ಆರ್.ತುಳಸಿಕುಮಾರ್
ಬೆಂಗಳೂರು: ಮಹಾನಗರದಲ್ಲಿ ಮುಂಗಾರು ವೇಳೆ ಸಂಭವಿಸುವ ಅನಾಹುತಗಳಿಗೆ ರಾಜಕಾಲುವೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿರುವುದೇ ಕಾರಣವಾಗಿದೆ. ಇದು ಬಿಬಿಎಂಪಿ ಹಾಗೂ ಸರ್ಕಾರಕ್ಕೆ ತಿಳಿದಿದ್ದರೂ, ರಾಜಕಾಲುವೆಗಳುದ್ದಕ್ಕೂ ಉಂಟಾಗಿರುವ ಒತ್ತುವರಿ ತೆರವು ಮಾಡದಿರುವುದು ಸಮಸ್ಯೆಯನ್ನು ಜೀವಂತ ಇರಿಸಿದೆ. ಇದರಿಂದಾಗಿ ತಗ್ಗು ಪ್ರದೇಶ ಹಾಗೂ ಒತ್ತುವರಿಗೆ ಒಳಗಾದ ಸ್ಥಳಗಳಲ್ಲಿ ನೆಲೆಸಿರುವ ಜನರು ಭಾರೀ ಮಳೆ ಬಂದಲ್ಲಿ ರಾತ್ರಿಯಿಡಿ ನಿದ್ರಾಭಂಗಕ್ಕೆ ಒಳಗಾಗುವಂತಾಗಿದೆ.
ನಗರದಲ್ಲಿ ಹೆಚ್ಚು ಕೆರೆಗಳಿರುವ ಕಾರಣ ನೈಸರ್ಗಿಕವಾಗಿ ಮಳೆನೀರು ಹರಿದುಹೋಗಲು ರಾಜಕಾಲುವೆಗಳ ಜಾಲ ವಿಸ್ತಾರವಾಗಿದೆ. ಇವು ಒಂದಕ್ಕೊಂದು ಬೆಸೆದುಕೊಂಡು ನೀರು ಸರಾಗವಾಗಿ ಹರಿಯಲು ವಸತಿ ಪ್ರದೇಶಗಳಲ್ಲೂ ಹಾದುಹೋಗಿವೆ. ಸರಿಸುಮಾರು 860 ಕಿ.ಮೀ. ಉದ್ದದಷ್ಟಿರುವ ಈ ಜಾಲದಲ್ಲಿ ಪ್ರಥಮ ಹಾಗೂ ದ್ವಿತೀಯ ಹಂತದ ಮಳೆನೀರುಗಾಲುವೆಗಳಿವೆ. ಇವುಗಳನ್ನು ಪ್ರತೀವರ್ಷ ಮುಂಗಾರು ಮುನ್ನ ಸ್ವಚ್ಚಗೊಳಿಸಿ ಹೂಳೆತ್ತುವ ಮೂಲಕ ಮಳೆನೀರು ಸರಾಗವಾಗಿ ಹರಿಯುವಂತೆ ಮಾಡಬೇಕು. ಆದರೆ, ನಿರ್ವಹಣವಾ ವೆಚ್ಚಕ್ಕೆ ದೊಡ್ಡ ಮೊತ್ತ ಖರ್ಚು ಮಾಡಲಾಗದೆ ಪಾಲಿಕೆ ನೆರೆ ಉಂಟಾಗುವ ಸ್ಥಳಗಳನ್ನು ಮಾತ್ರ ಕೇಂದ್ರೀಕರಿಸಿದೆ. ಉಳಿದೆಡೆ ದಿಢೀರ್ ಪ್ರವಾಹ ಉಂಟಾದಾಗಲೇ ಅಧಿಕಾರಿ ವರ್ಗ ಎಚ್ಚೆತ್ತುಕೊಳ್ಳುವುದುಂಟು. ಈ ದ್ವಂದ್ವ ನಿಲುವು ರಾಜಕಾಲುವೆಯ ಒಟ್ಟಾರೆ ನಿರ್ವಹಣೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿ ಅವಘಡಗಳಿಗೆ ಆಸ್ಪದ ನೀಡಿದಂತಾಗಿದೆ.
ಮುಖ್ಯವಾಗಿ ಒತ್ತುವರಿ ಆಗಿರುವ ಕಡೆಗಳಲ್ಲಿ ಸಮರ್ಪಕವಾದ ಸರ್ವೆ ಕಾರ್ಯ ನಡೆದಿಲ್ಲ ಎಂಬುದು ಪಾಲಿಕೆಯ ವಾದವಾಗಿದೆ. ಒತ್ತುವರಿ ಆಗಿದ್ದಲ್ಲಿ ಅದನ್ನು ಪತ್ತೆ ಹಚ್ಚಿ ತೆರವು ಮಾಡಲು ಎಲ್ಲ ಕಾರ್ಯವನ್ನೂ ಕೈಗೊಳ್ಳಬೇಕು. ಸರ್ವೆಗೆ ಬೇಕಾದ ಅಗತ್ಯ ಸಹಾಯವನ್ನು ಜಿಲ್ಲಾಡಳಿತದಿಂದ ಪಡೆದು ಕಾನೂನು ಪ್ರಕಾರ ಮುಂದುವರಿಯಬೇಕು. ಇದನ್ನು ಮಾಡದ ಅಧಿಕಾರಿ ವರ್ಗ ಸಿಬ್ಬಂದಿ, ಉಪಕರಣ, ಹಣದ ಸಮಸ್ಯೆ ಮುಂದಿಟ್ಟು ದಿನದೂಡುತ್ತಿದೆ ಎಂದು ಕೆಲ ಮಾಜಿ ಕಾರ್ಪೊರೇಟರ್‌ಗಳು ಬಿಬಿಎಂಪಿ ಕಾರ್ಯವೈಖರಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ತೆರವು ಕಾರ್ಯಕ್ಕೆ ಹಿಂದೇಟು:
ನಗರದ ಬಹುತೇಕ ಕಡೆಗಳಲ್ಲಿರುವ ರಾಜಕಾಲುವೆಗಳು ಒತ್ತುವರಿಗೆ ಒಳಗಾಗಿವೆ. ತೆರವು ಕಾರ್ಯವನ್ನು ಸಮರ್ಪಕವಾಗಿ ನಡೆಸದಿರುವುದು ಹೊಸ ಪ್ರಕರಣಗಳು ಸೇರ್ಪಡೆಯಾಗಲು ಅವಕಾಶವಾಗಿದೆ. ಬಿಬಿಎಂಪಿ ಒಂದು ಕಡೆಯಿಂದ ತೆರವು ಮಾಡಿಕೊಂಡು ಬರುವ ವೇಳೆಗೆ ಮತ್ತೊಂದು ಕಡೆಯಲ್ಲಿ ಒತ್ತುವರಿ ಆಗಿರುತ್ತದೆ. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿರುವುದು ಒತ್ತುವರಿ ಕಣ್ಣಾಮುಚ್ಚಾಲೆ ಆಟದಂತಾಗಿದೆ. ಪ್ರಸ್ತುತ ಪಾಲಿಕೆಯ ಎಂಟೂ ವಲಯಗಳಲ್ಲಿ 1,963 ಒತ್ತುವರಿ ಪ್ರಕರಣಗಳು ಬಾಕಿ ಉಳಿದಿವೆ. ಇವುಗಳಲ್ಲಿ ಹೆಚಿನವು ಹೊರವಲಯದಲ್ಲೇ ಇವೆ. ಅದರಲ್ಲೂ ಯಲಹಂಕ, ದಾಸರಹಳ್ಳಿ, ಬೊಮ್ಮನಹಳ್ಳಿ ಹಾಗೂ ಮಹದೇವಪುರ ವಲಯಗಳಲ್ಲಿ ನಗರದ ಒಟ್ಟು ಒತ್ತುವರಿಯ ಶೇ.75ರಷ್ಟಿದೆ. ಇಲ್ಲೆಲ್ಲ ದಶಕದಿಂದ ತೆರವು ಕಾರ್ಯವನ್ನು ಸಮರ್ಪಕವಾಗಿ ಮಾಡದಿರುವುದು ಸಮಸ್ಯೆಯನ್ನು ಜೀವಂತ ಇರಿಸಿದೆ.
ಪುನಶ್ಚೇತನ ನೆಪದಿಂದ ಕಾರ್ಯಾಚರಣೆ ಸ್ಥಗಿತ:
ಯಲಹಂಕ ವಲಯದಲ್ಲಿ 100 ಕಿ.ಮೀ.ಗಿಂತ ಕಡಿಮೆ ಉದ್ದದ ರಾಜಕಾಲುವೆ ಇದ್ದು 379 ಒತ್ತುವರಿ ಪ್ರಕರಣಗಳನ್ನು ತೆರವು ಮಾಡದೆ ಬಾಕಿ ಉಳಿಸಿಕೊಳ್ಳಲಾಗಿದೆ. ಈ ವಲಯಕ್ಕೆ ಸೇರಿದ ಬ್ಯಾಟರಾಯನಪುರ, ಕೊಡಿಗೇಹಳ್ಳಿ, ಕೆಂಪಾಪುರ, ನಾಗವಾರ, ಥಣಿಸಂದ್ರ-ರಾಚೇನಹಳ್ಳಿ, ಬೈರತಿ ಖಾನೆ ಪ್ರದೇಶದಲ್ಲಿ ಅಧಿಕ ಪ್ರಮಾಣದ ಒತ್ತುವರಿಯಾಗಿದೆ. ಇಲ್ಲೆಲ್ಲ ಅಧಿಕಾರಿಗಳು ತೆರವುಗೊಳಿಸುವ ಗೋಜಿಗೆ ಹೋಗಿಲ್ಲ. ಕಟ್ಟಡಗಳಿಲ್ಲದಿದ್ದರೂ, ತೆರವುಗೊಳಿಸದ ಕಾರಣ ಹೊಸದಾಗಿ ಒತ್ತುವರಿ ಪ್ರಕರಣಗಳು ವರದಿಯಾಗುತ್ತಿವೆ. ಮಹದೇವಪುರ ವಲಯದಲ್ಲಿ ಬೆಳ್ಳಂದೂರು ಹಾಗೂ ವರ್ತೂರು ಕೆರೆ ವಿಸ್ತರ ಹೆಚ್ಚು ಇರುವುದರಿಂದ ಅವುಗಳ ಹರಿವಿನ ಹಾದಿ ಕೂಡ ಸಾಕಷ್ಟಿದೆ. ಬರ್ ವಲಯವೂ ಒತ್ತುವರಿಗೆ ಒಳಗಾಗಿದ್ದರೂ, ರಾಜಕಾಲುವೆಗಳ ಪುನಶ್ಚೇತನ ನೆಪದಲ್ಲಿ ತೆರವು ಕಾರ್ಯ ಮಾಡುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಕೋರ್ಟ್‌ನತ್ತ ಅನಗತ್ಯ ಬೊಟ್ಟು:
ನಗರದಲ್ಲಿರುವ 860 ಕಿ.ಮೀ. ಉದ್ದದ ರಾಜಕಾಲುವೆ ಪೈಕಿ 12.15 ಕಿ.ಮೀ. ವ್ಯಾಪ್ತಿಯಲ್ಲಿನ ಒತ್ತುವರಿ ಪ್ರಕರಣಗಳು (150) ಮಾತ್ರ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇದೆ. ಇವುಗಳಲ್ಲಿ ಬಹುತೇಕವು ವರ್ಷಗಳಿಂದ ಬಾಕಿ ಉಳಿದುಕೊಂಡಿವೆ. ಕೋರ್ಟ್ ಕೇಸ್‌ಗಳಿಗೆ ಪ್ರಬಲ ಸಾಕ್ಷ್ಯ ಒದಗಿಸಿ ಪ್ರಕರಣಗಳನ್ನು ಗೆಲ್ಲುವ ಸಾಮರ್ಥ್ಯವುಳ್ಳವರು ಪಾಲಿಕೆಯ ಕಾನೂನು ಕೋಶದಲ್ಲಿ ಇಲ್ಲ. ಈ ಲೋಪದಿಂದಾಗಿ ನ್ಯಾಯಾಲಯದಲ್ಲಿರುವ ಪ್ರಕರಣಗಳಿಗೆ ತೆರವುಗೊಳಿಸುವ ಇಚ್ಚಾಶಕ್ತಿ ಕಾರಣದಿರುವುದು ಸಮಸ್ಯೆಯನ್ನು ಹಿಗ್ಗಿಸಿದೆ.
ಸಚಿವರ ಸೂಚನೆಗಿಲ್ಲ ಕಿಮ್ಮತ್ತು?:
ಬ್ಯಾಟರಾಯನಪುರ ಹಾಗೂ ಹೆಬ್ಬಾಳದಲ್ಲಿ ದಶಕದಿಂದ ರಾಜಕಾಲುವೆಗಳ ಒತ್ತುವರಿ ತೆರವು ಆಗದ ಕಾರಣ ಇಲ್ಲಿನ ಇಬ್ಬರೂ ಸಚಿವರು ಬಿಬಿಎಂಪಿ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇತ್ತೀಚಿಗಷ್ಟೇ ಕೆಲ ನಿರ್ದಿಷ್ಟ ಪ್ರದೇಶಗಳಲ್ಲಿ ತೆರವುಗೊಳಿಸಲು ಅಧಿಕಾರಿಗಳಿಗೆ ಖಡಕ್ ಸೂಚನೆ ನೀದ್ದರೂ ತೆರವು ಕಾರ್ಯ ಆಗಿಯೇ ಇಲ್ಲ. ಸಂಬಂಧಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ನೋಟಿಸ್ ನೀಡುವ ಎಚ್ಚರಿಕೆಗೂ ಜಗ್ಗದ ಇಂಜಿನಿಯರ್‌ಗಳ ಧಾರ್ಷ್ಟ್ಯ ಸಚಿವರನ್ನು ತಬ್ಬಿಬ್ಬುಗೊಳಿಸಿದೆ.
ರಾಜಕಾಲುವೆ ತೆರವು ಪ್ರಕರಣಗಳ ಬಾಕಿ ವಿವರ:
ವಲಯ ಪ್ರಕರಣ
ದಕ್ಷಿಣ 56
ಪೂರ್ವ 126
ಪಶ್ಚಿಮ 95
ಯಲಹಂಕ 379
ದಾಸರಹಳ್ಳಿ 366
ಮಹದೇವಪುರ 523
ಬೊಮ್ಮನಹಳ್ಳಿ 204
ಆರ್.ಆರ್.ನಗರ 104
ಕೋರಮಂಗಲ ವ್ಯಾಲಿ 110
ಪ್ರವಾಹ ಉಂಟಾದಾಗ ಮಾತ್ರ ರಾಜಕಾಲುವೆಗಳ ತೆರವು ಕಾರ್ಯದ ಬಗ್ಗೆ ಕಾಳಜಿ ವಹಿಸದೆ ನಿರಂತರವಾಗಿ ಮುಂದುವರಿಸಿಕೊಂಡು ಹೋಗಬೇಕು. ಒತ್ತುವರಿ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸದಿದ್ದಲ್ಲಿ ಭವಿಷ್ಯದಲ್ಲಿ ಪ್ರಮಾದ ಉಂಟಾಗುವುದು ನಿಶ್ಚಿತ. ತೆರವು ವೇಳೆ ಯಾರ ಒತ್ತಡಕ್ಕೂ ಒಳಗಾಗದೆ ಮುಲಾಜಿಲ್ಲದೆ ಕ್ರಮ ಆದಾಗ ರಾಜಕಾಲುವೆಗಳನ್ನು ಒತ್ತುವರಿ ಮಾಡಲು ಜನ ಹೆದರುತ್ತಾರೆ.
- ಮುನೀಂದ್ರಕುಮಾರ್, ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ