ಜಿಲ್ಲೆ

ರಾಜಾಜಿನಗರ ಗ್ಯಾರಂಟಿ ಸಮಿತಿಯಿಂದ ಶಕ್ತಿ ಯೋಜನೆ ಯಶಸ್ಸಿಗೆ ದುಡಿದ ಚಾಲಕ, ನಿರ್ವಾಹಕರಿಗೆ ಸನ್ಮಾನ

ಬೆಂಗಳೂರು : ರಾಜಾಜಿನಗರ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ಶಕ್ತಿ ಯೋಜನೆಯ ಯಶಸ್ಸಿಗೆ ಶ್ರಮಿಸಿದ ಚಾಲಕರು ಮತ್ತು ನಿರ್ವಾಹಕರಿಗೆ ಸನ್ಮಾನ ಮಾಡಿ, ಮಹಿಳಾ ಪ್ರಯಾಣಿಕರಿಗೆ ಸಿಹಿ ವಿತರಿಸಲಾಯಿತು.

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಮುಖ್ಯವಾದ ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯಲ್ಲಿ 500ಕೋಟಿ ಬಾರಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು, ಯೋಜನೆ ಯಶಸ್ವಿಯಾಗಿದ್ದಾಕ್ಕಾಗಿ ವಿಧಾನಪರಿಷತ್ ಸದಸ್ಯರಾದ ಪುಟ್ಟಣ್ಣ, ರಾಜಾಜಿನಗರ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎನ್.ವೆಂಕಟೇಶ್, ಮಾಜಿ ಪಾಲಿಕೆ ಸದಸ್ಯ ಪದ್ಮರಾಜ್, ಗ್ಯಾರೆಂಟಿ ಯೋಜನೆಗಳ ಉಪಾಧ್ಯಕ್ಷ ಜನಾರ್ಧನ್ ಮಹಿಳೆಯರಿಗೆ ಶುಭ ಕೋರಿ ಸಿಹಿ ವಿತರಿಸಿದರು. ಚಾಲಕ, ನಿರ್ವಾಹಕರಿಗೆ ಸನ್ಮಾನಿಸಿ ಹೊಸ ಸಮವಸ್ತ್ರಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪುಟ್ಟಣ್ಣ, ಕಾಂಗ್ರೆಸ್ ಸರ್ಕಾರ ಬಡವರ ಪರ, ಮಹಿಳೆಯರ ಪರ ಇರುವ ಸರ್ಕಾರ. ರಾಜ್ಯದ ಪ್ರತಿಯೊಬ್ಬ ಪ್ರಜೆಯು ಸ್ವಾಭಿಯಾನಿಯಾಗಿ, ಸ್ವಾವಲಂಭಿಯಾಗಿ ಬದುಕು ಸಾಗಿಸಲು 5 ಗ್ಯಾರೆಂಟಿ ಯೋಜನೆಗಳು ಸಹಕಾರಿಯಾಗಿದೆ. ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣದ ಶಕ್ತಿ ಯೋಜನೆ ಮತ್ತು ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡುವ ಗೃಹಲಕ್ಷ್ಮಿ ಯೋಜನೆಯು ಮಹಿಳೆಯರಲ್ಲಿ ಹೊಸ ಚೈತನ್ಯ ತರಿಸಿದೆ. ಹಸಿವಿನಿಂದ ಯಾರು ಬಳಲಬಾರದು ಎಂದು 10ಅಕ್ಕಿ ಹಾಗೂ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುತ್ತಿರುವುದು ದೇಶದಲ್ಲೇ ಮಾದರಿ ಎಂದರು.

ಎನ್.ವೆಂಕಟೇಶ್ ಮಾತನಾಡಿ, ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ಹೆಚ್ಚು ಪ್ರಾಧ್ಯನತೆ ನೀಡಿದೆ. ಮಹಿಳೆಯರು ತಮ್ಮ ಕಾಲ ಮೇಲೆ ನಿಲ್ಲಬೇಕು, ಸ್ವಾಭಿಮಾನಿಯಾಗಿ ಪುರುಷರಷ್ಟೆ ಸರಿಸಮಾನವಾಗಿ ಜೀವನ ಸಾಗಿಸಬೇಕು ಎಂದು ಮಹಿಳಾ ಪರ ಯೋಜನೆಗಳು ನೀಡಿದೆ. ದೇವಸ್ಥಾನಕ್ಕೆ, ತವರು ಮನೆಗೆ ಹೋಗಲು ಹಾಗೂ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಶಕ್ತಿ ಯೋಜನೆ ವರದಾನವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮತಿ ಸದಸ್ಯರು, ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.