ಜಿಲ್ಲೆ

ಪ್ರತಿ ಎಕರೆಗೆ 25 ಸಾವಿರ ರೂ ಪರಿಹಾರ ಕೊಡಿ: ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ಆಗ್ರಹ

ಕೆ.ಎನ್.ರಾಘವೇಂದ್ರ

ಮಂಡ್ಯ: ಭೀಕರ ಬರಗಾಲದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಮಯದಲ್ಲಿ ಅನ್ನದಾತರ ನೆರವಿಗೆ ನಿಲ್ಲಬೇಕಿದ್ದ ರಾಜ್ಯ ಮತ್ತು ಕೇಂದ್ರ ಸರ್ಕಾರ ಸಮನ್ವಯ ಕೊರತೆಯಿಂದ ಬರ ಪರಿಹಾರದ ಹಣ ಪಾವತಿಸಿಲ್ಲ. ಆದ್ದರಿಂದ ಪಾಳು ಬಿದ್ದ ಜಮೀನಿಗೂ ಸೇರಿದಂತೆ ಪ್ರತಿ ಎಕರೆಗೆ 25 ಸಾವಿರ ರೂ ಪರಿಹಾರ ನೀಡಬೇಕು ಎಂದು ರೈತ ಸಂಘ(ಮೂಲ ಸಂಘಟನೆ) ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ಒತ್ತಾಯಿಸಿದರು.

ಯಾವುದೇ ತಾರತಮ್ಯ ಮಾಡದೆ ರೈತರಿಗೆ ಪರಿಹಾರ ಹಣವನ್ನು ಹಂಚಿಕೆ ಮಾಡಬೇಕು. ಕಬ್ಬು ಬೆಳೆ ಒಣಗಿದ್ದು, ಆದ್ದರಿಂದ ಈ ಹಂಗಾಮಿನ ಕಬ್ಬಿನ ಬೆಳೆಗೆ ಪ್ರತಿ ಎಕರೆಗೆ 50 ಸಾವಿರ ರೂಪಾಯಿ ನೀಡಬೇಕು. ತೆಂಗು, ಅಡಿಕೆ, ಮಾವು, ಸಪೋಟ ಸೇರಿದಂತೆ ಇನ್ನಿತರೆ ಬೆಳೆಗಳಿಗೂ ಜೀವಿತಾವಧಿಯ ಲೆಕ್ಕದಲ್ಲಿ ಒಂದು ಮರಕ್ಕೆ 25 ಸಾವಿರ ರೂಪಾಯಿ ಪರಿಹಾರ ಕೊಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ತಾಕೀತು ಮಾಡಿದರು.

ಪೂರ್ವ ಮುಂಗಾರು ಮಳೆ ಆರಂಭವಾಗಿದ್ದು, ಕೃಷಿಗೆ ಅನುಕೂಲವಾಗುವಂತೆ ಕಬ್ಬು, ಭತ್ತ, ರಾಗಿ, ದ್ವಿದಳ ಧಾನ್ಯಗಳ ಬಿತ್ತನೆ ಬೀಜಗಳನ್ನು ಉಚಿತವಾಗಿ ವಿತರಿಸಬೇಕು. ರೈತರಿಗೆ ಆರು ತಿಂಗಳಿನಿಂದ ಬಾಕಿಯಿರುವ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡಬೇಕು. ಪ್ರತಿ ಲೀಟರ್ ಹಾಲಿಗೆ ಹತ್ತು ರೂಪಾಯಿ ಹೆಚ್ಚಿಸಬೇಕು. ವಿಶ್ವೇಶ್ವರಯ್ಯ ನಾಲೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಕಾಲದಲ್ಲಿ ಬೆಳೆಗಳನ್ನು ಬೆಳೆಯಲು ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಮಂಜೇಶ್‌ಗೌಡ ಮಾತನಾಡಿ, ನಮ್ಮಲ್ಲಿ ಕೆಲವರು ಫಸಲು ಮಾಡಿಲ್ಲ. ಭೂಮಿಯನ್ನು ತೆಕ್ಕಲು ಬಿಟ್ಟಿದ್ದಾರೆ. ಹಾಗಾಗಿ ಅವರಿಗೂ ಪರಿಹಾರ ನೀಡಬೇಕು. ಹಾಲು ಉತ್ಪಾದಕರಿಗೆ ಆರು ತಿಂಗಳಿನಿಂದ ನೀಡಬೇಕಿರುವ ಪ್ರೋತ್ಸಾಹ ಧನವನ್ನು ವಿತರಿಸಿ, ಪ್ರತಿ ಲೀಟರ್ ಹಾಲಿಗೆ ಹತ್ತು ರೂಪಾಯಿ ಹೆಚ್ಚಳ ಮಾಡಬೇಕು. ಹಳೆಯ ವಿದ್ಯುತ್ ಯೋಜನೆಯನ್ನು ಮರು ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

ಸಂಘದ ಪದಾಧಿಕಾರಿಗಳಾ ಕೆ.ನಾಗೇಂದ್ರಸ್ವಾಮಿ, ಶಿವಲಿಂಗಯ್ಯ, ವೆಂಕಟೇಶ್, ಕೆ.ರಾಮಲಿಂಗೇಗೌಡ ಇದ್ದರು.