ಕುಂದಾಪುರ: ಎರಡು ತಿಂಗಳಿಂದ ನೀರಿಲ್ಲದೆ ಒಣಗುತ್ತಿದ್ದ ತಲ್ಲೂರು ಹೆಮ್ಮಾಡಿ ನಡುವಿನ ರಾಜಾಡಿ ಕಾಂಡ್ಲಾ ವನಕ್ಕೆ ಕೊನೆಗೂ ನೀರು ಹರಿದು ಬರಲಾರಂಭಿಸಿದೆ. ಕಾಂಡ್ಲಾ ವನದಲ್ಲಿ ನೀರು ತುಂಬಲು ವಾರಗಟ್ಟಲೆ ಕಾಲಾವಕಾಶ ಬೇಕಿದ್ದು, ನಡುವೆ ನೀರು ಹರಿವು ನಿಲ್ಲಿಸಬಾರದು ಎಂದು ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ.
ರಾಜಾಡಿ ಕಾಂಡ್ಲಾ ವನದಲ್ಲಿ ನೀರಿಲ್ಲದ ಹಿನ್ನೆಲೆಯಲ್ಲಿ ಮಾರ್ಚ್ 4ರ ವಿಜಯವಾಣಿಯಲ್ಲಿ ‘ನೀರಿಲ್ಲದೆ ಕರಟುತ್ತಿದೆ ಕಾಂಡ್ಲಾ ವನ’ ಎಂಬ ವಿಶೇಷ ವರದಿ ಪ್ರಕಟವಾಗಿತ್ತು.
ರಾಜಾಡಿ ಕಾಂಡ್ಲಾ ವನ ಸಹಸ್ರಾರು ಸೂಕ್ಷ್ಮಜೀವಿಗಳು, ಜಲಚರಗಳು, ಹಕ್ಕಿಗಳ ತವರಾಗಿತ್ತು. ರಾಜಾಡಿ ಕಿಂಡಿ ಅಣೆಕಟ್ಟಿಗೆ ಹಲಗೆ ಜೋಡಿಸಿದ ನಂತರ ವನಕ್ಕೆ ಹಿನ್ನೀರು ಬರುವುದು ನಿಂತಿತ್ತು. ಐದು ಎಕರೆಗೂ ಮಿಕ್ಕಿದ ಜಾಗದಲ್ಲಿ ಅರಣ್ಯ ಇಲಾಖೆ ಕಾಂಡ್ಲಾ ವನ ಸೃಷ್ಟಿಸಿತ್ತು. ಪ್ರವಾಸಿ ತಾಣವಾಗಿ ಅಭಿವೃದ್ಧಿ ಮಾಡುವ ಪ್ರಯತ್ನವೂ ನಡೆದಿತ್ತು. ಇವೆಲ್ಲದರ ಮಧ್ಯೆ ನೀರಿಲ್ಲದೆ ಕಾಂಡ್ಲಾ ಒಣಗುತ್ತಿದ್ದು, ಬುಧವಾರದಿಂದ ಕಿಂಡಿ ಅಣೆಕಟ್ಟು ಗೇಟ್ ತೆರೆದು ನೀರು ಬಿಡಲಾಗುತ್ತಿದೆ. ನಿಧಾನವಾಗಿ ನೀರು ಕಾಂಡ್ಲಾ ವನಕ್ಕೆ ಹರಿದು ಬರುತ್ತಿದೆ. ಒಟ್ಟಾರೆ ನೀರು ಹರಿದು ಬರುತ್ತಿರುವುದರಿಂದ ಸಾಯುವ ಹಂತಕ್ಕೆ ಬಂದ ಕಾಂಡ್ಲಾಕ್ಕೆ ಆಕ್ಸಿಜನ್ ಸಿಕ್ಕಿದಂತಾಗಿದೆ.
ಮುಂದಿನ ವರ್ಷ ಮತ್ತೇನು?
ರಾಜಾಡಿ ಕಾಂಡ್ಲಾ ವನ ನೀರಿನ ಸಮಸ್ಯೆ ಸದ್ಯಕ್ಕೆ ಪರಿಹಾರವಾದರೂ ಮುಂದೆ ನಿರಂತರ ಕಾಡಲಿದೆ ಎನ್ನುತ್ತಾರೆ ಪರಿಸರ ಪ್ರೇಮಿಗಳು. ಎರಡು ತಿಂಗಳಿಂದ ಕಾಂಡ್ಲಾ ವನ ಒಣಗುತ್ತಿದ್ದರೂ ಸಂಬಂಧಪಟ್ಟವರು ಕಣ್ಣು ಹಾಯಿಸಿಲ್ಲ ಎನ್ನುವುದು ಇದಕ್ಕೆ ಸಾಕ್ಷಿ. ವಿಜಯವಾಣಿ ವರದಿ ಸಣ್ಣ ನೀರಾವರಿ ಹಾಗೂ ಅರಣ್ಯ ಇಲಾಖೆಯ ಗಮನ ಸೆಳೆದಿದ್ದು, ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಕುಮಾರ್ ಹೆಗಡೆ ಅಸೀಸರ ಹಾಗೂ ಡಿಸಿಎಫ್ ಡಾ.ದಿನೇಶ್ ಗಮನ ಸೆಳೆದಿದ್ದೇ ವನಕ್ಕೆ ನೀರು ಹರಿದು ಬರಲು ಕಾರಣ. ಮುಂದಿನ ವರ್ಷ ಮತ್ತೇನು ಎಂಬುದು ಸದ್ಯದ ಪ್ರಶ್ನೆ. ಮಳೆಗಾಲದಲ್ಲಿ ಕಿಂಡಿ ಅಣೆಕಟ್ಟು ಹಲಗೆ ತೆಗೆದು ಬೇಸಿಗೆಯಲ್ಲಿ ಹಲಗೆ ಹಾಕುವುದರಿಂದ ಮತ್ತೆ ಕಾಂಡ್ಲಾಕ್ಕೆ ನೀರಿಲ್ಲದಂತೆ ಆಗುತ್ತದೆ. ಪ್ರತಿವರ್ಷ ಕಾಂಡ್ಲಾ ವನಕ್ಕೆ ನೀರು ಬಿಡಿ ಎಂದು ದಮ್ಮಯ್ಯ ಹಾಕುವ ಸ್ಥಿತಿ ಬರಲಿದೆ. ಕಾಂಡ್ಲಾ ವನಕ್ಕೆ ಶಾಶ್ವತ ನೀರು ಹರಿದು ಬರುವಂತೆ ಮಾಡುವುದೇ ಸಮಸ್ಯೆ ಪರಿಹಾರಕ್ಕೆ ದಾರಿ ಎನ್ನುವುದು ಪರಿಸರ ಆಸಕ್ತರ ಅಭಿಪ್ರಾಯ.
ವಿಧಾನ ಪರಿಷತ್‌ನಲ್ಲಿ ಧ್ವನಿ
ರಾಜಾಡಿ ಕಿಂಡಿ ಅಣೆಕಟ್ಟಿಗೆ ಸಿಆರ್‌ಜಡ್ ಕ್ಲಿಯರೆನ್ಸ್ ಪಡೆಯದೆ ಸಣ್ಣ ನೀರಾವರಿ ಇಲಾಖೆ ಅಕ್ರಮವಾಗಿ ಕಟ್ಟಿದೆ. ನಿಯಮ ಉಲ್ಲಂಘನೆ ಹಾಗೂ ಕಾಂಡ್ಲಾ ವನಕ್ಕೆ ನೀರು ನಿರಾಕರಣೆ ಕುರಿತು ವಿಧಾನ ಪರಿಷತ್ ಸಭೆಯಲ್ಲಿ ಸ್ಥಳೀಯ ಪರಿಷತ್ ಸದಸ್ಯರು ಪ್ರಶ್ನೋತ್ತರದಲ್ಲಿ ಪ್ರಸ್ತಾಪಿಸಲಿದ್ದಾರೆ. ಸಿಆರ್‌ಜಡ್ ಉಲ್ಲಂಘನೆ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಣ್ಣ ನೀರಾವರಿ ಇಲಾಖೆ ವಿರುದ್ಧ ದೂರು ಕೂಡ ನೀಡಿದೆ. ಪರಿಸರ ಆಸಕ್ತರು ಅರಣ್ಯ ಹಾಗೂ ಸಣ್ಣ ನಿರಾವರಿ ಇಲಾಖೆ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಲೂ ಮುಂದಾಗಿದ್ದರು.
ಕಿಂಡಿ ಅಣೆಕಟ್ಟು ರೈತರಿಗೆ ವರ
ರಾಜಾಡಿ ಕಿಂಡಿ ಅಣೆಕಟ್ಟು ಹರೆಗೋಡು ಭಾಗದ ಕೃಷಿಕರಿಗೆ ವರ. ಆದರೆ ಸಿಗಡಿ ಕೆರೆಗೆ ಉಪ್ಪು ನೀರು ನುಗ್ಗಿ ಭೂಮಿ ಬರಡು ಮಾಡಿದ್ದಲ್ಲದೆ ರೈತರು ಕೃಷಿಯನ್ನೇ ಕೈಬಿಟ್ಟಿದ್ದರು. ಪರಿಸರದ ಬಾವಿ ನೀರು ಉಪ್ಪಾಗಿ ಕುಡಿಯುವ ನೀರಿಗೂ ಪರದಾಡುವಂತೆ ಮಾಡಿತ್ತು. ಸಿಗಡಿ ಕೃಷಿಗೆ ಕಾಂಡ್ಲಾ ವನದಿಂದ ಉಪ್ಪು ನೀರು ಪಡೆಯುತ್ತಿದ್ದಲ್ಲದೆ, ಕಿರು ಕಿಂಡಿ ಅಣೆಕಟ್ಟುಗಳ ನಿಷ್ಕ್ರಿಯ ಮಾಡಿತ್ತು. ರಾಜಾಡಿ ಬಳಿ ಕಿಂಡಿ ಅಣೆಕಟ್ಟು ಆದರೆ ಸಮಸ್ಯೆ ಪರಿಹಾರ ಆಗುತ್ತದೆ ಎಂದು ಜನ ಕಿಂಡಿ ಅಣೆಕಟ್ಟಿಗೆ ಒತ್ತಾಯಿಸಿದ್ದರು. ಜನರ ಒತ್ತಾಯಕ್ಕೆ ಮಣಿದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ 5 ಕೋಟಿ ರೂ.ವೆಚ್ಚದಲ್ಲಿ ಕಿಂಡಿ ಅಣೆಕಟ್ಟಿಗೆ ಮಂಜೂರಾತಿ ಕೊಡಿಸಿದ್ದರು. ಕಿಂಡಿ ಅಣೆಕಟ್ಟಿನ ನಂತರ ಉಪ್ಪು ನೀರು ಬರುವುದು ತಪ್ಪಿ ಸಿಗಡಿ ಕೆರೆ ಬಂದಾಗಿ ಕೃಷಿ ಭೂಮಿಗೆ ಉಪ್ಪು ನೀರು ನುಗ್ಗುವುದು ತಪ್ಪಿದೆ. ಆದರೆ ಇಲಾಖೆ ಬೇಜವಾಬ್ದಾರಿಗೆ ಕಾಂಡ್ಲಾ ವನಕ್ಕೆ ನೀರಿಲ್ಲದಂತಾಗಿದೆ. ಕಿಂಡಿ ಅಣೆಕಟ್ಟು ದಂಡೆ ಬಳಿ ಸಣ್ಣ ಪೈಪ್ ಜೋಡಿಸಿದ್ದರೆ ವನಕ್ಕೆ ನೀರಿನ ಸಮಸ್ಯೆ ಆಗುತ್ತಿರಲಿಲ್ಲ.