ವಿಜಯಪುರದ ಖಾಸಗಿ ಹೊಟೇಲ್‌ನಲ್ಲಿ ಅಹಿಂದ ಮುಖಂಡ ಎಸ್.ಎಂ. ಪಾಟೀಲ ಗಣಿಹಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಡಾ.ರವಿಕುಮಾರ ಬಿರಾದಾರ, ಸಂಜೀವ ಕಂಬಾಗಿ ಮತ್ತಿತರರಿದ್ದಾರೆ.  
ಜಿಲ್ಲೆ

ಪ್ರಜಾಪ್ರಭುತ್ವ ರಕ್ಷಣೆಗಾಗಿ ರಾಜಭವನ ಚಲೋ; ಎಸ್.ಎಂ. ಪಾಟೀಲ ಗಣಿಹಾರ

ವಿಜಯಪುರ: ಸಿಎಂ ಸಿದ್ದರಾಮಯ್ಯ ಅವರ ತೇಜೋವಧೆ ಖಂಡಿಸಿ, ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುತ್ತಿರುವ ಬಿಜೆಪಿ- ಜೆಡಿಎಸ್ ಕುತಂತ್ರಗಳನ್ನು ವಿರೋಧಿಸಿ ಮತ್ತು ಪ್ರಜಾಪ್ರಭುತ್ವ ರಕ್ಷಣೆಗಾಗಿ ಬೆಂಗಳೂರ ಚಲೋ ಹೋರಾಟ ಹಮ್ಮಿಕೊಳ್ಳಲಾಗಿದೆ.

ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಸಂಯಕ್ತ ಆಶ್ರಯದಲ್ಲಿ ಈ ಹೋರಾಟ ರೂಪಿಸಲಾಗಿದೆ. ಆ.27 ರಂದು ಬೆಳಗ್ಗೆ 11ಕ್ಕೆ ಬೆಂಗಳೂರಿನ ಸ್ವತಂತ್ರ ಉದ್ಯಾನದಲ್ಲಿ ಹೋರಾಟ ನಡೆಯಲಿದ್ದು, ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಜನ ಪಾಲ್ಗೊಳ್ಳಲಿದ್ದಾರೆ. ಜಿಲ್ಲೆಯಿಂದ ಲಕ್ಷಕ್ಕೂ ಅಧಿಕ ಜನ ರಾಜಧಾನಿಗೆ ತೆರಳಲಿದ್ದಾರೆ ಎಂದು ಒಕ್ಕೂಟದ ಮುಖಂಡರು ಶನಿವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಹಿಂದ ಮುಖಂಡ ಎಸ್.ಎಂ. ಪಾಟೀಲ ಗಣಿಹಾರ ಮಾತನಾಡಿ, ಮುಡಾ ಪ್ರಕರಣದಲ್ಲಿ ಅನವಶ್ಯಕವಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ಎಳೆದು ತರಲಾಗಿದೆ. ಯಾವುದೇ ತಪ್ಪಿಲ್ಲದಿದ್ದರೂ ರಾಜ್ಯಪಾಲ ತಾವರ್ ಚಂದ್ ಗೆಹ್ಲೋತ್ ಪೂರ್ವಾಗ್ರಹ ಪೀಡಿತರಾಗಿ, ಸಂವಿಧಾನದ ಆಶಯಕ್ಕೆ ಧಕ್ಕೆ ತರುವ ರೀತಿ ನಡೆದುಕೊಂಡಿದ್ದಾರೆ. ಬಿಜೆಪಿ- ಜೆಡಿಎಸ್ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ರಾಜ್ಯಪಾಲರು ಮೋದಿ- ಅಮಿತ್ ಷಾ ಷಡ್ಯಂತ್ರಕ್ಕೆ ದಾಳವಾಗಿದ್ದಾರೆ. ರಾಜ್ಯಪಾಲರು ಪಕ್ಷಪಾತಿ ಧೋರಣೆ ತಾಳಿದ್ದಾರೆ ಎಂದು ಆರೋಪಿಸಿದರು.

ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಯಾವುದೇ ತಪ್ಪೆಸಗಿಲ್ಲ. ಹೀಗಾಗಿ ಅವರ ಪರ ನಿಲ್ಲುವುದು ಅನಿವಾರ್ಯವಾಗಿದೆ. ಸಂವಿಧಾನ ವಿರೋಧಿ ಕೃತ್ಯದ ವಿರುದ್ಧ ಹೋರಾಟ ಮಾಡುವ ಸಂದರ್ಭ ಬಂದೊದಗಿದೆ. ಹೀಗಾಗಿ ರಾಜಭವನ ಚಲೋ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.

ಮುಖಂಡ ಡಾ.ರವಿಕುಮಾರ ಬಿರಾದಾರ ಮಾತನಾಡಿ, ಹಿಂದುಳಿದ ನಾಯಕ ಸಿದ್ದರಾಮಯ್ಯಗೆ ಕಳಂಕ ತರಲು ಬಿಜೆಪಿ- ಜೆಡಿಎಸ್ ಹುನ್ನಾರ ನಡೆಸಿವೆ. ಇಂಥ ಹುನ್ನಾರ ತಡೆಗೆ ಎಲ್ಲ ವರ್ಗದ ಜನ ಹೋರಾಟ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ದಲಿತ ಮುಖಂಡ ಸಂಜೀವ ಕಂಬಾಗಿ ಮಾತನಾಡಿ, ಸಿದ್ದರಾಮಯ್ಯ ಅವರು ಸರ್ವ ಜನಾಂಗದ ನಾಯಕ. ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ತತ್ವದಡಿ ನಂಬಿಕೆ ಇರಿಸಿಕೊಂಡು ಆಡಳಿತ ನಡೆಸಿದವರು. ಅಂಥ ನಾಯಕನಿಗೆ ಕಳಂಕ ತರುವ ಹುನ್ನಾರ ಸಹಿಸುವುದಿಲ್ಲ ಎಂದರು.
ಮುಖಂಡರಾದ ಫಯಾಜ್ ಕಲಾದಗಿ, ಮಲ್ಲು ಬಿದರಿ ಇದ್ದರು.