ಹೂವಿನಹಿಪ್ಪರಗಿ: ಕಳೆದ ಹತ್ತು ವರ್ಷಗಳಿಂದ ಕ್ಷೇತ್ರದ ಪ್ರತಿ ಮನೆಮನೆಗಳಿಗೂ ಭೇಟಿ ನೀಡಿದ ನಾನು ಯಾವುದು ಬೇಕು ಬೇಡ ಎನ್ನುವ ಕುರಿತು ಜನರ ನಾಡಿ ಮೀಡಿತವನ್ನು ಅರಿತಿದ್ದೇನೆ. ಜನರ ಇಚ್ಛೆಗೆ ಅನುಗುಣವಾಗಿ ಕ್ಷೇತ್ರದಲ್ಲಿ ಮೂಲಸೌಕರ್ಯ ಒದಗಿಸುವ ಕೆಲಸ ಮಾಡುವೆ ಎಂದು ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಹೇಳಿದರು.
ಬಸವನಬಾಗೇವಾಡಿ ತಾಲೂಕಿನ ದೇವರಹಿಪ್ಪರಗಿ ಕ್ಷೇತ್ರದ ವ್ಯಾಪ್ತಿಯ ಕುದರಿಸಾಲವಾಡಗಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಲೋಕೋಪಯೋಗಿ ಇಲಾಖೆಯ 2023-24ನೇ ಸಾಲಿನ ಎಸ್.ಎಚ್.ಡಿ.ಪಿ ಹಂತ-5, ಘಟಕ-1 ರಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಹೂವಿನಹಿಪ್ಪರಗಿ-ಕುದರಿಸಾಲವಾಡಗಿ-ಕಾಮನಕೇರಿ ಜಿಲ್ಲಾ ಮುಖ್ಯ ರಸ್ತೆ ಕಿ.ಮೀ 0.00 ದಿಂದ 10 ಕಿ.ಮೀ.ವರೆಗಿನ (ಆಯ್ದ ಭಾಗಗಳಲ್ಲಿ) 4 ಕಿ.ಮೀ. ರಸ್ತೆಯ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ನಾನು ಮೂರನೇ ಬಾರಿಗೆ ಸ್ಪರ್ಧಿಸಿ ನಿಮ್ಮೆಲ್ಲರ ಸಹಕಾರದಿಂದ ಶಾಸಕನಾಗಿದ್ದು, ನಿಮಗೆ ಬೇಕಾಗುವ ಎಲ್ಲ ಸವಲತ್ತುಗಳನ್ನು ಕೊಡುವುದು ನನ್ನ ಧರ್ಮ, ಕರ್ತವ್ಯವಾಗಿದೆ. ನಮ್ಮ ಕ್ಷೇತ್ರದ ಯಾವ ಹಳ್ಳಿಯಲ್ಲಿ ಯಾವ ಸಮಸ್ಯೆ ಇದೆ ಅನ್ನೋದು ನನಗೆ ಗೊತ್ತಿದೆ. ನಾನು ವಿರೋಧ ಪಕ್ಷದ ಶಾಸಕನಾಗಿರುವುದರಿಂದ ಗ್ಯಾರಂಟಿ ಯೋಜನೆಗಳಿಂದಾಗಿ ನಾನು ಏನೂ ಮಾಡೋಕೆ ಸಾಧ್ಯವಾಗುತ್ತಿಲ್ಲ. ಗ್ರಾಮದಲ್ಲಿರುವ ಬೈಪಾಸ್ ರಸ್ತೆ ಅಭಿವೃದ್ಧಿ ಕೆಲಸಕ್ಕೆ 2 ಕೋಟಿ ರೂ. ಮಂಜೂರಾಗಿದ್ದು ಗುಣಮಟ್ಟದ ಕಾಮಗಾರಿ ಜೊತೆಗೆ ಸುಂದರ ಬೀದಿ ದೀಪಗಳನ್ನು ಅಳವಡಿಸಲಾಗುವುದು ಎಂದರು.
ಕುದರಿಸಾಲವಾಡಗಿ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪದವಿ ಪೂರ್ವ ಕಾಲೇಜನ್ನು ಗ್ರಾಮದಲ್ಲಿ ಮಂಜೂರು ಮಾಡಿಸುತ್ತೇನೆ. ಇನ್ನೂ ಕೆಲವೇ ದಿನಗಳಲ್ಲಿ ಪಶು ಆಸ್ಪತ್ರೆ ಮಂಜೂರು ಆಗಲಿದೆ. ಶಾಲೆಗಳ ಸುತ್ತ ಕಾಂಪೌಂಡ್ ನಿರ್ಮಾಣ ಹಾಗೂ ಶಾಲಾ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಘಟಕಗಳನ್ನು ಸ್ಥಾಪಿಸಲಾಗುವುದು ಎಂದರು.
ಮುಂದಿನ ದಿನಗಳಲ್ಲಿ ಸೋಮನಾಳದಿಂದ ನಂದಿಹಾಳ ರಸ್ತೆ ಹಾಗೂ ರಾಮನಹಟ್ಟಿ ಗ್ರಾಮದ ರಸ್ತೆ ಸುಧಾರಣೆ ಕಾಮಗಾರಿಗೆ ಒತ್ತು ನೀಡುವ ಭರವಸೆ ನೀಡಿದರು. ಲೋಕೋಪಯೋಗಿ ಇಲಾಖೆಯ ಎಇಇ ಜೆ.ವಿ.ಕಿರಸೂರ ಮಾತನಾಡಿದರು.
ಗ್ರಾಪಂ ಅಧ್ಯಕ್ಷೆ ಶಕುಂತಲಾ ಲಗಳಿ, ಉಪಾಧ್ಯಕ್ಷ ಮುತ್ತಪ್ಪ ಇಂಗಳಗಿ, ಮುಖಂಡರಾದ ಶೇಖರಗೌಡ ಪಾಟೀಲ, ಗುರುನಗೌಡ ಪಾಟೀಲ, ಅನೀಲಗೌಡ ಪಾಟೀಲ, ಸಂಗನಗೌಡ ಪಾಟೀಲ, ಸಂಗಮೇಶ ಹಳ್ಳುರ, ಪಿಕೆಪಿಎಸ್ ಬ್ಯಾಂಕ್ ಅಧ್ಯಕ್ಷ ಸಚೀನಗೌಡ ಪಾಟೀಲ, ಶಿವಾನಂದ ಬಾಗೇವಾಡಿ, ಬಸವರಾಜ ಡೆಂಗಿ, ಸಾಹೇಬಗೌಡ ಬಿರಾದಾರ, ಅಬ್ದುಲಸಾಬ ನಾಯಕೋಡಿ, ಮಕ್ಬುಲ್ ಅಲ್ದಾಳ, ಎಂ.ಎಂ.ಬಿಳವಾಡ, ಗುತ್ತಿಗೆದಾರ ರಾಮು ಕವಲಗಿ, ಅಣ್ಣಪ್ಪ ಅಣ್ಣೇಪ್ಪನವರ. ಎಇ ಧರ್ಮರಾಜ ಕಲಬುರ್ಗಿ, ಮುಸಾ ಕಾಚಾಪುರ, ಬಂದೇನವಾಜ್ ಕತ್ನಳ್ಳಿ ಇತರರಿದ್ದರು.