ಜಿಲ್ಲೆ

ಮಕ್ಕಳಲ್ಲಿ ಧಾರ್ಮಿಕ ಭಾವನೆ ಅಗತ್ಯ : ರಾಜಗೋಪುರ ಲೋಕಾರ್ಪಣೆಗೊಳಿಸಿ ಒಡಿಯೂರು ಶ್ರೀ ಆಶಯ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಧರ್ಮವೆಂಬುದು ನಂದಾದೀಪ ಇದ್ದಂತೆ. ಸಂರಕ್ಷಣೆ ಮಾಡಿದ ಧರ್ಮದಿಂದ ಮಾತ್ರ ನಮ್ಮ ರಕ್ಷಣೆ ಸಾಧ್ಯ. ಆದ್ದರಿಂದ ಮಕ್ಕಳಿಗೆ ಧಾರ್ಮಿಕ ಮನೋಭಾವ ಮೂಡಿಸಬೇಕು ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಮಾರ್ಪಾಡಿ- ಕಲ್ಲಬೆಟ್ಟು ನಡ್ಯೋಡಿ ದೈವಸ್ಥಾನದ ಬಹ್ಮಕಲಶೋತ್ಸವ ಸಂದರ್ಭ ನೂತನ ರಾಜಗೋಪುರ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಶಾಸಕ ಉಮಾನಾಥ ಎ.ಕೋಟ್ಯಾನ್ ಮಾತನಾಡಿ, ಪರಶುರಾಮನ ಪುಣ್ಯಭೂಮಿಯಾಗಿರುವ ತುಳುನಾಡು ಭಾರತ ದೇಶದ ದೇವರ ಕೋಣೆಯಿದ್ದಂತೆ. ಅನಿಷ್ಟ ವಿನಾಶಗಳಾವುದೂ ತುಳುನಾಡಿನಲ್ಲಿ ಇದ್ದ ಉದಾಹರಣೆಯಿಲ್ಲ ಎಂದರು.

ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ರಶ್ಮಿತಾ ಯುವರಾಜ ಜೈನ್, ಕಂಬಳ ಕೋಣಗಳ ಯಜಮಾನ ಇರುವೈಲು ಪಾಣಿಲ ಸತೀಶ್ಚಂದ್ರ ಸಾಲಿಯಾನ್ ಹಾಗೂ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ವೈ.ಶಶಿಕಾಂತ್ ಅವರನ್ನು ಸನ್ಮಾನಿಸಲಾಯಿತು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಿಲೀಪ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಎಂ.ಸಿ.ಎಸ್. ಬ್ಯಾಂಕ್ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್, ಮಾರೂರು ಖಂಡಿಗ ರಾಮದಾಸ ಆಸ್ರಣ್ಣ, ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಯುವರಾಜ್ ಜೈನ್, ಉದ್ಯಮಿ ಐತಪ್ಪ ಆಳ್ವ, ಜಯಂತಿ ಎಸ್.ಕೋಟ್ಯಾನ್, ಪುರಸಭಾ ಸದಸ್ಯ ಸುರೇಶ್ ಕೋಟ್ಯಾನ್, ಸಮಿತಿ ಗೌರವಾಧ್ಯಕ್ಷರಾದ ಪುರುಷೋತ್ತಮ ಶೆಟ್ಟಿ, ಆನಂದ ಕುಮಾರ್ ಮುಖ್ಯ ಅತಿಥಿಗಳಾಗಿದ್ದರು. ಸೇವಾ ಸಮಿತಿ ಅಧ್ಯಕ್ಷ ಕೆ.ಪ್ರದೀಪ್ ರೈ ಉಪಸ್ಥಿತರಿದ್ದರು.

ದಿಲೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಗೀತಾ ಪಿ.ಶೆಟ್ಟಿ, ಪ್ರಶಾಂತ್ ಶೆಟ್ಟಿ ಮತ್ತು ವೈ.ವಿಶ್ವನಾಥ ಸನ್ಮಾನ ಪತ್ರ ವಾಚಿಸಿದರು. ಕಾರ್ಯದರ್ಶಿ ಪ್ರಸನ್ನ ಹೆಗ್ಡೆ ಸಹಕರಿಸಿದರು