ಬೆಂಗಳೂರು: ಮುಂಗಾರು ಪ್ರವೇಶಿಸಿದ ದಿನವೇ ಆರ್ಭಟಿಸಿ ಎರಡು ದಿನದಿಂದ ಅಲ್ಪ ವಿರಾಮ ಕೊಟ್ಟಿದ ಮಳೆ ರಾಜಧಾನಿಯಲ್ಲಿ ಬುಧವಾರ ಧಾರಾಕಾರವಾಗಿ ಸುರಿದಿದೆ. ಇದರಿಂದಾಗಿ ತಗ್ಗು ಪ್ರದೇಶದ ನಿವಾಸಿಗಳು ಆತಂಕದಲ್ಲೇ ಕಾಲ ಕಳೆಯುವಂತಾಗಿದೆ.
ಬೆಳಗ್ಗೆಯಿಂದ ಬಿಸಿಲು ವಾತಾವರಣ ಇತ್ತು.ಸಂಜೆ 6.30ಕ್ಕೆ ಶುರುವಾದ ಮಳೆ, ಬೆಂಗಳೂರು ಉತ್ತರ, ರಾಜರಾಜೇಶ್ವರಿ ನಗರ ವಲಯ, ದಕ್ಷಿಣ ವಲಯ, ಯಲಹಂಕ ವಲಯದಲ್ಲಿ ಅಬ್ಬರಿಸಿದೆ. ಉತ್ತರಹಳ್ಳಿ, ಚಾಮರಾಜಪೇಟೆ, ಹಲಹಂಕ ಕೆಎಸ್ಎನ್ಡಿಎಂಸಿ, ವಿದ್ಯಾರಣ್ಯಪುರ, ಕೊಡಿಗೆಹಳ್ಳಿ, ರಾಜರಾಜೇಶ್ವರಿನಗರ ಸೇರಿ ನಗರದ ವಿವಿಧ ಪ್ರದೇಶಗಳಲ್ಲಿ ಬಿರುಸಾಗಿ ವರ್ಷಧಾರೆಯಾಗಿದೆ. ಕಳೆದ ಶನಿವಾರ ಮತ್ತು ಭಾನುವಾರ ಸುರಿದ ಭಾರಿ ಪ್ರಮಾಣದ ಮಳೆಯಿಂದಾಗಿ ಧರಶಾಹಿಯಾದ 200ಕ್ಕೂ ಅಧಿಕ ಮರಗಳು ನೂರಾರು ವಿದ್ಯುತ್ ಕಂಬಗಳು ದುರಸ್ತಿಕಾರ್ಯ ನಡೆಯುತ್ತಿರುವ ನಡುವೆಯೂ ಮತ್ತೆ ಮಳೆಯಿಂದ ಹತ್ತಾರು ವಿದ್ಯುತ್ ಕಂಬಗಳಿಗೆ ಹಾನಿಗೀಡಾಗಿ ಚರಂಡಿಗಳೆಲ್ಲ ತುಂಬಿ ಹರಿದವು. ಪ್ರಮುಖ ರಸ್ತೆಗಳಲ್ಲಿರುವ ಮರದ ಕೊಂಬೆಗಳು ಧರೆಗುರುಳಿದವು.
ಅಲ್ಲದೆ, ಮ್ಯಾನ್ಹೋಲ್ ಉಕ್ಕಿ ಹರಿದ ಪರಿಣಾಮ ರಸ್ತೆಗಳ ಮೇಲೆಯೇ ಕೊಳಚೆನೀರು ಹರಿಯಿತು. ರಾಜಕಾಲುವೆಯಲ್ಲಿ ರಭಸದಿಂದ ನೀರು ಹರಿಯುತ್ತಿರುವುದು ಕಂಡುಬಂತು.ಕೋರಮಂಗಲ, ಮಡಿವಾಳ, ವಿಲ್ಸನ್ ಗಾರ್ಡನ್, ಡೇರಿ ಸರ್ಕಲ್ ಸುತ್ತಮುತ್ತ ಮಳೆಯಿಂದಾಗಿ ವಾಹನ ದಟ್ಟಣೆ ಹೆಚ್ಚಾಗಿತ್ತು. ವಿದ್ಯುತ್ ಪೂರೈಕೆ ವ್ಯತ್ಯಯವಾಗಿದ್ದರಿಂದ ಕೆಲ ಬಡಾವಣೆಗಳಲ್ಲಿ ಬೆಳಕಿಲ್ಲದೆ ನಿವಾಸಿಗಳು ಪರದಾಡಬೇಕಾಯಿತು. ಜಕ್ಕಸಂದ್ರ ಮುಖ್ಯರಸ್ತೆ ಜಲಾವೃತಗೊಂಡಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.
5 ದಿನ ಸಾಧಾರಣ ಮಳೆ: ನಗರದಲ್ಲಿ ಸುರಿಯುತ್ತಿರುವ ಮಳೆ ಮುಂದಿನ ಐದು ದಿನ ಗುಡುಗು ಮಿಂಚು ಸಹಿತ ಸಾಧಾರಣ ಪ್ರಮಾಣದಲ್ಲಿ ವರ್ಷಧಾರೆಯಾಗಲಿದೆ. ಬೆಂಗಳೂರಿನಲ್ಲಿ ಮುಂದಿನ 48 ಗಂಟೆ ಮೋಡ ಕವಿದ ವಾತಾವರಣ ಇರಲಿದ್ದು, ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 32 ಡಿ.ಸೆ. ಹಾಗೂ 23 ಡಿ.ಸೆ. ಉಷ್ಣಾಂಶ ಇರಲಿದೆ.
18 ಮರಗಳು ಧರಾಶಾಹಿ: ಆರ್ಟಿನಗರ, ಬನಶಂಕರಿ, ನಾಗರಬಾವಿ ಸೇರಿ ಉದ್ಯಾನಗರಿಯ ವಿವಿಧ ಭಾಗಗಳಲ್ಲಿ ಗಾಳಿ ಮಳೆಗೆ 18 ಮರಗಳು ನೆಲಕ್ಕುರುಳಿವೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿರುವ ಸಾರ್ವಜನಿಕರು ಬಿದ್ದಿರುವ ಮರಗಳನ್ನು ತೆರವುಗೊಳಿಸುವಂತೆ ಮನವಿ ಮಾಡಿದ್ದಾರೆ.
ಎಲ್ಲೆಲ್ಲಿ ಎಷ್ಟು ಮಳೆ?
ಪ್ರದೇಶ ಮಿಮೀ
ಎಚ್.ಗೊಲ್ಲಹಳ್ಳಿ 28
ಕೆಂಗೇರಿ 28
ಹೆಮ್ಮೀಗೆಪುರ 26
ಪೀಣ್ಯ ಕೈಗಾರಿಕಾ ಪ್ರದೇಶ 24
ಹಂಪೆನಗರ 23
ಹೆರೋಹಳ್ಳಿ 22
ನಾಯಂಡಹಳ್ಳಿ 21
ಮಾರುತಿಮಂದಿರ 20