ಜಿಲ್ಲೆ

ಸರ್ವರ ಬಾಳಿಗೆ ಬೆಳಕಾದವರು ರಾಜೇಂದ್ರ ಶ್ರೀಗಳು

ಮೈಸೂರು: ಯಾವುದೇ ಜಾತಿ, ಭೇದವಿಲ್ಲದೆ ಸಕಲರಿಗೂ ಅನ್ನ, ವಸತಿ ಆಶ್ರಯವಿತ್ತು ಸಹಸ್ರಾರು ಜನಗಳ ಬಾಳಿಗೆ ಬೆಳಕಾದವರು ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಎಂದು ಸಾಹಿತಿ ಎಂ.ಎ.ನೀಲಾಂಬಿಕಾ ಹೇಳಿದರು.

ಜೆಎಸ್‌ಎಸ್ ಪ್ರೌಢಶಾಲೆಯಲ್ಲಿ ಶರಣ ಸಾಹಿತ್ಯ ಪರಿಷತ್ ಬುಧವಾರ ಹಮ್ಮಿಕೊಂಡಿದ್ದ ಶ್ರೀಗಳ ಜಯಂತಿ ಮತ್ತು ಶರಣ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿ, ಶ್ರೀಗಳು ಜಡ ಕಲ್ಲಿಗೂ ಪ್ರೀತಿಯ ಉಳಿ ಪೆಟ್ಟು ಕೊಡುವ ಮೂಲಕ ಮೂರ್ತಿಯನ್ನಾಗಿಸಿದವರು. ಜ್ಞಾನ ವೈದ್ಯದ ಭಸ್ಮಧಾರಿಗಳಾದ ಅವರು ಪ್ರೀತಿ ತುಂಬಿದ ಮಾತೃ ಹೃದಯಿಯಾಗಿದ್ದರು ಎಂದು ಸ್ಮರಿಸಿದರು.

ತಾಯಿ ತನ್ನ ಮಕ್ಕಳನ್ನು ಪುತ್ರ ವ್ಯಾಮೋಹದಿಂದ ಮಾತ್ರ ಪ್ರೀತಿಸಬಹುದು. ಆದರೆ ಶ್ರಿಗಳು ಎಲ್ಲರನ್ನೂ ಸಮಾನವಾಗಿ ಮಾತೃ ಹೃದಯದಿಂದಲೇ ಕಂಡವರು. ತಮ್ಮನ್ನು ತಾವು ಕರ್ಪೂರದಂತೆ ಸುಟ್ಟುಕೊಂಡು, ಶ್ರೀಗಂಧದಂತೆ ತೇಯ್ದುಕೊಂಡರೂ ಸಮಾಜಕ್ಕೆ ಸುಗಂಧವನ್ನೇ ನೀಡಿ ಬೆಳಕಾಗಿದ್ದಾರೆ ಎಂದು ಹೇಳಿದರು.

ಪರಿಷತ್ತಿನ ಅಧ್ಯಕ್ಷ ಮ.ಗು. ಸದಾನಂದಯ್ಯ, ಮುಖ್ಯ ಶಿಕ್ಷಕ ಕೆ.ಎಸ್.ಸುರೇಶ್, ದತ್ತಿ ದಾನಿಗಳಾದ ಡಾ.ಪಿ.ಬಿ.ತ್ರಿಶೂಲಿ, ಕೆ.ಪಿ.ಮಲ್ಲಿಕಾರ್ಜುನ, ಎಂ.ಶಶಿಕಲಾ, ಕಾರ್ಯದರ್ಶಿ ಡಿ.ಎಸ್.ಕುಮಾರಸ್ವಾಮಿ ಇತರರಿದ್ದರು