ಕೊಪ್ಪಳ: ಭಾಗ್ಯನಗರ, ಕೊಪ್ಪಳ ನಗರಗಳ ರಾಜ ಕಾಲುವೆಗಳ ಸರ್ವೇ ನಡೆಸಿ ಹದ್ದುಬಸ್ತು ಮಾಡುವಂತೆ ಒತ್ತಾಯಿಸಿ ಪ್ರಗತಿಪರ ಸಂಟನೆಗಳ ಒಕ್ಕೂಟದ ಮುಖಂಡರು ಮಂಗಳವಾರ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಕಡಿಗೆ ಮನವಿ ಸಲ್ಲಿಸಿದರು.
ಕೊಪ್ಪಳ, ಭಾಗ್ಯನಗರದಲ್ಲಿ ಕೆಲವರು ರಾಜಕಾಲುವೆ ಅತಿಕ್ರಮಣ ಮಾಡಿಕೊಂಡಿದ್ದಾರೆ. ಮಳೆ ನೀರು ಸರಿಯಾಗಿ ಹರಿದು ಹೋಗುತ್ತಿಲ. ನೀರು ಹರಿವಿನ ದಿಕ್ಕು ಬದಲಾದ ಕಾರಣ ತಗ್ಗು ಪ್ರದೇಶದ ಜನರ ಮನೆಗೆ ನೀರು ನುಗ್ಗುತ್ತಿದೆ. ಕಲ್ಯಾಣ ನಗರ, ಕುವೆಂಪು ನಗರ ಸೇರಿ ಇತರೆಡೆ ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯವಸ್ತವಾಗಿದೆ. ವಸ್ತುಗಳು, ದಾಖಲಾತಿಗಳು ಹಾಳಾಗಿವೆ. ಹಾವು ಸೇರಿ ವಿಷ ಜಂತುಗಳು ಮನೆಯೊಳಗೆ ಸೇರುವಂತಾಗಿದೆ. ಜನರು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದರು.
ಹುಲಿಕೆರೆ ಗುಡ್ಡದಿಂದ ಬರುವ ನೀರು ಹಲವು ವಾರ್ಡ್ಗಳ ಮೂಲಕ ರಾಜಕಾಲುವೆ, ಭಾಗ್ಯನಗರ ಮಾರ್ಗವಾಗಿ ಹಿರೇಹಳ್ಳ ಸೇರುತ್ತದೆ. ಕುಷ್ಟಗಿ ಮುಖ್ಯ ರಸ್ತೆಯಿಂದ ಆರಂಭವಾಗುವ ರಾಜಕಾಲುವೆ ಭಾಗ್ಯನಗರ ಮಾರ್ಗವಾಗಿ ಹಳ್ಳ ಸೇರುತ್ತದೆ. ಇವೆರೆಡೂ ಕಾಲುವೆಗಳು ಅಲ್ಲಲ್ಲಿ ಅತಿಕ್ರಮಣವಾಗಿವೆ. ಕುವೆಂಪು ನಗರ, ಕಲ್ಯಾಣ ನಗರ, ಇತರೆಡೆ ನೀರು ಹರಿವಿನ ಮೂಲಗಳು ಒತ್ತುವರಿಯಾಗಿವೆ. ಅನಧಿಕೃತ ಕಟ್ಟಡ ನಿರ್ಮಿಸಲಾಗಿದೆ. ಮಳೆಗಾಲದಲ್ಲಿ ಮುಖ್ಯ, ಒಳ ರಸ್ತೆಗಳ ಮೇಲೆ ನೀರು ಹರಿಯುತ್ತದೆ. ತಕ್ಷಣ ರಾಜ ಕಾಲುವೆ ಸರ್ವೇ ಮಾಡಿಸಬೇಕು. ಅತಿಕ್ರಮಣ ತೆರವುಗೊಳಿಸಬೇಕು. ತಡೆಗೋಡೆ ನಿರ್ಮಿಸಿ ಜನರಿಗೆ ಅನುಕೂಲ ಕಲ್ಪಿಸುವಂತೆ ಒತ್ತಾಯಿಸಿದರು.
ಪ್ರಮುಖರಾದ ಅಲ್ಲಮ ಪ್ರಭು ಬೆಟ್ಟದೂರು, ಡಿ.ಎಚ್.ಪೂಜಾರ, ಬಸವರಾಜ ಶೀಲವಂತರ, ಮಹಾಂತೇಶ ಕೊತಬಾಳ, ಕೆ.ಬಿ.ಗೋನಾಳ, ಬಸವರಾಜ ನರೇಗಲ್ ಇತರರಿದ್ದರು.