ಜಿಲ್ಲೆ

ನ.1ರಿಂದ ತಿಂಗಳ ಕಾಲ ರಾಜ್ಯೋತ್ಸವ ಕಾರ್ಯಕ್ರಮ

ಜಗದೀಶ ಹೊಂಬಳಿ

ಧಾರವಾಡ: ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ನ.1ರಿಂದ 30ರವರೆಗೆ ಸಂಗೀತ, ನೃತ್ಯ, ನಾಟಕ ಸೇರಿ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸಿ, ಒಂದು ತಿಂಗಳ ಕಾಲ ರಾಜ್ಯೋತ್ಸವವನ್ನು ನಾಡ ಹಬ್ಬದ ರೀತಿಯಲ್ಲಿ ಆಚರಿಸಲಾಗುವುದು ಎಂದು ಸಂಘದ ಪ್ರ.ಕಾರ್ಯದರ್ಶಿ ಶಂಕರ ಹಲಗತ್ತಿ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದ ಪಾಟೀಲ ಪುಟ್ಟಪ್ಪ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ನ.1ರಂದು ಬೆಳಗ್ಗೆ 9 ಗಂಟೆಗೆ ನಾಡದೇವಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಕಾರ್ಯಕ್ರಮದಲ್ಲಿ 20 ದಿನ ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲಾಗುವುದು. ಬಳಿಕ 10 ದಿನ 11 ನಾಟಕಗಳ ಪ್ರದರ್ಶನ ನಡೆಯಲಿದೆ. ಪ್ರತಿದಿನ ಸಂಜೆ 5.30ರಿಂದ ರಾತ್ರಿ 8 ಗಂಟೆವರೆಗೆ ಕಾರ್ಯಕ್ರಮ ನಡೆಯಲಿವೆ. 15 ಜನ ಯುವ ಮತ್ತು ಹಿರಿಯ ರಂಗ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮವೂ ನಡೆಯಲಿದೆ. ನ.10ರಿಂದ ಮಕ್ಕಳ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. 300 ಮಕ್ಕಳು ಮುಖಾಮುಖಿಯಾಗಲಿದ್ದಾರೆ ಎಂದರು.

ಕಾರ್ಯಕ್ರಮದ ಅಂಗವಾಗಿ ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳ ವಿವಿಧ ಕಾಲೇಜುಗಳಲ್ಲಿ ಹಚ್ಚೇವು ಕನ್ನಡದ ದೀಪ ಹೆಸರಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಸಂಘವು ಕಳೆದ 10 ವರ್ಷದಿಂದ ಈ ವಿಶಿಷ್ಟ ಕಾರ್ಯಕ್ರಮ ಆಯೋಜಿಸುತ್ತ ಬಂದಿದ್ದು, 15 ಸಾವಿರ ಯುವ ಕಲಾವಿದರಿಗೆ ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸಿದೆ. ಅದೇ ಸಂಪ್ರದಾಯ ಮುಂದುವರಿಸಿಕೊAಡು ಹೋಗುತ್ತಿದೆ ಎಂದರು.

ಕಾರ್ಯಕ್ರಮದ ಭಾಗವಾಗಿ ನ.1ರಂದು ಬೆಳಗ್ಗೆ 11 ಗಂಟೆಗೆ ನಾಡದೇವಿಗೆ ನಮನ ಕಾರ್ಯಕ್ರಮ ನಡೆಯಲಿದೆ. ಧಾರವಾಡದ ಡಾ.ಎಂ.ಎA.ಕಲಬುರ್ಗಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ.ವೀರಣ್ಣ ರಾಜೂರು ಅತಿಥಿಯಾಗಿ ಆಗಮಿಸುವರು. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸುವರು. ಸಂಘದ ಪ್ರಸಕ್ತ ಸಾಲಿನ ಗೌರವ ಉಪಾಧ್ಯಕ್ಷರಾಗಿ ನೇಮಕಗೊಂಡ ಕಾನೂನು ತಜ್ಞ ಕೆ.ಬಿ.ನಾವಲಗಿಮಠ, ಮಾಜಿ ಮೇಯರ್ ಡಾ.ಪಾಂಡುರಂಗ ಪಾಟೀಲ, ಹಿರಿಯ ವಿಧ್ವಾಂಸ ಶ್ರೀನಿವಾಸ ವಾಡಪ್ಪಿ, ಜೆಎಸ್‌ಎಸ್ ಕಾರ್ಯದರ್ಶಿ ಡಾ.ಅಜಿತ ಪ್ರಸಾದ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಡಾ.ಸಂಜೀವ ಕುಲಕರ್ಣಿ, ಶಿವಾನಂದ ಬಾವಿಕಟ್ಟಿ, ಗುರು ಹಿರೇಮಠ, ಜಿನದತ್ತ ಹಡಗಲಿ, ಸತೀಶ್ ತುರಮರಿ ಸುದ್ದಿಗೋಷ್ಠಿಯಲ್ಲಿದ್ದರು.