಸಾಮರಸ್ಯದ ಸಮಾಜ ನಿಮಾಣಕ್ಕೆ ಅತ್ಯಂತ ಸಹಾಯಕಾರಿಯಾಗಿದೆ. ರಕ್ಷಾ ಬಂಧನ ಪ್ರೀತಿ ಮತ್ತು ಬಾಂಧವ್ಯದ ಸಂಕೇತ ಸಾರುವ ಹಬ್ಬವೇ ಆಗಿದೆ ಎಂದು ತಿಳಿಸಿದರು.

ಬ್ರಹ್ಮಕುಮಾರಿ ಸಂಸ್ಥೆಯ ಗಾಯತ್ರಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ರಕ್ಷೆಯನ್ನು ಕಟ್ಟಿ ಶುಭ ಹಾರೈಸಿ, ಪ್ರಸಾದ ವಿತರಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಕೋದಂಡ ರಾಮೋತ್ಸವ ಸಮಿತಿ ಸಂಚಾಲಕ ಕೆ.ಎಂ.ಬಿ.ಗಣೇಶ್, ಸಂಸ್ಕೃತಿ ಸಿರಿ ಬಳಗ ಟ್ರಸ್ಟ್ ಅಧ್ಯಕ್ಷ ಡಾ.ಮೋಹನ್ ಅಪ್ಪಾಜಿ, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಟಿ.ಅನಿಲ್, ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ಕೊಡಗು ಪತ್ರಿಕಾಭವನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಎಸ್.ಜಿ.ಉಮೇಶ್, ಹಿರಿಯ ಕ್ರೀಡಾಪಟು ಡಾ.ಪುಪ್ಪಾ ಕುಟ್ಟಣ್ಣ, ಕೊಡಗು ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ವಿ.ರವಿಕುಮಾರ್ ಪಾಲ್ಗೊಂಡಿದ್ದರು.