ಜಿಲ್ಲೆ

ತೋಟಗಳಿಗೆ ಕಾಡು ಪ್ರಾಣಿ ಹಾವಳಿ ಮಾಡಿದ ಸಂದರ್ಭ ೧೧೨ಕ್ಕೆ ಕರೆ ಮಾಡಿ - ರೈತ ಸಂಘ

Mangaluru - Nishantha Narayana

ಪುತ್ತೂರು: ರೈತರಿಗೆ ಕಾಡು ಪ್ರಾಣಿಗಳಿಂದ, ಕಳ್ಳರಿಂದ, ದರೋಡೆಕೋರರಿಂದ ರಕ್ಷಣೆ ನೀಡುವ ಕೋವಿಯನ್ನು ಚುನಾವಣಾ ಸಮಯದಲ್ಲಿ ಠೇವಣಿ ಇಡುವುದರಿಂದ ವಿನಾಯಿತಿ ನೀಡುವಂತೆ ಹಲವು ರೀತಿಯಲ್ಲಿ ಮನವಿಯನ್ನು ಮಾಡಲಾಗಿದೆ. ಎಲ್ಲೂ ಇಲ್ಲದ ಕಾನೂನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗುತ್ತಿದ್ದು, ಠೇವಣಿ ಇಟ್ಟಿರುವ ರೈತರು ಕಾಡು ಪ್ರಾಣಿಗಳು ಬಂದ ಸಂದರ್ಭದಲ್ಲಿ ೧೧೨ ತುರ್ತು ಸೇವೆಯನ್ನು ಬಳಸಿಕೊಳ್ಳುವ ತೀರ್ಮಾನವನ್ನು ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಹೇಳಿದರು.

ಸವಣೂರು ಭಾಗದ ಅಗರಿಯಲ್ಲಿ ರತ್ನಾಕರ ಸುವರ್ಣ ಎಂಬವರಿಗೆ ಕಾಡು ಹಂದಿ ತೀವ್ರವಾದ ದಾಳಿಯನ್ನು ಮಾಡಿ ತೀವ್ರ ನಿಘಾ ಸೇರುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರ ಜೀವಕ್ಕೆ ಆಗಿರುವ ಅಪಾಯಕ್ಕೆ ಜಿಲ್ಲಾಡಳಿತವೇ ಹೊಣೆಯಾಗಿದ್ದು, ಚಿಕಿತ್ಸೆಯ ಸಂಪೂರ್ಣ ಖರ್ಚುವೆಚ್ಚವನ್ನು ಭರಿಸಬೇಕು. ಜಿಲ್ಲಾಧಿಕಾರಿಯವರಿಗೆ ದೂರವಾಣಿ ಮಾಡಿದರೆ, ಜಿಲ್ಲಾಧಿಕಾರಿಯಂತೆ ಮಾತನಾಡಿ ಕೊನೆಯಲ್ಲಿ ಡಿಸಿಯವರ ಪಿ ಎ ಎಂದು ಹೇಳುವ ಮೂಲಕ ಬೇಜವಾಬ್ದಾರಿ ತನದಿಂದ ವರ್ತಿಸುತ್ತಿದ್ದಾರೆ. ಅಂತ ವ್ಯಕ್ತಿಯಿಂದ ಜಿಲ್ಲಾಧಿಕಾರಿಗಳ ಅಧಿಕಾರ ದುರುಪಯೋಗವಾಗುವ ಸಾಧ್ಯತೆ ಇದ್ದು, ತಕ್ಷಣ ಉಚ್ಛಾಟಣೆ ಮಾಡಬೇಕು. ಈ ಎಲ್ಲಾ ಪ್ರಕರಣದ ಬಗ್ಗೆ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರೈತ ಸಂಘ ಉಪಾಧ್ಯಕ್ಷ ಶಿವಣ್ಣ ಗೌಡ ಮಾತನಾಡಿ ಜಿಲ್ಲಾಧಿಕಾರಿಗಳನ್ನು ಬೇಟಿ ಮಾಡಿ ಸಮಸ್ಯೆಯನ್ನು ಹೇಳಿಕೊಳ್ಳುವ ಸಂದರ್ಭದಲ್ಲಿ ಕೋವಿ ಪರವಾನಿಗೆ ರದ್ದು ಮಾಡುವುದಾಗಿ ಹೇಳಿಕೊಂಡಿದ್ದಾರೆ. ಚುನಾವಣೆ ಪ್ರಕ್ರಿಯೆ ಆರಂಭವಾಗುವ ಮೊದಲೇ ಪೊಲೀಸರಿಂದ ಕೋವಿ ಠೇವಣಿ ಇಡುವಂತೆ ಕಿರುಕುಳ ನೀಡಿದ್ದಾರೆ. ಮಧ್ಯಾಹ್ನ ೧೨ ಸುಮಾರಿಗೆ ತೊಟಕ್ಕೆ ಹೋದ ಕೃಷಿಕರ ಮೇಲೆ ಹಂದಿ ದಾಳಿ ಮಾಡಿ ಕೋಮಾ ಸ್ಥಿತಿಗೆ ತಲುಪಿದ್ದರು. ಹಿಂದಿನ ಚುನಾವಣೆಗಳ ಸಂದರ್ಭ ಗುಡುಹೊಡೆದುಕೊಂಡು ಸತ್ತವರು ಜಿಲ್ಲೆಯಲ್ಲಿ ಇದ್ದಾರಾ? ಹತ್ತು ದಿನದಲ್ಲೇ ರೈತರ ಜೀವಕ್ಕೆ ಸಮಸ್ಯೆಯಾಗುವ ಪರಿಸ್ಥಿತಿ ಬಂದಿದ್ದು, ಇನ್ನು ಮುಂದೆ ಪರಿಸ್ಥಿತಿ ಏನಾಗಬಹುದೆಂಬ ಆತಂಕ ಎಲ್ಲರನ್ನೂ ಕಾಡುತ್ತಿದೆ. ಜಿಲ್ಲಾಧಿಕಾರಿಗಳು, ಪೊಲೀಸ್ ಇಲಾಖೆಯವರು ನಮ್ಮನ್ನು ಮನೆಯಲ್ಲಿ ಕಾಯುತ್ತಾರಾ? ಎಂದು ಪ್ರಶ್ನಿಸಿದರು.

ರೈತ ಮುಖಂಡ ಪ್ರವೀಣ್ ಕಡೆಂಜಿ ಮಾತನಾಡಿ ಚುನಾವಣಾ ಆಯೋಗ ಹೇಳಿದ ಎಲ್ಲಾ ಮಾರ್ಗ ಸೂಚಿಯನ್ನು ಜಿಲ್ಲಾಡಳಿತ ಪಾಲನೆ ಮಾಡುತ್ತಿದೆಯಾ? ಕೋವಿಯನ್ನು ಠೇವಣಿ ಇಡುವ ಹೆಸರಿನಲ್ಲಿ ಎಲ್ಲೆಂದರಲ್ಲಿ ಡಂಪ್ ಮಾಡಿ ಹಾಳು ಮಾಡಿ ಅದರ ದುರಸ್ಥಿಯೂ ರೈತರೇ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಮಾಜಿಕ ಜವಾಬ್ದಾರಿ ಇದ್ದವರು ಹಂದಿ ದಾಳಿಗೆ ಏನು ಕ್ರಮಕೈಗೊಂಡಿದ್ದಾರೆ. ಎಲ್ಲಾರೀತಿಯಿಂದ ದಬ್ಬಾಳಿಕೆಯನ್ನು ಮಾಡುತ್ತಿರುವವರು ರೈತರು ತಾಕತ್ತು ಇಲ್ಲದವರು ಎಂದು ಭಾವಿಸುವುದು ಬೇಡ. ರೈತರನ್ನು ೩ನೇ ಪ್ರಜೆಯಾಗಿ ನೋಡುತ್ತಿರುವುದು ತಕ್ಷಣ ನಿಲ್ಲಬೇಕು ಎಂದು ಆಗ್ರಹಿಸಿದರು.

ಪ್ರಧಾನ ಕಾರ್ಯದರ್ಶಿ ಹೊನ್ನಪ್ಪ ಗೌಡ, ಪಡುವನ್ನೂರು ವಲಯಾಧ್ಯಕ್ಷ ಶಿವಚಂದ್ರ ಉಪಸ್ಥಿತರಿದ್ದರು.