ಜಿಲ್ಲೆ

ಹಣಕ್ಕಾಗಿ ಬೆದರಿಕೆ ಕೇಸ್, ಹಿಂದು ಮಹಾಸಭಾದ ರಾಜೇಶ್ ಪವಿತ್ರನ್ ಬಂಧನ

ಮಂಗಳೂರು: ಉದ್ಯಮಿಯೋರ್ವರಿಗೆ ಚಿನ್ನ ಹಾಗೂ ಹಣಕ್ಕಾಗಿ ಖಾಸಗಿ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸುವ ಬೆದರಿಕೆ ಹಾಕಿದ ರಾಜ್ಯ ಹಿಂದು ಮಹಾ ಸಭಾದ ರಾಜೇಶ್ ಪವಿತ್ರನ್(42) ವಿರುದ್ಧ ದೂರು ದಾಖಲಿಸಿಕೊಂಡಿರುವ ಸುರತ್ಕಲ್ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಕಾವೂರು ನಿವಾಸಿ ಸುರೇಶ್ ಎಂಬುವರು ಸುರತ್ಕಲ್‌ನಲ್ಲಿ ರಾಜೇಶ್ ಪವಿತ್ರನ್ ಜತೆ ಪಾಲುದಾರಿಕೆಯಲ್ಲಿ ಸ್ರಾನ್ ಇಂಟರ್ ನ್ಯಾಷನಲ್ ಟ್ರೇಡಿಂಗ್ ಎಂಬ ಹೆಸರಿನಲ್ಲಿ ವ್ಯವಹಾರ ನಡೆಸಲು ಮುಂದಾಗಿದ್ದರು. ಆದರೆ ರಾಜೇಶ್ ಪವಿತ್ರನ್ ಅವ್ಯವಹಾರಗಳು ಗಮನಕ್ಕೆ ಬಂದುದರಿಂದ ಪಾಲುದಾರಿಕೆಯಿಂದ ಹೊರ ಬರಲು ನಿರ್ಧರಿಸಿದ್ದರು.

ಇದರಿಂದ ಆಕ್ರೋಶಗೊಂಡ ಆರೋಪಿಯು ಸುರೇಶ್ ಅವರ ಲ್ಯಾಪ್‌ಟಾಪ್ ವಶಕ್ಕೆ ಪಡೆದು ಹೆಚ್ಚುವರಿ ಹಣ ನೀಡಬೇಕು, ಬ್ಯಾಂಕ್‌ನಲ್ಲಿರುವ ಚಿನ್ನವನ್ನು ತನ್ನ ಹೆಸರಿಗೆ ಮಾಡಿಕೊಡಬೇಕು. ಇಲ್ಲದಿದ್ದಲ್ಲಿ ಅದರಲ್ಲಿದ್ದ ಎಲ್ಲ ಖಾಸಗಿ ಮಾಹಿತಿ ಬಹಿರಂಗ ಪಡಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ.

ಈ ಬಗ್ಗೆ ಸುರೇಶ್ ಸುರತ್ಕಲ್ ಠಾಣೆಯಲ್ಲಿ ದೂರು ನೀಡಿದ್ದು, ಅದರಂತೆ ಪೊಲೀಸರು ಕ್ರಮ ಕೈಗೊಂಡು ರಾಜೇಶ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.