ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಧಾರವಾಡ ಲೋಕಸಭೆ ಕ್ಷೇತ್ರದ ಘೊಷಿತ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಪರವಾಗಿ ಕೆಲಸ ಮಾಡಲು ಯುವ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಬೆಂಬಲಿಗರು, ಹಿತೈಷಿಗಳು ಹಾಗೂ ಮುಖಂಡರು ನಿರ್ಧರಿಸಿದ್ದಾರೆ.
ನಗರದ ಗೋಕುಲ ರಸ್ತೆಯ ಖಾಸಗಿ ಹೋಟೆಲ್ನಲ್ಲಿ ಶುಕ್ರವಾರ ಸಂಜೆ ಕರೆದ ಸಮಾನ ಮನಸ್ಕರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ಧಾರವಾಡ ಲೋಕಸಭೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು.
ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ್ ಮಾತನಾಡಿ, ವಿಧಾನಸಭೆ ಚುನಾವಣೆ ವೇಳೆ ಜಗದೀಶ ಶೆಟ್ಟರ್ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದರಿಂದ ರಜತ್ಗೆ ಟಿಕೆಟ್ ಕೈತಪ್ಪಿತ್ತು. ಈ ಬಾರಿ ಸಾಮಾಜಿಕ ನ್ಯಾಯದಡಿ ಟಿಕೆಟ್ ಹಂಚಿಕೆ ಆಗಿರುವುದರಿಂದ ಮತ್ತೊಮ್ಮೆ ಟಿಕೆಟ್ ಕೈ ತಪ್ಪಿರುವುದು ದುರದೃಷ್ಟಕರ. ಮುಂದಿನ ದಿನಗಳಲ್ಲಿ ರಜತ್ಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗಲಿ ಎಂದು ಹೇಳಿದರು.
ಪಾಲಿಕೆ ವಿರೋಧ ಪಕ್ಷದ ನಾಯಕಿ ಸುವರ್ಣ ಕಲ್ಲಕುಂಟ್ಲ ಮಾತನಾಡಿ, ರಜತ್ ಸಂಭ್ರಮ ಕಾರ್ಯಕ್ರಮ ನಡೆಸಿದ ಸಂದರ್ಭದಲ್ಲಿ ರಜತ್ ಉಳ್ಳಾಗಡ್ಡಿಮಠ ಪಾದ್ರಿಗಳು, ಮೌಲ್ವಿಗಳು, ಸ್ವಾಮೀಜಿಗಳು, ರಿಕ್ಷಾ ಚಾಲಕರು, ಜೋಗಮ್ಮನವರು ಸೇರಿ ಸಮಾಜದಲ್ಲಿ ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸುವರಿಗೆ ತಮ್ಮದೆ ಆದ ಕೊಡುಗೆ ನೀಡಿದ್ದಾರೆ, ಅಲ್ಲದೆ ಹು-ಧಾ ಸೆಂಟ್ರಲ್ ಕ್ಷೇತ್ರದಲ್ಲಿ ಸಾಕಷ್ಟು ಸಂಘಟನೆ ಮಾಡಿ ಪಕ್ಷಕ್ಕೆ ಬಲ ತಂದಿದ್ದಾರೆ. ಇವರಿಗೆ ಟಿಕೆಟ್ ತಪ್ಪಬಾರದಾಗಿತ್ತು ಎಂದರು.
ರಜತ್ ಉಳ್ಳಾಗಡ್ಡಿಮಠ ಮಾತನಾಡಿ, ಕಳೆದ ಎಂಟು ತಿಂಗಳಿಂದ ನಾನು ಪಕ್ಷ ಸಂಘಟನೆ ಮಾಡಿದ್ದೆ. ಪಕ್ಷದ ಎಲ್ಲ ಆಂತರಿಕ ಸರ್ವೆಯಲ್ಲೂ ನನ್ನ ಹೆಸರು ಮುನ್ನಡೆಯಲ್ಲಿತ್ತು. ಆದರೆ, ಇದೀಗ ಟಿಕೆಟ್ ಬೇರೆಯವರಿಗೆ ಘೊಷಣೆ ಆಗಿದೆ. ವಿಧಾನಸಭೆ ಚುನಾವಣೆಯಲ್ಲಿ ನನಗೆ ಟಿಕೆಟ್ ತಪ್ಪಿತ್ತು. ಬಿಜೆಪಿಯಿಂದ ಬಂದ ದುರ್ಬಲ ಅಭ್ಯರ್ಥಿಗೆ ಟಿಕೆಟ್ ನೀಡಿದರು. ಅವರು ಸೋಲು ಅನುಭವಿಸದರು. ಈ ಬಾರಿ ನಾನು ಟಿಕೆಟ್ ಪಡೆಯುವಲ್ಲಿ ವಿಫಲನಾಗಿದ್ದೇನೆ. ಯೋಗ್ಯತೆ ಇದ್ದರೂ ಯೋಗ ಇಲ್ಲ ಎಂದು ಅಸಮಾಧಾನ ಹೊರಹಾಕಿದರು.
ಪಾಲಿಕೆ ಸದಸ್ಯರಾದ ಆರೀಫ್ ಭದ್ರಾಪುರ, ಇಕ್ಬಾಲ್ ನವಲೂರು, ನವನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತ ಕೊರವರ, ಗುರು ಬೆಂಗೇರಿ, ಸರೋಜಾ ಹೂಗಾರ, ಕಲ್ಲಪ್ಪ ವಾಲಿಕಾರ, ಬಾಳಮ್ಮ ಜಂಗನವರ್, ಮಹೇಶ ದಾಬಡೆ, ರವೀಂದ್ರ ಹರ್ತಿ, ಸುನಿಲ ಮಠಪತಿ, ಇತರರು ಇದ್ದರು.