ಯಾದಗಿರಿ: ಇಲ್ಲಿನ ಜನನಿಬಿಡ ಬಡಾವಣೆಯಲ್ಲಿ ಒಂದಾದ ರಾಜೀವಗಾಂಧಿ ನಗರದಲ್ಲಿನ ಮುಖ್ಯರಸ್ತೆಯ ಮಧ್ಯಭಾಗದಲ್ಲಿ ಬೃಹದಾಕಾರವಾದ ಕಂದಕ ನಿರ್ಮಾಣವಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಈ ರಸ್ತೆಯಲ್ಲಿ ಕಂದಕ ನಿರ್ಮಾಣಗೊಂಡು ಆರೇಳು ತಿಂಗಳು ಕಳೆದರೂ ನಗರಸಭೆ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ ಎಂದು ಬಡಾವಣೆ ನಿವಾಸಿಗಳು ಆರೋಪಿಸಿದ್ದಾರೆ. ಅಲ್ಲದೆ ಈ ಬಡಾವಣೆಯಲ್ಲಿ ಪ್ರತಿಷ್ಠಿತ ಮಲ್ಪಿಸ್ಪೆಷಾಲಿಟಿ ಆಸ್ಪತ್ರೆ ಇರುವ ಕಾರಣ ನಿತ್ಯವೂ ನೂರಾರು ಜನ ಇಲ್ಲಿಗೆ ಬರುತ್ತಾರೆ. ಅಕಸ್ಮಾತ್ ಮೈಮರತರೆ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ.
ರಸ್ತೆಯ ಮಧ್ಯಭಾಗದಲ್ಲಿ ನಿಮರ್ಾಣವಾದ ಕಂದಕದಲ್ಲಿ ಮುಳ್ಳುಕಂಟಿ ಬೆಳೆದ ವಿಷಜಂತುಗಳ ಹಾವಳಿ ಸಹ ಹೆಚ್ಚಾಗಿದೆ. ಈ ರಸ್ತೆಯಲ್ಲಿ ಸಣ್ಣಪುಟ್ಟ ಮಕ್ಕಳು ಆಟವಾಡುತ್ತಾರೆ. ಇದು ಪಾಲಕರ ನಿದ್ದೆಗೆಡಿಸಿದ್ದು, ನಿತ್ಯ ಅಧಿಕಾರಿಗಳಿಗೆ ಹಿಡಿಶಾಪ ಹಾಕುವಂತಾಗಿದೆ. ಜಿಲ್ಲಾ ಕೇಂದ್ರದಲ್ಲಿನ ರಸ್ತೆಗಳ ಸ್ಥಿತಿ ಈ ರೀತಿಯಾದರೆ ಇನ್ನೂ ಗ್ರಾಮೀಣ ಭಾಗದಲ್ಲಿನ ಪರಸ್ಥಿತಿ ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂಬಂತಾಗಿದೆ.
ಇನ್ನೇನು ಮಳೆಗಾಲ ಆರಂಭವಾಗಿರುವುದರಿಂದ ಈ ಕಂದಕದಲ್ಲಿ ನೀರು ತುಂಬಿ ಸಾಂಕ್ರಾಮಿಕ ರೋಗ ಹರಡುವ ಎಲ್ಲ ಸಾಧ್ಯತೆಗಳು ಇವೆ. ಮೊದಲೇ ಜಿಲ್ಲೆಯಲ್ಲಿ ಕರೊನಾ ವೈರಸ್ನ ಧಾಂಗುಡಿ ಹೆಚ್ಚಾಗಿದ್ದು, ಈ ವೇಳೆ ಸಾಂಕ್ರಾಮಿಕ ರೋಗಗಳು ಸೇರಿಕೊಂಡರೆ ನಿವಾಸಿಗಳ ಸ್ಥಿತಿ ಚಿಂತಾಜನಕವಾಗಲಿದೆ.
ಕೂಡಲೇ ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಿ, ಈ ರಸ್ತೆ ದುರಸ್ತಿಗೊಳಿಸಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ