ಜಿಲ್ಲೆ

ಯೋಧರಿಗೆ ರಾಖಿ ಕಟ್ಟಿ ರಕ್ಷಾ ಬಂಧನ ಆಚರಣೆ

ಹುಬ್ಬಳ್ಳಿ: ಬಂದೂಕು ಹಿಡಿದು ಗಡಿ ಕಾಯುವ ಯೋಧರ ಕೈಗೆ ರಕ್ಷೆ ಕಟ್ಟುತ್ತಿದ್ದ ಆ ಸಹೋದರಿಯರ ಕಣ್ಣಿನಿಂದ ಆನಂದ ಭಾಷ್ಪ ಜಿನುಗುತ್ತಿತ್ತು. ತನ್ನನ್ನಷ್ಟೇ ಅಲ್ಲ ಇಡೀ ದೇಶವನ್ನೇ ರಕ್ಷಿಸುತ್ತಿರುವ ಸಹೋದರರು ಸಿಕ್ಕರಲ್ಲ ಎನ್ನುವ ಧನ್ಯತಾಭಾವ ಅವರಲ್ಲಿ ಕಾಣುತ್ತಿತ್ತು. ಅಕ್ಕರೆಯಿಂದ ರಾಖಿ ಕಟ್ಟಿಸಿಕೊಂಡ ಆ ಯೋಧರ ಮೊಗದಲ್ಲಿ ಪ್ರಸನ್ನತೆ. ಎಲ್ಲರ ಪ್ರೀತಿ, ಕಕ್ಕುಲಾತಿಗೆ ಯೋಧರು ನಿಜಕ್ಕೂ ಕರಗಿ ಹೋಗಿದ್ದರು.


ಇಂಥದೊಂದು ಅರ್ಥಪೂರ್ಣ ರಕ್ಷಾ ಬಂಧನ ಕಾರ್ಯಕ್ರಮ ನಡೆದಿದ್ದು ಮುಕುಂದ ನಗರದ ಪತಂಜಲಿ ವೆಲ್​ನೆಸ್ ಸೆಂಟರ್​ನಲ್ಲಿ. ಬುಧವಾರ ಜರುಗಿದ ಆ ಕಾರ್ಯಕ್ರಮದಲ್ಲಿ ಸಂಭ್ರಮ ಮನೆ ಮಾಡಿತ್ತು. ಬಾಫಣಾ ಪರಿವಾರದವರು ಮಹಿಳೆಯರು, ಮಕ್ಕಳು ರಕ್ಷಾ ಬಂಧನವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದರು. ಯೋಧರಿಗೆ ಮಹಿಳೆಯರು ರಾಖಿ ಕಟ್ಟಿ ರಕ್ಷಣೆ ಕೋರಿದರು. ಯೋಧರು ಸಹೋದರಿಯರಿಗೆ ಶುಭ ಹಾರೈಸಿದರು. ಸುಭಾಷಸಿಂಗ್ ಜಮಾದಾರ ರಕ್ಷಾ ಬಂಧನದ ಮಹತ್ವ ತಿಳಿಸಿದರು. ಯೋಧರಿಗೆ ರಾಖಿ ಕಟ್ಟುವ ಈ ಕಾರ್ಯಕ್ರಮ


ಅರ್ಥಪೂರ್ಣವಾಗಿದೆ. ಇಂಥ ಕಾರ್ಯಕ್ರಮ ಆಯೋಜಿಸಿದ ಬಾಫಣಾ ಪರಿವಾರಕ್ಕೆ ಅಭಿನಂದಿಸಿದರು. ವಿನೂತನವಾಗಿ ರಕ್ಷಾ ಬಂಧನ ಆಯೋಜಿಸಿದ್ದಕ್ಕಾಗಿ ಯೋಧರು ಸಂತಸ ವ್ಯಕ್ತ ಪಡಿಸಿದರು. ರಮೇಶ ಬಾಫಣಾ, ಗೌತಮ ಇತರರು ಇದ್ದರು.