ಜಿಲ್ಲೆ

ಆಧುನಿಕ ಭಾರತದ ಶಿಲ್ಪಿ ರಾಜೀವ್ ಗಾಂಧಿ

ಮಡಿಕೇರಿ: ಮಾಜಿ ಪ್ರಧಾನಿ ಭಾರತ ರತ್ನ ರಾಜೀವ್ ಗಾಂಧಿಯವರು ಆಧುನಿಕ ಭವ್ಯ ಭಾರತದ ಶಿಲ್ಪಿ ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಬಣ್ಣಿಸಿದರು.

ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಹಾಗೂ ಕಾಂಗ್ರೆಸ್ ಹಿಂದುಳಿದ ವರ್ಗದ ಘಟಕಗಳ ಆಶ್ರಯದಲ್ಲಿ ಬುಧವಾರ ನಡೆದ ದಿ.ರಾಜೀವ್ ಗಾಂಧಿಯವರ ೮೧ನೇ ಹಾಗೂ ದಿ.ದೇವರಾಜ್ ಅರಸು ರವರ ೧೧೦ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ದೇಶದ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನಿಯಾದ ರಾಜೀವ್ ಗಾಂಧಿ ಯವರು ತಮ್ಮ ದೂರದೃಷ್ಟಿಯ ಚಿಂತನೆಗಳನ್ನು ಸಾಕಾರಗೊಳಿಸಿ ಭಾರತ ದೇಶವನ್ನು ಅಭಿವೃದ್ಧಿ ಪತದತ್ತ ಕೊಂಡೊಯ್ದರು. ಅದೇ ರೀತಿ ಕರ್ನಾಟಕ ರಾಜ್ಯದ ಸುಧೀರ್ಘ ಅವಧಿಯ ಮುಖ್ಯ ಮಂತ್ರಿಗಳಾಗಿ ಸೇವೆ ಸಲ್ಲಿಸಿದ ದೇವರಾಜ್ ಅರಸು ರವರು ಸಮಾನತೆಯ ಹರಿಕಾರರಾಗಿ ತಮ್ಮ ಹೆಸರನ್ನು ಚಿರಸ್ಥಾಯಿಗೊಳಿಸಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಕಾಂಗ್ರೆಸ್ ಗೌರವ ಕಾರ್ಯದರ್ಶಿ ವಿ.ಪಿ.ಸುರೇಶ್, ಕಾಂಗ್ರೆಸ್ ಪಕ್ಷದ ಮಹಾನ್ ನಾಯಕರುಗಳಾದ ರಾಜೀವ್ ಗಾಂಧಿ ಮತ್ತು ದೇವರಾಜ್ ಅರಸು ರವರ ಸಾಧನೆಗಳನ್ನು ಪ್ರತಿಯೊಬ್ಬರಿಗೆ ತಿಳಿಸುವ ಕೆಲಸವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕು ಎಂದು ಕರೆ ನೀಡಿದರು.

ಮಡಿಕೇರಿ ತಾಲೂಕು ಅಕ್ರಮ, ಸಕ್ರಮ ಸಮಿತಿಯ ಅಧ್ಯಕ್ಷ ನೆರವಂಡ ಉಮೇಶ್ ಮಾತನಾಡಿ, ದೇವರಾಜ್ ಅರಸು ಅವರಿಗೆ ಸಮಾನವಾದ ಮತ್ತೊಬ್ಬ ಮುಖ್ಯಮಂತ್ರಿಯನ್ನು ಈ ರಾಜ್ಯ ಮತ್ತು ದೇಶದಲ್ಲಿ ಕಾಣಲು ಸಾಧ್ಯವಿಲ್ಲ. ಅವರ ಸಮಾಜವಾದಿ ಚಿಂತನೆಗಳು ಬಡವರು, ದುರ್ಬಲರಿಗೆ ವರದಾನವಾಯಿತು ಎಂದು ತಿಳಿಸಿದರು.

ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿ, ಕಾಂಗ್ರೆಸ್ ಪಕ್ಷದ ನೇತಾರರ ಬಗ್ಗೆ ಹೆಚ್ಚು ಕಾರ್ಯಕ್ರಮ ರೂಪಿಸಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿಂದುಳಿದ ಘಟಕದ ಅಧ್ಯಕ್ಷ ಜಿ.ಸಿ.ಜಗದೀಶ್, ಸೇವಾ ದಳದ ಜಿಲ್ಲಾಧ್ಯಕ್ಷ ಕಾನೆ ಹಿತ್ಲು ಮೊಣ್ಣಪ್ಪ ಕೆಡಿಪಿ ಸದಸ್ಯರಾದ ಬಾಚಿಮಂಡ ಲವ ಚಿಣ್ಣಪ್ಪ, ನಗರ ಸಭಾ ಸದಸ್ಯರಾದ ಮಂಡಿರ ಸದಾ ಮುದ್ದಪ್ಪ, ಯಾಕುಬ್, ಮುದ್ದುರಾಜ್, ಅನುಷ್ಠಾನ ಸಮಿತಿ ಸದಸ್ಯರಾದ ಪ್ರಭು ರೈ, ಕೆ.ಜಿ.ಪೀಟರ್, ಮಾಜಿ ಸೈನಿಕ ಘಟಕದ ಅಧ್ಯಕ್ಷ ಬೊಳ್ಳಿಯಂಡ ಗಣೇಶ್ ಸೇರಿದಂತೆ ಕಾರ್ಯಕರ್ತರು ಪ್ರಮುಖರು ಉಪಸ್ಥಿತರಿದ್ದರು.