ಜಿಲ್ಲೆ

ಜಿಲ್ಲೆಯ ಇಬ್ಬರು ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ

* ನಿವೃತ್ತ ಐಎಎಸ್​ ಸಿದ್ದಯ್ಯ, ರಂಗಭೂಮಿ ಹಿರಿಯ ನಿರ್ದೇಶಕ ಏಳಗಳ್ಳಿ ಎಚ್​.ಎಂ.ಪರಮಶಿವಯ್ಯ ಭಾಜನ

ಕನಕಪುರ

ರಾಜ್ಯ ಸರ್ಕಾರದಿಂದ ನೀಡಲಾಗುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಬೆಂಗಳೂರು ದಣ ಜಿಲ್ಲೆಯಿಂದ ಕನಕಪುರ ತಾಲೂಕಿನ ನಿವೃತ್ತ ಐಎಎಸ್​ ಸಿದ್ದಯ್ಯ ಮತ್ತು ಏಳಗಳ್ಳಿ ರಂಗಭೂಮಿ ಕಲಾವಿದ ಎಚ್​.ಎಂ.ಪರಮಶಿವಯ್ಯ ಅವರು ಭಾಜನರಾಗಿದ್ದಾರೆ.

ಮೂಲತಃ ಹಾರೋಹಳ್ಳಿಯವರಾದ ಐಎಎಸ್​ ನಿವೃತ್ತ ಎಚ್​.ಸಿದ್ದಯ್ಯ ಅವರು ಕರಿಯಪ್ಪ ಮತ್ತು ಗೌರಮ್ಮ ದಂಪತಿಯ ಎಂಟು ಮಕ್ಕಳಲ್ಲಿ ಮೊದಲನೆಯವರು. ಹಾರೋಹಳ್ಳಿಯಲ್ಲೇ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪಡೆದ ಸಿದ್ದಯ್ಯ ಅವರು ಬೆಂಗಳೂರು ಆರ್ಟ್ಸ್​ ಕಾಲೇಜಿನಲ್ಲಿ ಪದವೀಧರರಾಗಿದ್ದು, ತರುವಾಯ ಅದೇ ಕಾಲೇಜಿನ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ, ಬಳಿಕ ಜೆಎಎಸ್​ ಪರೀೆಯಲ್ಲಿ ರಾಜ್ಯಕ್ಕೆ 13ನೇ ರ್ಯಾಂಕ್​ ಪಡೆದು ಅಂದಿನ ಗುಲ್ಬರ್ಗಾದ ಉಪವಿಭಾಗಾಧಿಕಾರಿಯಾಗಿದ್ದರು.

1990ರಲ್ಲಿ ಬಂಗಾರಪ್ಪ ಅವರ ಸರ್ಕಾರದಲ್ಲಿ ಐಎಎಸ್​ ಹುದ್ದೆಗೆ ಬಡ್ತಿ ಪಡೆದು, ಪ್ರಥಮ ಬಾರಿಗೆ ಮೈಸೂರು ಜಿಲ್ಲಾಧಿಕಾರಿಯಾದರು. ಜೆ.ಎಚ್​.ಪಟೇಲ್​ರ ಅವಧಿಯಲ್ಲಿ ಸರ್ಕಾರದ ಕಾರ್ಯದರ್ಶಿಯಾಗಿ, ನಂತರ ಬಿಡಿಎ ಆಯುಕ್ತರು, ವೈದ್ಯಕಿಯ ಶಿಕ್ಷಣ ಉನ್ನತ ವ್ಯಾಸಂಗದ ವಿಭಾಗ ಕಾರ್ಯದರ್ಶಿಯಾಗಿ ಬಡ್ತಿ ಹೊಂದಿದ ಸಿದ್ದಯ್ಯ ಅವರು ಧರ್ಮಸಿಂಗ್​ ಹಾಗೂ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಪ್ರಿನ್ಸಿಪಲ್​ ಸೆಕ್ಟ್ರೆಟರಿ ಹಾಗೂ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ. ನಿವೃತ್ತಿ ಬಳಿಕವೂ   ಬ್ರಾಂಡ್  ಬೆಂಗಳೂರು ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿರುವ ಸಿದ್ದಯ್ಯ, ಬಾಲ್ಯದಲ್ಲಿಯೇ ಸಮುದಾಯ, ಸಾಮಾಜಿಕ ಸೇವೆಗಳಲ್ಲಿ ಗುರುತಿಸಿಕೊಂಡಿದ್ದರು. ಸೇವಾ ಅವಧಿಯಲ್ಲಿ ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡುವುದು ಸೇರಿ ಉತ್ತಮ ಆಡಳಿತಗಾರರಾಗಿ ಮನ್ನಣೆ ಪಡೆದಿದ್ದರು. ಸರ್ಕಾರಿ ಸೇವೆಯಲ್ಲಿನ ಉತ್ತಮ ಆಡಳಿತ ವೈಖರಿ ಮತ್ತು ನಿರ್ವಹಣೆಯಲ್ಲಿನ ವಿಶೇಷ ಸಾಧನೆಯನ್ನು ಗುರುತಿಸಿ ಸರ್ಕಾರ ಎಚ್​.ಸಿದ್ದಯ್ಯ ಅವರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಮಾಡಿದೆ.

ಎಸ್ಸೆಸ್ಸೆಲ್ಸಿಯಲ್ಲಿ ಶಿಕ್ಷಕರಿಗೆ ನಾಟಕ ಕಲಿಸಿದ್ದ ಕಲಾವಿದ

ತಾಲೂಕಿನ ಉಯ್ಯಂಬಳ್ಳಿ ಹೋಬಳಿ ಏಳಗಳ್ಳಿಯ ಶಿವಶರಣೆ ತಾಯಿಮುದ್ದಮ್ಮ ದೇವಿಯ ಪ್ರಧಾನ ಅರ್ಚಕರ ಕುಟುಂಬವಾದ ದಿ.ಮಲ್ಲಿಕಾರ್ಜುನಸ್ವಾಮಿ ಹಾಗೂ ಕಮಲಮ್ಮನವರ ಪುತ್ರ ಏಳಗಳ್ಳಿ ಎಚ್​.ಎಂ.ಪರಮಶಿವಯ್ಯ ಅವರು 15ನೇ ವಯಸ್ಸಿನಿಂದಲೇ ರಂಗಭೂಮಿ ನಾಟಕ ನಿರ್ದೇಶಕರಾದವರು. 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಶಿಕ್ಷಕರಿಗೆ ನಾಟಕ ಕಲಿಸಿದ್ದ ಪರಮಶಿವಯ್ಯ ಅವರು ಕುರುೇತ್ರ, ರಾಮಾಯಣ, ದಾನಶೂರ ಕರ್ಣ, ಯುವಜಲಂಧರ ಸೇರಿ 25ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ನಿರ್ದೇಶನದೊಂದಿಗೆ ಹಾಮೋರ್ನಿಯಂ ಅನ್ನೂ ನುಡಿಸುವ ಪರಮಶಿವಯ್ಯ ಅವರು ಬಾಲ್ಯದಿಂದಲೇ ರಾಮಭಜನೆ, ಜಾನಪದ ಗೀತ ಗಾಯನದಲ್ಲೂ ತೊಡಗಿಸಿಕೊಂಡು, ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ನೂರಾರು ರಂಗಭೂಮಿ ಕಲಾವಿದರನ್ನೂ ಬೆಳೆಸಿದ್ದಾರೆ. ಕಲೆಯನ್ನೇ ಜೀವನ, ವೃತ್ತಿಯನ್ನಾಗಿಸಿಕೊಂಡ ಪರಮಶಿವಯ್ಯ ಅವರಿಗೆ ಮೂರು ಬೆಳ್ಳಿ ಕಿರೀಟ, ಒಂದು ಬಂಗಾರದ ಕಡಗ ಸೇರಿ ಹತ್ತಾರು ಪ್ರಶಸ್ತಿಗಳು ಲಭಿಸಿದ್ದು, 45 ವರ್ಷಗಳ ಕಲಾ ಸೇವೆಯನ್ನು ಪರಿಗಣಿಸಿ ಸದ್ಯ 64ರ ಪ್ರಾಯದಲ್ಲಿರುವ ಅವರಿಗೆ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಏಳಗಳ್ಳಿಯಲ್ಲಿ ಸಂಭ್ರಮ ಹೆಚ್ಚಿಸಿದೆ.