ಯಳಂದೂರು: ಕಾಯಕ, ನಿಸ್ವಾರ್ಥ ಸೇವೆ ಏನೆಂಬುದನ್ನು ಅರಿಯಲು ಬಸವಣ್ಣ ಹಾಗೂ ರಾಜೇಂದ್ರ ಶ್ರೀಗಳನ್ನು ಆದರ್ಶವಾಗಿಟ್ಟುಕೊಳ್ಳಬೇಕು ಎಂದು ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿಯ ಸಹಾಯಕ ಕನ್ನಡ ಪ್ರಾಧ್ಯಾಪಕಿ ಅಂಬಿಕಾ ತಿಳಿಸಿದರು.
ಪಟ್ಟಣದ ಜೆಎಸ್‌ಎಸ್ ಶಿಕ್ಷಣ ಸಂಸ್ಥೆ ಹಾಗೂ ಅಕ್ಷರ ದಾಸೋಹ ಕೇಂದ್ರದ ವತಿಯಿಂದ ಪಟ್ಟಣದ ಜೆಎಸ್‌ಎಸ್ ಮಹಿಳಾ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ 108ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜೇಂದ್ರ ಶ್ರೀಗಳು ಶಿಕ್ಷಣದ ಜತೆಗೆ ದಾಸೋಹ ನೀಡಿ ಮಕ್ಕಳನ್ನು ಪೋಷಿಸಿದರು. ಇದರೊಂದಿಗೆ ಪ್ರಾಮಾಣಿಕವಾಗಿ ಮಮತೆ ಹಾಗೂ ಪ್ರೀತಿಯನ್ನು ಧಾರೆ ಎರೆದು ಜೀವನದ ಮೌಲ್ಯಗಳನ್ನು ತಿಳಿಸಿಕೊಟ್ಟರು. ಜೆಎಸ್‌ಎಸ್ ಸಂಸ್ಥೆ ಇಂದು ದೊಡ್ಡ ಮಟ್ಟದಲ್ಲಿ ಬೆಳೆಯಲು ಇವರ ಸಾರ್ಥಕ, ಪ್ರಾಮಾಣಿಕ ಪರಿಶ್ರಮವೇ ಕಾರಣ. ಇದರೊಂದಿಗೆ ಇಂದಿನ ಶ್ರೀಗಳು ಇವರು ಹಚ್ಚಿದ ಹಣತೆಯನ್ನು ಇನ್ನಷ್ಟು ಪ್ರಜ್ವಲಗೊಳಿಸಿ ವಿದೇಶಗಳಲ್ಲೂ ಇದರ ಬೆಳಕನ್ನು ಚೆಲ್ಲಿದ್ದಾರೆ. ಇಂತಹ ಸಂತರ ತತ್ವಾದರ್ಶವನ್ನು ಇಂದಿನ ಜನತೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್ ಮಾತನಾಡಿ, ಶ್ರೀಗಳು, ಶಿಕ್ಷಣ, ಆರೋಗ್ಯ, ಬಾನುಲಿ ಕೇಂದ್ರ ಸ್ಥಾಪನೆ, ಕೃಷಿ ಕೇಂದ್ರಗಳ ಸ್ಥಾಪನೆ, ಪುಸ್ತಕ ಪ್ರಕಟಣೆಯಂತಹ ನೂರೆಂಟು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ತಮ್ಮ ಜೀವನವನ್ನೇ ಸೇವೆಗೆ ಮುಡುಪಾಗಿಟ್ಟದ್ದರು. ಇದರೊಂದಿಗೆ ಮಹಿಳೆಯರಿಗೆ ಶಿಕ್ಷಣ ನೀಡಲು ಜೆಎಸ್‌ಎಸ್ ಸಂಸ್ಥೆಯ ಪಾತ್ರ ಪ್ರಮುಖವಾಗಿದ್ದು ಇದರಲ್ಲಿ ಜಾತಿ, ಧರ್ಮ, ಲಿಂಗ ಭೇದವಿಲ್ಲದೆ, ಸರ್ವರನ್ನು ಒಳಗೊಂಡ ಸಮಸಮಾಜದ ಸುಧಾರಣೆ ಮಾಡಿದ ಸಂತರಾಗಿದ್ದರು. ಈ ಸಂಸ್ಥೆಯನ್ನು ಕನಿಷ್ಠ ಶುಲ್ಕ, ಗರಿಷ್ಠ ಶಿಕ್ಷಣ ಎಂಬ ತತ್ವದಡಿ ಇಂದು ಗುರುತಿಸಿಕೊಂಡಿದ್ದು, ವಿಶ್ವಾದ್ಯಂತ ತನ್ನ ಶಿಷ್ಯವೃಂದವನ್ನು ಹೊಂದಿರುವುದು ನಮ್ಮೆಲ್ಲರ ಹೆಮ್ಮೆ ಎಂದರು.
ಎಸ್‌ಎಸ್‌ಎಲ್‌ಸಿ ಹಾಗೂ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರು ಹಾಗೂ ಜಯಂತಿ ನಿಮಿತ್ತ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು. ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ಕಲಾ ತಂಡಗಳೊಂದಿಗೆ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು. ಮೆರವಣಿಗೆಗೆ ಸಿವಿಲ್ ನ್ಯಾಯಾಧೀಶ ಆಕರ್ಷ್ ಚಾಲನೆ ನೀಡಿದರು.
ಬಿಳಿಗಿರಿರಂಗನಬೆಟ್ಟದ ಶ್ರೀ ಶಾಂತಮಲ್ಲಿಕಾರ್ಜುನಸ್ವಾಮಿ, ಸಮಾಜ ಸೇವಕ ಪಿ.ವೀರಭದ್ರಪ್ಪ, ಕಾಲೇಜಿನ ಪ್ರಾಂಶುಪಾಲ ಎಚ್.ಎಸ್.ಚಂದ್ರಶೇಖರ್, ಪ್ರೌಢಶಾಲೆಯ ಮುಖ್ಯಶಿಕ್ಷಕಿ ವಿ.ಚಂದ್ರಕಲಾ, ಸಿಆರ್‌ಪಿ ರೇಚಣ್ಣ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವೀರಭದ್ರಸ್ವಾಮಿ, ಉಪನ್ಯಾಸಕರಾದ ಅಕ್ಕಮಹಾದೇವಮ್ಮ, ಬಿಂದು, ಶೀಲಾ, ಉಮೇಶ್, ಡಿ.ಆರ್.ಕವಿತಾ, ಸಂತೋಷ್, ಮಂಜುಳಾ ಇತರರು ಇದ್ದರು.