ಜಿಲ್ಲೆ

ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೈಜೋಡಿಸಲು ರಾಜೇಶ್ ಪದ್ಮನಾಭ ಮನವಿ

ಮಡಿಕೇರಿ: ಜನವರಿ ೨೧ ರಂದು ನಡೆಯಲಿರುವ ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ಧೂರಿಯಾಗಿ ಆಚರಿಸಲು ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಜೇಶ್ ಪದ್ಮನಾಭ ಮನವಿ ಮಾಡಿದರು.


ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಆರ್ಜಿ ಗ್ರಾಮದ ವಿಎಸ್‌ಎಸ್‌ಎನ್‌ಎಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯ ಸಮ್ಮೇಳನ ಅದ್ಧೂರಿಯಾಗಿ ಆಚರಿಸುವ ಕುರಿತು ಎಲ್ಲರೂ ಕೈ ಜೋಡಿಸಬೇಕು. ಎಲ್ಲ ಸಮಾಜದ ಮುಖಂಡರು ಹಾಗೂ ಕನ್ನಡಪರ ಸಂಘಟನೆಗಳು ಮುಂದೆ ಬರಬೇಕು ಎಂದು ಮನವಿ ಮಾಡಿದರು.


ಎಲ್ಲ ಸಮುದಾಯದ ಮುಖಂಡರನ್ನೊಳಗೊಂಡಂತೆ ಆರೋಗ್ಯ, ಸಾಂಸ್ಕೃತಿಕ, ಆಹಾರ, ಸ್ಮರಣ ಸಂಚಿಕೆ ಸೇರಿದಂತೆ ೮ ಸಮಿತಿ ರಚಿಸಲಾಗಿದ್ದು, ಪ್ರತಿ ಸಮಿತಿಗೆ ಮುಖ್ಯಸ್ಥರನ್ನು ಆಯ್ಕೆ ಮಾಡಲಾಗಿದೆ. ಸಮ್ಮೇಳನದಲ್ಲಿ ಹೆಸರಾಂತ ಸಾಹಿತಿಗಳು, ಗಣ್ಯರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ಯಶಸ್ಸಿಗೆ ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿಗಳು, ಸಾಹಿತ್ಯ ಪರಿಷತ್‌ನ ಎಲ್ಲಾ ಪದಾಧಿಕಾರಿಗಳು, ಸದಸ್ಯರು, ಕನ್ನಡ ಪರ ಸಂಘಟನೆಗಳು, ಸಾರ್ವಜನಿಕರು ಶ್ರಮಿಸಬೇಕೆಂದು ಮನವಿ ಮಾಡಿದರು.


ಆರ್ಜಿ ಮತ್ತು ಬೇಟೋಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಮಣಿ ಮಾತನಾಡಿ, ನಮ್ಮ ಗ್ರಾಮದಲ್ಲಿ ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಕೆಲಸವಾಗಬೇಕು. ಕನ್ನಡ ಸಾಹಿತ್ಯ ಸಮ್ಮೇಳನಗಳು ನಗರ ಪ್ರದೇಶಗಳಿಗೆ ಸೀಮಿತವಾಗದೆ ಗ್ರಾಮೀಣ ಮಟ್ಟದಲ್ಲಿಯೂ ಕನ್ನಡದ ಕಂಪು ಪಸರಿಸಬೇಕು. ಈ ಉದ್ದೇಶದಿಂದ ನಮ್ಮ ಗ್ರಾಮದಲ್ಲಿ ಮೊದಲ ಬಾರಿಗೆ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ನಾಡು ನುಡಿಯ ರಕ್ಷಣೆಗೆ ಕಟಿಬದ್ಧರಾಗಬೇಕು ಎಂದು ಹೇಳಿದರು.


ನಿವೃತ್ತ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೆಶಕ ಪಿ.ಎಸ್.ಮಚ್ಚಾಡೋ ಮಾತನಾಡಿ, ಸಮ್ಮೇಳನದ ಅಂಗವಾಗಿ ರಚಿಸಲಾಗಿರುವ ಎಲ್ಲಾ ಉಪಸಮಿತಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು. ಕನ್ನಡ ನಾಡು ನುಡಿ ನೆಲ ಜಲದ ರಕ್ಷಣೆಗಾಗಿ ಹೋರಾಡಿದ ಮಹಾನುಭಾವರನ್ನು ಸ್ಮರಿಸುವ ಕೆಲಸ ಆಗಬೇಕು. ತಾಲೂಕು ಮಟ್ಟದಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲರೂ ಜಾತಿ, ಪಕ್ಷ ಭೇಧ ಮರೆತು ಒಟ್ಟಾಗಿ ಕನ್ನಡದ ಕೈಂಕ೦ರ್ುವನ್ನು ಮಾಡಲು ಮುಂದಾಗಬೇಕೆಂದು ಕರೆ ನೀಡಿದರು.


ವೇದಿಕೆಯಲ್ಲಿ ಆರ್ಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಿ, ಬೇಟೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋಧ ಉಪಸ್ಥಿತರಿದ್ದು ವಿವಿಧ ಸಲಹೆ ನೀಡಿದರು. ಸಭೆಯಲ್ಲಿ ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ, ಸಾವಿತ್ರಿ, ಟೋಮಿ ಥೋಮಸ್, ಕೋಶಾಧಿಕಾರಿ ಶಬರೀಶ್ ಶೆಟ್ಟಿ, ಸಾಹಿತಿ ರಜಿತ ಕಾರ್ಯಪ್ಪ, ಆರ್ಜಿ ಮತ್ತು ಬೇಟೋಳಿ ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಗ್ರಾಮದ ಪ್ರಮುಖರು ಅಧಿಕ ಸಂಖ್ಯೆಯಲ್ಲಿ ಹಾಜರಿದ್ದರು.

ಸಭೆಯ ಮುಖ್ಯಾಂಶಗಳು
ಸ್ವಾಗತ ಸಮಿತಿ ಸೇರಿದಂತೆ ಇತರ ೮ ಸಮಿತಿಗಳನ್ನು ಆರ್ಜಿ, ಬೇಟೋಳಿ ಗ್ರಾಮದ ಚುನಾಯಿತ ಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ರಚಿಸಲಾಯಿತು. ಗ್ರಾಮದ ವಿವಿಧ ಶಾಲೆಗಳಿಂದ ೧ ಸಾಂಸ್ಕೃತಿಕ ತಂಡ ಹಾಗೂ ಶಾಲೆ ಸೇರಿದಂತೆ ಎರಡು ಗ್ರಾಮ ಪಂಚಾಯಿತಿಯಿಂದ ಸ್ಥಬ್ದಚಿತ್ರ ಮೆರವಣಿಗೆಗೆ ಸಿದ್ದತೆ ಮಾಡಿಕೊಳ್ಳುವಂತೆ ತೀರ್ಮಾನಿಸಲಾಯಿತು. ಸಮ್ಮೇಳನ ಕುರಿತು ಮುಂದಿನ ಹಂತದ ಸಮಿತಿಗಳ ಪೂರ್ವಬಾವಿ ಸಭೆ ಡಿ೧೭ ಪೂರ್ವಾಹ್ನ ೧೦.೩೦ ಗಂಟೆಗೆ ಆರ್ಜಿ ಗ್ರಾಮದ ವಿಎಸ್‌ಎಸ್‌ಎನ್‌ಎಲ್ ಸಭಾಂಗಣದಲ್ಲಿ ನಡೆಸುವಂತೆ ತೀರ್ಮಾನಿಸಲಾಯಿತು.