ಜಿಲ್ಲೆ

ಗಾಣಗಾಪುರ ಕ್ಷೇತ್ರವನ್ನು ಮಠವೆಂದು ಘೋಷಿಸುವಂತೆ ಸರ್ಕಾರಕ್ಕೆ ರಾಜಗುರು ಆಗ್ರಹ

ಕಲಬುರಗಿ: ದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ದೇವಲಗಾಣಗಾಪುರ ಕ್ಷೇತ್ರವನ್ನು ಮಠ ಎಂದು ಘೊಷಿಸಿ ಗುರುಗಳು ಸ್ವತಃ ಹೇಳಿರುವಂತೆ ಭಾಸ್ಕರನ ವಂಶಸ್ಥರಿಗೆ ವಹಿಸಿಕೊಡುವಂತೆ ಖ್ಯಾತ ಜ್ಯೋತಿಷಿ ಹಾಗೂ ಆಧ್ಯಾತ್ಮಿಕ ಚಿಂತಕರಾದ ರಾಜಗುರು ಬಿ.ಎಸ್.ದ್ವಾರಕನಾಥ ಸರ್ಕಾರವನ್ನು ಆಗ್ರಹಿಸಿದ್ದಾರೆ.

ದಸರಾ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಮತ್ತು ಪಾರಾಯಣದಲ್ಲಿ ಪಾಲ್ಗೊಂಡು ಮಾತನಾಡಿದ ರಾಜ್ಯ ಧಾರ್ಮಿಕ ಪರಿಷತ್ತಿನ ನಿರ್ದೇಶಕರೂ ಆಗಿರುವ ದ್ವಾರಕನಾಥ್ ಗುರೂಜಿ, ಶ್ರೀಗುರು ದತ್ತಾತ್ರೇಯರ ಅವತಾರವಾಗಿರುವ ಶ್ರೀನರಸಿಂಹ ಭಾರತಿ ಸ್ವಾಮಿಗಳ ನಿರ್ಗುಣ ಪಾದುಕೆಗಳು ಗಾಣಗಾಪುರದಲ್ಲಿ ನಿತ್ಯ ಪೂಜೆಗಳ್ಳೊತ್ತಿವೆ. ಗಾಣಗಾಪುರ ಕ್ಷೇತ್ರದ ಸಂಪೂರ್ಣ ಮಾಹಿತಿಯುಳ್ಳ ಶ್ರೀಗುರುಚರಿತ್ರೆ ಪಾರಾಯಣ ಗ್ರಂಥದಲ್ಲಿ ಸ್ವತಃ ಗುರುಗಳೇ ತಿಳಿಸಿರುವಂತೆ ಬಡ ಬ್ರಾಹ್ಮಣನಾಗಿದ್ದ ಭಾಸ್ಕರನ ವಂಶಸ್ಥರಿಗೆ ತಮ್ಮ ನಿರ್ಗುಣ ಪಾದುಕೆಗಳನ್ನು ನೀಡಿದ್ದಾರೆ. ಆ ಪವಿತ್ರ ಪಾದುಕೆಗಳೇ ಇಂದಿಗೂ ಗಾಣಗಾಪುರದಲ್ಲಿ ಪೂಜೆಗೊಳ್ಳುತ್ತಿವೆ. ಗುರುಗಳು ವಾಸ ಮಾಡಿದ ಈ ಸ್ಥಳ ಆ ಕಾಲದಿಂದಲೂ ಮಠ ಎಂದೇ ದಾಖಲಾಗಿದೆ. ನಂತರದ ದಿನಗಳಲ್ಲಿ ಉಸ್ತುವಾರಿ ಸಮಿತಿಯನ್ನು ರಚಿಸಿ ಆ ಸಮಿತಿಯಲ್ಲಿ ಗೌರವಪೂರ್ವಕವಾಗಿ ಜಿಲ್ಲಾಧಿಕಾರಿಗಳನ್ನು ಸೇರಿಸಲಾಗಿದ್ದು, ಅದೇ ಕಾರಣಕ್ಕೆ ಮಠವು ದೇವಾಲಯ ಎಂದು ತಪ್ಪು ದಾಖಲೆಯಾಗಿದೆ. ಸದ್ಯ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿರುವ ಮಠವನ್ನು ಸರ್ಕಾರ ಈ ಕೂಡಲೇ ಅಧಿಕೃತವಾಗಿ ಮಠ ಎಂದು ಘೋಷಿಸಿ ಸಂಬಂಧಪಟ್ಟವರಿಗೆ ವಹಿಸುವಂತೆ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಮತ್ತು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರನ್ನು ಒತ್ತಾಯಿಸಿದ್ಧಾರೆ.