ಜಿಲ್ಲೆ

ಹುಬ್ಬಳ್ಳಿಯಲ್ಲಿ ರಜತ್ ಸಂಭ್ರಮ, ತಿರಂಗಾ ತಯಾರಕರಿಗೆ ಆತ್ಮೀಯ ಸನ್ಮಾನ

Dharwada - Basavaraj Idli

ಹುಬ್ಬಳ್ಳಿ: ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ರಜತ್ ತಂದೆಯ ಆಶಯಗಳನ್ನು ಪೂರೈಸಲು ಸಾಮಾಜಿಕ ಸೇವೆಯಲ್ಲಿ ತೊಡಗಿದ್ದಾರೆ. ಅವರಿಗೆ ಮಠಾಧೀಶರ ಹಾರೈಕೆ ಇದೆ. ಜನರು ಕೂಡ ಆಶೀರ್ವಾದ ಮಾಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಮನವಿ ಮಾಡಿದರು.

ಇಲ್ಲಿಯ ಗಿರಣಿ ಚಾಳ ಮೈದಾನದಲ್ಲಿ ಬುಧವಾರ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ಅವರ ಜನ್ಮದಿನ ಪ್ರಯುಕ್ತ ಏರ್ಪಡಿಸಿದ್ದ ರಜತ್ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಳಿಯ ರಜತ್ ಹಾಗೂ ನನ್ನ ಜನ್ಮದಿನ ಒಂದೇ ದಿನ ಇದೆ. ನನಗೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ಸಂತೋಷವಾಗಿದೆ. ಮಠಗಳು ಈ ದೇಶದ ಸಂಸ್ಕೃತಿಯಾಗಿದ್ದು, ಮಠಾಧೀಶರು ಸಂಸ್ಕೃತಿಯ ರಾಯಭಾರಿಗಳಾಗಿದ್ದಾರೆ. ಅವರ ಆಶೀರ್ವಾದ ರಜತ್ ಗೆ ಸಿಕ್ಕಿದೆ ಎಂದು ಹೇಳಿದರು.

ನನ್ನ ಅಳಿಯ ಎನ್ನುವ ಕಾರಣಕ್ಕೆ ರಜತ್ ರಾಜಕಾರಣದಲ್ಲಿ ಇಲ್ಲ. ತಂದೆ ವಿಶ್ವಪ್ರಕಾಶ ಅವರು ಸಹ ರಾಜಕಾರಣದಲ್ಲಿದ್ದವರು. ತಂದೆಯಂತೆ ಸಾಮಾಜಿಕ ಸೇವೆಯನ್ನು ಮೈಗೂಡಿಸಿಕೊಂಡಿದ್ದಾರೆ. ಪಾಲಿಕೆ ಚುನಾವಣೆಯಲ್ಲಿ ಅನೇಕ ಸದಸ್ಯರನ್ನು ಗೆಲ್ಲಿಸಿಕೊಂಡು ಬರುವಲ್ಲಿ ಶ್ರಮಿಸಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗಬೇಕಿತ್ತು. ಆದರೆ, ಜಗದೀಶ ಶೆಟ್ಟರ್ ಅವರಿಗಾಗಿ ತ್ಯಾಗ ಮಾಡಿದರು. ಇದೀಗ ಮತ್ತೆ ಕನಸು ಕಟ್ಟಿದ್ದಾನೆ. ಅವರಿಗೆ ಟಿಕೆಟ್ ಕೊಡುವ ಬಗ್ಗೆ ಜಿಲ್ಲೆಯ ಹಿರಿಯ ನಾಯಕರು, ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ. ಅದರೆ, ಅತ್ತೆಯಾಗಿ ಆತನ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸುತ್ತೇನೆ ಎಂದರು.

ಅಧಿಕಾರ ಇಲ್ಲದಿದ್ದರೂ ಸಮಾಜ ಸೇವೆ ಮಾಡುತ್ತಿದ್ದಾನೆ. ಆತ ಜನನಾಯಕನಾಗಿ ಬೆಳೆಯಬೇಕೆಂದರೆ ನಿವೆಲ್ಲರೂ ಸೇರಿ ಆತನ ಭವಿಷ್ಯ ಬರೆಯಬೇಕು ಎಂದು ಮನವಿ ಮಾಡಿದರು.

ಧ್ವಜ ತಯಾರಕರೊಂದಿಗೆ ಸಂಭ್ರಮ:
ರಜತ್ ಉಳ್ಳಾಗಡ್ಡಿಮಠ ಮಾತನಾಡಿ, ದೇಶದ ಎಲ್ಲ ಕಡೆ ಹಾರಾಡುವ ರಾಷ್ಟ್ರಧ್ವಜ ತಯಾರಿಸುವ ಕೇಂದ್ರ ಹುಬ್ಬಳ್ಳಿ ಧಾರವಾಡದಲ್ಲಿರುವುದೇ ಹೆಮ್ಮೆಯ ಸಂಗತಿ. ಬೆಂಗೇರಿ ಖಾದಿ ಗ್ರಾಮೋದ್ಯೋಗದಲ್ಲಿ ಕೆಲಸ ಮಾಡುವ 22 ಮಹಿಳೆಯರನ್ನು ಸನ್ಮಾನಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಲಾಗುತ್ತಿದೆ ಎಂದರು.

ಕಳೆದ ಚುನಾವಣೆಯಲ್ಲಿ ಜಗದೀಶ ಶೆಟ್ಟರ್ ಅವರು ನನಗಿದ್ದ ಅವಕಾಶ ಕಸಿದುಕೊಂಡರು. ಹುಬ್ಬಳ್ಳಿಯಲ್ಲಿ ದೂರದೃಷ್ಟಿ ಇಲ್ಲದ ನಾಯಕರು ಇದ್ದಾರೆ. ಯುವಕರಿಗೆ ನೌಕರಿ ಕೊಡಲು ಸಾಧ್ಯವಾಗುತ್ತಿಲ್ಲ. ಪ್ರಧಾನಿ ಮೋದಿ ಅವರ ಅಕ್ಕಪಕ್ಕ ಓಡಾಡುವ ಸಚಿವ ಜೋಶಿ ಅವರಿಗೆ ಕಳಸಾ ಬಂಡೂರಿ ಯೋಜನೆ ಜಾರಿ ಮಾಡಿಕೊಡಿ ಎಂದು ಕೇಳುವ ಶಕ್ತಿ ಇಲ್ಲ ಎಂದು ಟೀಕಿಸಿದರು.

ಲಕ್ಷ್ಮೇಶ್ವರದ ವಿಮಲರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜಾತಿ, ಧರ್ಮದ ಯಾವುದೇ ಮೇರೆ ಇಲ್ಲದೇ ಎಲ್ಲರನ್ನೂ ಒಗ್ಗೂಡಿಸಿಕೊಂಡು ಮುನ್ನಡೆಯುತ್ತಿರುವ ರಜತ್ ಉಳ್ಳಾಗಡ್ಡಿಮಠ ಅವರಿಗೆ ದೂರದೃಷ್ಟಿ ಇದೆ. ಅವರ ತಂದೆ ವಿಶ್ವಪ್ರಕಾಶ ಉಳ್ಳಾಗಡ್ಡಿಮಠ ಅವರು ಕಂಡ ಸಾಮಾಜಿಕ ಸೇವೆಯ ಕನಸುಗಳನ್ನು ಮಗ ಇದೀಗ ಈಡೇರಿಸುತ್ತಿದ್ದಾರೆ. ಗುರುವನ್ನು ಮೀರಿಸುವ ಶಿಷ್ಯ ಎಂಬಂತೆ ತಂದೆಯಂತೆ ಸಮಾಜ ಸೇವೆಗೆ ಜೀವನ ಮುಡಿಪಾಗಿಟ್ಟಿರುವುದು ಶ್ಲಾನೀಯ ಎಂದರು.

ಮೂರುಸಾವಿರ ಮಠದ ಜಗದ್ಗುರು ಶ್ರೀಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಕುಂದಗೋಳ ತಾಲೂಕು ಯಲಿವಾಳದ ಕಿತ್ತೂರರಾಣಿ ಚನ್ನಮ್ಮ ಸ್ವಯಂ ಸೇವಾ ಸಂಸ್ಥೆಯ ಮಕ್ಕಳ ಮಲ್ಲಕಂಬ ಕಸರತ್ತು ಆಕರ್ಷಕವಾಗಿತ್ತು.
50ಕ್ಕೂ ಹೆಚ್ಚು ವಿವಿಧ ಮಠಾಧೀಶರು ವೇದಿಕೆ ಮೇಲೆ ಆಸೀನರಾಗಿದ್ದರು. ಗಂಗಾವತಿ ಪ್ರಾಣೇಶ ಹಾಗೂ ತಂಡದವರಿಂದ ಹಾಸ್ಯ ಕಾರ್ಯಕ್ರಮ ನಡೆಯಿತು.