ಮಡಿಕೇರಿ:
ಅನ್ನದ ವ್ಯಾಮೋಹದ ಬಲೆಯಲ್ಲಿ ನಮ್ಮನ್ನು ನಾವು ಸಿಕ್ಕಿಹಾಕಿಸಿಕೊಂಡಿದ್ದೇನೆ. ಕನ್ನಡ ನೆಲದ ನೀರನ್ನು ಕುಡಿಯುತ್ತೇವೆ. ಕನ್ನಡ ಅನ್ನದ ಭಾಷೆಯಾಗಬೇಕು. ಉದ್ಯೋಗದ ಭಾಷೆಯಾಗಬೇಕು ಆಗ ಮಾತ್ರ ಕನ್ನಡ ಉಳಿಯಲು ಸಾಧ್ಯ ಎಂದು ಮಡಿಕೇರಿ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ ಪ್ರಸನ್ನ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗ, ಇವರ ಸಹಯೋಗದಲ್ಲಿ ಈಚೆಗೆ ಸÀರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ನಡೆದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉದ್ಯೋಗಕ್ಕಾಗಿ ಆಂಗ್ಲ ಭಾಷೆಯನ್ನು ಮೆಚ್ಚಿಕೊಳ್ಳುವುದು ಅವಶ್ಯವಾಗಿದೆ. ಆಂಗ್ಲ ಭಾಷೆ ಇಂದು ಉದ್ಯೋಗ ಕ್ಷೇತ್ರ ಮಾತ್ರವಲ್ಲದೆ ಎಲ್ಲರ ಮನೆಯನ್ನು ಕೂಡ ಅಕ್ರಮಿಸಿಕೊಂಡಿದೆ. ನಮ್ಮ ಮನೆಯಲ್ಲಿ ನಾವು ನಮ್ಮ ಮಾತೃಭಾಷೆಯನ್ನು ಮಾತನಾಡಬೇಕು. ವ್ಯವಹಾರಕ್ಕೆ ಮಾತ್ರ ಆಂಗ್ಲ ಭಾಷೆಯನ್ನು ಉಪಯೋಗಿಸಿದರೆ ನಮ್ಮ ಭಾಷೆಯ ಉಳಿವು ಮತ್ತು ಬೆಳವಣಿಗೆ ಸಾಧ್ಯ ಎಂದರು.
ಕಾರ್ಯಕ್ರಮದ ಮುಖ್ಯ ಭಾಷಣಕಾರ್ತಿಯಾಗಿ ಆಗಮಿಸಿದ ಕೊಡಗರಹಳ್ಳಿಯ ಸುಂಟಿಕೊಪ್ಪ ನಾಡು ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಶ್ರೀಶ ಮಾತನಾಡಿ ನಾಲ್ಕಾರು ಪ್ರಾಂತ್ಯಗಳಲ್ಲಿ ಹಂಚಿ ಹೋಗಿದ್ದ ಕನ್ನಡ ನಾಡನ್ನು ಒಟ್ಟುಗೂಡಿಸಿ ನಾಡನ್ನು ಕಟ್ಟಿದ ಬಗ್ಗೆ ಕನ್ನಡ ನಾಡಿನ ಏಕೀಕರಣ ಭಾಷಾವಾರು ರಾಜ್ಯಗಳ ವಿಂಗಡಣೆಯಾದ ನಂತರ ಮೈಸೂರು ರಾಜ್ಯದ ಉದಯ, ನಂತರ ಕರ್ನಾಟಕ ರಾಜ್ಯವಾದದ್ದು ಇವೆಲ್ಲದರ ಕುರಿತು ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿ, ಕನ್ನಡ ಅನ್ನದ ಭಾಷೆಯಾಗಬೇಕಾದರೆ ವೈದ್ಯಕೀಯ ಮತ್ತು ತಂತ್ರಜ್ಞಾನ ವಿಷಯಗಳು ಕನ್ನಡದಲ್ಲಿ ಪಾಠ ನಡೆಯುವಂತಾಗಬೇಕು. ಪಕ್ಕದ ರಾಜ್ಯ ತಮಿಳುನಾಡಿನಲ್ಲಿ ತಮಿಳಿನಲ್ಲಿಯೇ ಎಲ್ಲ ಅಂತರ್ಜಾಲದ ವ್ಯವಹಾರಗಳು ನಡೆಯಲು ಸಾಧ್ಯವಾದರೆ ನಮ್ಮಲ್ಲಿ ಏಕೆ ಸಾಧ್ಯವಿಲ್ಲ. ಇಂದು ಅಂತರ್ಜಾಲದಲ್ಲಿ ಕನ್ನಡ ಬಹುಮುಂದಿದೆ. ಅದೇ ರೀತಿಯಲ್ಲಿ ವೈದ್ಯಕೀಯ ಮತ್ತು ತಂತ್ರಜ್ಞಾನದಲ್ಲಿ ಕನ್ನಡದಲ್ಲಿ ಪಾಠ ಬಂದಲ್ಲಿ ಕನ್ನಡ ಅನ್ನದ ಭಾಷೆಯಾಗುತ್ತದೆ ಆಗ ಅದು ಉಳಿಯಲು ಸಾಧ್ಯ ಎಂದರು.
ಕೊಡಗು ಕಸಾಪ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ ಈ ಕಾಲೇಜು ನಡೆಯುತ್ತಿರುವ ಸ್ಥಳ ನೂರು ವರ್ಷಗಳ ಹಿಂದೆ ಸೆಂಟ್ರಲ್ ಹೈಸ್ಕೂಲ್ ಎಂದು ಹೆಸರಾಗಿತ್ತು ಆಗ ಇಲ್ಲಿ ಶಿಕ್ಷಕರಾಗಿದ್ದ ಪಂಜೆ ಮಂಗೇಶರಾಯರು ಖ್ಯಾತ ಸಾಹಿತಿಗಳು. ಅವರ 150ನೇ ವರ್ಷಾಚರಣೆ ಈ ವರ್ಷ ನಡೆಯುತ್ತಿದೆ. ಇನ್ನೋರ್ವ ಖ್ಯಾತ ಸಾಹಿತಿ ಭಾರತೀಸುತ ಕೂಡ ಇಲ್ಲಿ ಶಿಕ್ಷಕರಾಗಿ ದುಡಿದಿದ್ದಾರೆ ಎಂದರು.
ಪದವಿ ಕಾಲೇಜಿನ ಪ್ರಾಧ್ಯಾಪಕಿ ಡಾ. ಕಾವೇರಿ ಪ್ರಕಾಶ್, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಅಂಬೇಕಲ್ ನವೀನ್ ಮಾತನಾಡಿದರು. ಕನ್ನಡ ರಾಜ್ಯೋತ್ಸವ ಪ್ರಯುಕ್ತ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಕಾಲೇಜಿನ ವಿದ್ಯಾರ್ಥಿಗಳು ಕನ್ನಡ ನಾಡಿನ ಕುರಿತು ರಚಿಸಿದ ನೃತ್ಯಗಳನ್ನು ಪ್ರದರ್ಶಿಸಿದರು.
ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ನಾಪೋಕ್ಲು ಹೋಬಳಿ ಕ.ಸಾ.ಪ ಅಧ್ಯಕ್ಷ ನೆರವಂಡ ಉಮೇಶ್, ಸಾಹಿತಿ ಬಿ. ಆರ್. ಜೋಯಪ್ಪ, ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಲೋಕನಾಥ್ ಅಮೆಚೂರು, ತಾಲೂಕು ಕ.ಸಾ.ಪ ಸಂಘಟನಾ ಕಾರ್ಯದರ್ಶಿ ಚೊಕ್ಕಾಡಿ ಪ್ರೇಮ ರಾಘವಯ್ಯ, ಮಡಿಕೇರಿ ತಾಲೂಕು ಕ.ಸಾ.ಪ ಗೌರವ ಕಾರ್ಯದರ್ಶಿ
ಪುದಿಯನೆರವನ ರಕ್ಷಿತ್ ಮಾದಯ್ಯ ಇದ್ದರು.