ಜಿಲ್ಲೆ

ಆರ್​ಎಸ್​ಎಸ್​ನಿಂದ ರಕ್ಷಾ ಬಂಧನ ಆಚರಣೆ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ವಿಶ್ವದಲ್ಲಿ ಯಾರೂ ಶಾಶ್ವತ ಶತ್ರುಗಳು ಹಾಗೂ ಮಿತ್ರರಲ್ಲ. ಯಾವುದೂ ಶಾಶ್ವತವೂ ಅಲ್ಲ. ನಮ್ಮ ರಕ್ಷಣೆ ಹಾಗೂ ಆರ್ಥಿಕತೆಯನ್ನು ನಾವೇ ರಕ್ಷಿಸಿಕೊಳ್ಳಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಹಾಗೂ ದಕ್ಷಿಣ ಪ್ರಾಂತ ಪ್ರಚಾರ ವಿಭಾಗ ಪ್ರಮುಖ ಅರುಣಕುಮಾರ ಹೇಳಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತ ಬಲಾಡ್ಯ ರಾಷ್ಟ್ರವಾಗಿ ಬೆಳೆಯುತ್ತಿದೆ. ರಕ್ಷಣಾ ಸಾಮಗ್ರಿಗಳ ಉತ್ಪಾದನೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸ್ವಾಲಂಬಿಯಾಗಿದ್ದೇವೆ. ಇಂದಿನ ಭಾರತದ ಶಕ್ತಿ ಜಗತ್ತಿಗೆ ಪರಿಚಯವಾಗಿದೆ ಎಂದರು.

ಕಾಶ್ಮೀರದಲ್ಲಿ ಭಯೋತ್ಪಾದಕರು ನಡೆಸಿದ ದಾಳಿಗೆ ಆಪರೇಷನ್ ಸಿಂಧೂರ ಮೂಲಕ ತಕ್ಕ ಉತ್ತರ ನೀಡಲಾಗಿದೆ. ಸಿಂಧೂರ ನಮ್ಮ ಅಸ್ಮೀಯತೆ. ದೇಶದ ಮೇಲೆ ನಡೆಯುವ ದಾಳಿಗೆ ತಕ್ಕ ಉತ್ತರ ನೀಡುವ ಶಕ್ತಿ ಭಾರತಕ್ಕೆ ಇದೆ ಎಂದು ಹೇಳಿದರು.

ಅಪರೇಷನ್ ಸಿಂಧೂರ ಸಂದರ್ಭದಲ್ಲಿ ಶತ್ರು ದೇಶ ಪಾಕಿಸ್ತಾನದ ಕ್ಷಿಪಣಿ ದಾಳಿಯಿಂದ ಭಾರತದ ಯಾವುದೇ ನಗರಕ್ಕೆ ಹಾನಿಯಾಗಲಿಲ್ಲ. ರಷ್ಯಾ, ಇಸ್ರೇಲ್ ದೇಶಗಳು ಬಲಿಷ್ಠವಾಗಿದ್ದರೂ ಅಲ್ಲಿನ ಅನೇಕ ನಗರಗಳಿಗೆ ಹಾನಿಯಾಗಿದೆ ಎಂದರು.

ರಕ್ಷಾ ಬಂಧನದ ಮಹತ್ವ ವಿವರಿಸಿದ ಅವರು, ರಕ್ಷಾ ಬಂಧನ ಶೋಕಿಗೆ ಮಾಡುವ ಆಚರಣೆಯಲ್ಲ. ಇದೊಂದು ಕರ್ತವ್ಯದ ರಕ್ಷಣೆಯಾಗಿದೆ ಎಂದು ಹೇಳಿದರು.

ಪ್ರತಿಯೊಬ್ಬರೂ ದುಶ್ಚಟಗಳಿಂದ ದೂರವಾಗಬೇಕು. ಉತ್ತಮ ಆಹಾರ ಸೇವಿಸುವ ಜತೆಗೆ ಅತ್ಯುತ್ತಮ ಜೀವನಶೈಲಿ ರೂಢಿಸಿಕೊಳ್ಳಬೇಕು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯತನ ತೋರಬಾರದು. ನಮ್ಮ ಶರೀರ ರೋಗ ಹಾಗೂ ಔಷಧಿಗಳಿಂದ ಮುಕ್ತವಾಗಬೇಕು ಎಂದು ಸಲಹೆ ನೀಡಿದರು.

ಡಾ. ಕಿರಣ ರಾಜಶೇಖರ ಕಂಠಿ ಮಾತನಾಡಿ, ಸಮಾಜದಲ್ಲಿ ಮೊದಲು ಅವಿಭಕ್ತ ಕುಟುಂಬಗಳ ಸಂಖ್ಯೆ ಹೆಚ್ಚಾಗಿತ್ತು. ಈಗ ಕೇವಲ ಮೊಬೈಲ್ ಸಂಬಂಧಗಳಾಗಿವೆ. ಮೊಬೈಲ್ ಬಳಕೆಯೇ ಪ್ರಪಂಚವಾಗಿದೆ. ಇದು ಬದಲಾಗಬೇಕಿದೆ ಎಂದು ಹೇಳಿದರು.

ಹುಬ್ಬಳ್ಳಿ ಮಹಾನಗರ ಸಂಘಚಾಲಕ ಶಿವಾನಂದ ಅವಟಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಮಹೇಶ ಟೆಂಗಿನಕಾಯಿ, ಮಾಜಿ ಶಾಸಕ ಅಶೋಕ ಕಾಟವೆ, ಪ್ರಮೋದ ಮುತಾಲಿಕ, ಗೋವಿಂದ ಗೌಡಪ್ಪಗೋಳ, ಶಿವಾನಂದ ಅವಟಿ, ಜಯತೀರ್ಥ ಕಟ್ಟಿ, ಸುಭಾಷಸಿಂಗ್ ಜಮಾದಾರ, ಬಸವರಾಜ ಕುಂದಗೋಳಮಠ, ವೀರೇಶ ಸಂಗಳದ, ಪ್ರಕಾಶ ಕ್ಯಾರಕಟ್ಟಿ, ಸಂದೀಪ ಬೂದಿಹಾಳ ಹಾಗೂ ಇತರರು ಇದ್ದರು. ಇದೇ ಸಂದರ್ಭದಲ್ಲಿ ಸಂಘದ ಸ್ವಯಂಸೇವಕರು ಪರಸ್ಪರ ರಾಖಿ ಕಟ್ಟಿದರು.