ಹನೂರು: ತಾಲೂಕಿನ ಗಡಿ ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಗ್ರಾಮಗಳಿಗೆ ಅಗತ್ಯ ಮೂಲ ಸೌಕರ್ಯ ಒದಗಿಸುವಲ್ಲಿ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ ಒತ್ತಾಯಿಸಿದರು.
ತಾಲೂಕಿನ ಗೋಪಿನಾಥಂ ಗ್ರಾಪಂ ವ್ಯಾಪ್ತಿಯ ಆಲಂಬಾಡಿಯಲ್ಲಿ ಮಂಗಳವಾರ ಅಗತ್ಯ ಮೂಲ ಸೌಕರ್ಯ ಒದಗಿಸುವ ಸಂಬಂಧ ಆಯೋಜಿಸಿದ್ಧ ರೈತ ಸಂಘದ ಪದಾಧಿಕಾರಿಗಳು, ಗ್ರಾಮಸ್ಥರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ತಾಲೂಕಿನ ಗಡಿ ಗೋಪಿನಾಥಂ ಗ್ರಾಪಂ ವ್ಯಾಪ್ತಿಯಲ್ಲಿನ ಪುದುಕಾಡು, ತೇಂಗಕೊಂಬು, ಪುಂಗಂ, ಅಪ್ಪುಕಾಮ್‌ಪಟ್ಟಿ, ಜಂಬೂರ್‌ಪಟ್ಟಿ, ಮಾರಿಕೊಟ್ಟಾಯಿ ಹಾಗೂ ಆಲಂಬಾಡಿ ಗ್ರಾಮದಲ್ಲಿ ಜನರು ಕಳೆದ ಹಲವು ದಶಕಗಳಿಂದಲೂ ವಾಸಿಸುತ್ತಿದ್ದಾರೆ. ಆದರೆ, ಇಲ್ಲಿನ ಕುಟುಂಬಗಳಿಗೆ ಮನೆ ಹಕ್ಕುಪತ್ರ ನೀಡಿಲ್ಲ. ಕಾವೇರಿ ನದಿ ದಡದಲ್ಲಿದ್ದರೂ ಸಮರ್ಪಕ ಕುಡಿಯುವ ನೀರಿನ ಸೌಕರ್ಯವಿಲ್ಲ. ಅದರಲ್ಲೂ ಅಪ್ಪುಕಾಮ್ ಪಟ್ಟಿ, ಪುದುಕಾಡು ಹಾಗೂ ಪುಂಗಂನಲ್ಲಿ ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆ ತಲೆದೂರಿದ್ದು, ಜನರು ನೀರಿಗಾಗಿ ಪರದಾಡುತ್ತಿದ್ದಾರೆ. ಪ್ರತಿ ಮನೆಗೂ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಜಲಜೀವನ್ ಮಿಷನ್ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ಪೂರ್ಣಗೊಂಡಿಲ್ಲ. ಸಮರ್ಪಕ ವಿದ್ಯುತ್, ರಸ್ತೆ ಹಾಗೂ ಚರಂಡಿ ಸೌಕರ್ಯವಿಲ್ಲ. ಸರ್ಕಾರದ ವಿವಿಧ ಯೋಜನೆಯಡಿ ಸಿಗುವ ಮನೆ ಸೌಲಭ್ಯಗಳು ಸಹ ಜನರಿಗೆ ದೊರೆತಿಲ್ಲ. ಇದರಿಂದ ಇಲ್ಲಿನ ಜನರು ಮೂಲ ಸೌಕರ್ಯದಿಂದ ವಂಚಿತರಾಗಿದ್ದು, ಕಷ್ಟದ ನಡುವೆಯೇ ಜೀವನ ಸಾಗಿಸುತ್ತಿದ್ದಾರೆ. ಅಗತ್ಯ ಮೂಲ ಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.
ತಾಲೂಕು ಸಂಘದ ಅಧ್ಯಕ್ಷ ಅಮ್ಜದ್‌ಖಾನ್ ಮಾತನಾಡಿ, ಇನ್ನು ಕಾವೇರಿ ನದಿ ತೀರದ ಅರಣ್ಯ ಪ್ರದೇಶದಲ್ಲಿ ಪಾರಂಪರಿಕವಾಗಿ ಇಲ್ಲಿನ ಜನರು ಕೃಷಿ ಮಾಡುವ ಮೂಲಕ ವಾಸಿಸುತ್ತಿದ್ದಾರೆ. 2012ರಲ್ಲಿ ಕೇಂದ್ರ ಸರ್ಕಾರ ಪಾರಂಪರಿಕ ಅರಣ್ಯ ವಾಸಿಗಳು ಹಾಗೂ ಬುಡಕಟ್ಟು ಜನರಿಗೆ ಅಗತ್ಯ ಮೂಲ ಸೌಕರ್ಯ ಒದಗಿಸುವಂತೆ ಅಧಿಸೂಚನೆ ಹೊರಡಿಸಿದೆ. ಆದರೆ ಇದು ಇಲ್ಲಿವರೆಗೆ ಫಲಪ್ರದವಾಗಿಲ್ಲ. ಅಗತ್ಯ ಮೂಲ ಸೌಕರ್ಯ ಕಲ್ಪಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಂಘಟನೆಯ ವತಿಯಿಂದ ಹೋರಾಟ ರೂಪಿಸುವುದಾಗಿ ಹೇಳಿದರು.
ಜಲಜೀವನ್ ಮಿಷನ್ ಯೋಜನೆ ಅಧಿಕಾರಿಗಳು ಮಾತನಾಡಿ, ಕಾಮಗಾರಿಯನ್ನು ಕೈಗೊಳ್ಳಲು ಅರಣ್ಯ ಇಲಾಖೆ ಅನುಮತಿ ನೀಡುತ್ತಿಲ್ಲ. ಇದರಿಂದ ಕಾಮಗಾರಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಅರಣ್ಯ ಇಲಾಖೆಯ ಅಧಿಕಾರಿಗಳು ಕ್ರಮವಹಿಸುವುದಾಗಿ ಭರವಸೆ ನೀಡಿದರು.
ತಾಲೂಕು ಪಂಚಾಯಿತಿ ಇಒ ಉಮೇಶ್ ಮಾತನಾಡಿ, ನೀರಿನ ಸಮಸ್ಯೆ ತಲೆದೂರಿರುವ 3 ಗ್ರಾಮಗಳಿಗೆ ಬುಧವಾರದಿಂದಲೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುವುದು. ಇನ್ನುಳಿದ ಗ್ರಾಮಗಳಲ್ಲಿ ಹೊಸ ಪೈಪ್‌ಲೈನ್ ಕಾಮಗಾರಿ ಕೈಗೊಂಡು ಸಮರ್ಪಕವಾಗಿ ನೀರು ಪೂರೈಸಲಾಗುವುದು. ಸದ್ಯದಲ್ಲಿಯೇ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಅಗತ್ಯ ಮೂಲ ಸೌಕರ್ಯವನ್ನು ಒದಗಿಸುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಆರ್‌ಎಫ್‌ಒ ಲೋಕೇಶ್ ಚವ್ಹಾಣ್, ಸಂಘದ ಗೌರವಾಧ್ಯಕ್ಷ ರಾಜೇಂದ್ರ, ಪದಾಧಿಕಾರಿಗಳಾದ ರವಿನಾಯ್ಡು, ಲೋಕೇಶ್‌ಗೌಡ, ನಾಗರಾಜು, ವೆಂಕಟಾಚಲ, ಪಳನಿಸ್ವಾಮಿ, ಗೋವಿಂದರಾಜು, ಸ್ಥಳೀಯ ಮುಖಂಡ ತಂಗವೇಲು, ಪೆರಿಯಸ್ವಾಮಿ, ರತ್ನವೇಲು ಇತರರಿದ್ದರು.