ನೆಲಮಂಗಲ: ಪ್ರತಿಯೊಬ್ಬ ಕಾರ್ಯಕರ್ತರಿಗೂ ತಾಳ್ಮೆ ಇರಬೇಕು. ಮುಂದೊಂದು ದಿನ ಪಕ್ಷವು ಉತ್ತಮ ಜವಾಬ್ದಾರಿ ನೀಡುತ್ತದೆ ಎಂದು ನಟ, ರಾಜ್ಯಸಭೆ ಸದಸ್ಯ ಜಗ್ಗೇಶ್ ಹೇಳಿದರು.
ಬೆಂಗಳೂರು ಉತ್ತರ ತಾಲೂಕಿನ ಮಾದನಾಯನಹಳ್ಳಿಯ ಶ್ರೀ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಯಲಹಂಕ ಕ್ಷೇತ್ರದ ಬಿಜೆಪಿ ಘಟಕ ಭಾನುವಾರ ಆಯೋಜಿಸಿದ್ದ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ತಾಯಿ ಸಮಾನ ಭಾರತಾಂಬೆಯನ್ನು ಬಿಜೆಪಿ ಪೂಜ್ಯ ಭಾವನೆಯಿಂದ ನೋಡುತ್ತಿದೆ. ಕಾರ್ಯಕರ್ತರನ್ನು ಗೌರವಿಸಿ ಉತ್ತಮ ಜವಾಬ್ದಾರಿ ನೀಡುವ ಕೆಲಸ ಮಾಡುತ್ತಿದೆ ಎಂದರು.
2007ರಲ್ಲಿ ಕಾಂಗ್ರೆಸ್ನಿಂದ ಶಾಸಕನಾಗಿದ್ದೆ. ಕಾಂಗ್ರೆಸ್ನಲ್ಲಿ ಆದ ನೋವು, ಅಗೌರವ ಸಹಿಸದೆ ಬಿಜೆಪಿ ಸೇರಿದೆ. ಭಾರತ ಸನಾತನ ಸಂಸತಿ, ದೇವರ ಅನುಗ್ರಹ ಸೇರಿ ಹಿರಿಯರು ಹಾಕಿಕೊಟ್ಟ ಹಾದಿಯಲ್ಲಿ ಪಕ್ಷ ಮುನ್ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರೂಪಿಸಿದ ಸಾಕಷ್ಟು ಸಮಾಜಮುಖಿ ಕಾರ್ಯಕ್ರಮಗಳಿಗೆ ಜನರು 2ನೇ ಬಾರಿಗೆ ಅವರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಪ್ರತಿಯೊಬ್ಬರೂ ಪಕ್ಷದ ಸಿದ್ಧಾಂತ, ನಾಯಕರ ನಿರ್ದೇಶನದಂತೆ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಚಿವ ಎಸ್.ಟಿ. ಸೋಮಶೇಖರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಉತ್ತಮ ಕಾರ್ಯಕ್ರಮ ರೂಪಿಸುವ ಮೂಲಕ ವಿಶ್ವವೇ ಭಾರತದತ್ತ ಮುಖ ಮಾಡುವಂತೆ ಮಾಡಿದ್ದಾರೆ. ಅಂತಹ ವ್ಯಕ್ತಿಯ ನಾಯಕತ್ವ ಒಪ್ಪಿಕೊಂಡು, ನನ್ನಂತೆ ಸಾಕಷ್ಟು ಜನರು ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದಿದ್ದಾರೆ ಎಂದು ಹೇಳಿದರು.
ಶಾಸಕ ಎಸ್.ಆರ್.ವಿಶ್ವನಾಥ್ ಚಾಣಕ್ಯ ರಾಜಕಾರಣಿಯಾಗಿದ್ದಾರೆ. ಬೆಂಗಳೂರಿನ ಭೂ ಮಾಫಿಯಾಕ್ಕೆ ಕಡಿವಾಣ ಹಾಕಿ ಬಿಡಿಎಗೆ 1 ಸಾವಿರ ಕೋಟಿ ರೂ.ಗೂ ಹೆಚ್ಚಿನ ಹಣ ಉಳಿಸಿಕೊಟ್ಟಿದ್ದಾರೆ. ಸಹಕಾರ ಇಲಾಖೆ ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ರಾಜ್ಯಾದ್ಯಂತ 26 ಲಕ್ಷ ರೈತರು, 9 ಲಕ್ಷ ಮಹಿಳೆಯರಿಗೆ ನರ್ಬಾಡ್ನಿಂದ 24 ಸಾವಿರ ಕೋಟಿ ರೂ. ಸಾಲ ಕೊಡಿಸಿದೆ. ರಾಜ್ಯದ 33 ಲಕ್ಷ ರೈತರಿಗೆ ಸಾಲ ಸೌಲಭ್ಯ ನೀಡಲು ಸಿಎಂ ಬಸವರಾಜ ಬೊಮ್ಮಾಯಿ ಅವರು 2 ಸಾವಿರ ಕೋಟಿ ರೂ.ಗೂ ಹೆಚ್ಚಿನ ಅನುದಾನ ಘೋಷಿಸಿದ್ದಾರೆ ಎಂದರು.
ಶಾಸಕ ಎಸ್.ಆರ್. ವಿಶ್ವನಾಥ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು 12 ವರ್ಷ ಸಿಎಂ ಆಗಿ, 8 ವರ್ಷ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಒಳ ಜಗಳದಿಂದ ಮನನೊಂದು ಸಾಕಷ್ಟು ಜನರು ಬಿಜೆಪಿಗೆ ಬರುತ್ತಿದ್ದಾರೆ. ಯಾವುದೇ ಭೇದಭಾವವಿಲ್ಲದೆ ಕ್ಷೇತ್ರದಲ್ಲಿ ಒಂದೇ ತಾಯಿ ಮಕ್ಕಳಂತೆ ಪ್ರತಿಯೊಬ್ಬರೂ ಬೆಂಗಳೂರು ಅಭಿವೃದ್ಧಿಗೆ ಶ್ರಮ ವಹಿಸುತ್ತಿದ್ದಾರೆ ಎಂದರು.
ಕಾಂಗ್ರೆಸ್ನಿಂದ ಜಿಪಂ ಸದಸ್ಯರಾಗಿದ್ದ ಮಾಜಿ ಸದಸ್ಯ ಎಚ್.ಸೀನಪ್ಪ, ವೆಂಕಟೇಶಪ್ಪ, ಆಲೂರು ರವಿಕುಮಾರ್ ನೇತೃತ್ವದಲ್ಲಿ 300ಕ್ಕೂ ಹೆಚ್ಚು ಜನರು, ವಿವಿಧ ಮುಖಂಡರು, ಗ್ರಾಪಂ ಸದಸ್ಯರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು.
ಶಾಸಕ ಕುಮಾರ್ ಬಂಗಾರಪ್ಪ, ಬೆಂಗಳೂರು ನಗರ ಜಿಪಂ ಮಾಜಿ ಅಧ್ಯಕ್ಷ ಜಿ.ಮರಿಸ್ವಾಮಿ, ಜಿಪಂ ಮಾಜಿ ಸದಸ್ಯ ಎಚ್.ಸೀನಪ್ಪ, ವೆಂಕಟೇಶಪ್ಪ, ಆಲೂರು ರವಿಕುಮಾರ್, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದಿಬ್ಬೂರು ಜಯಣ್ಣ, ಬಿಜೆಪಿ ಅಧ್ಯಕ್ಷ ಹನುಮಯ್ಯ, ನಗರಾಧ್ಯಕ್ಷ ಸತೀಶ್, ಅಧ್ಯೆ ಪದ್ಮಾವತಿ, ಮಹಿಳಾ ಮೋರ್ಚಾ ರಾಜ್ಯ ಸಮಿತಿ ಸದಸ್ಯೆ ಭಾರತಿ ವೆಂಕಟೇಶ್, ರೈತಮೋರ್ಚಾ ಜಿಲ್ಲಾಧ್ಯಕ್ಷ ಸತೀಶ್, ಮಾಧ್ಯಮ ಸಂಚಾಲಕ ಅವಿನಾಶ್ಗಣೇಶ್, ಸಹ ಸಂಚಾಲಕ ಮುಖೇಶ್, ಮುಖಂಡ ಎಸ್.ಎನ್. ರಾಜಣ್ಣ, ರಾಮಚಂದ್ರಮೂರ್ತಿ, ಗೋವಿಂದಪ್ಪ ಇದ್ದರು.