ಜಿಲ್ಲೆ

ಯಾರದೋ ಆಧಾರ್ ಇನ್ಯಾರಿಗೋ ಸೌಲಭ್ಯ; ಸಬ್ಸಿಡಿ ತಾಡಪತ್ರಿ ಖರೀದಿಗೆ ಹೋದವರಿಗೆ ಅಚ್ಚರಿ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ಕೃಷಿ ಇಲಾಖೆಯಲ್ಲಿ ಎಫ್‌ಐಡಿ ಹೊಂದಿರುವ ನೋಂದಾಯಿತ ರೈತರಿಗೆ ಸರ್ಕಾರ ಹಲವಾರು ಸಲಕರಣೆಗಳನ್ನು ಸಬ್ಸಿಡಿಯಲ್ಲಿ ನೀಡುತ್ತದೆ. ಆದರೆ, ಸರ್ಕಾರ ಕೊಡುವ ಸೌಲಭ್ಯ ನೀಡುವಲ್ಲಿ ಧಾರವಾಡ ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ನಿರಾಕರಿಸಿದ್ದಾರೆ. ವಿಪರ್ಯಾಸ ಎಂದರೆ ಯಾರದೋ ಆಧಾರ್ ಕಾರ್ಡ್ಗೆ ಇನ್ಯಾರಿಗೋ ತಾಡಪತ್ರಿ ವಿತರಿಸಿರುವುದು ಬೆಳಕಿಗೆ ಬಂದಿದೆ.
ತಾಲೂಕಿನ ರಾಮಾಪುರ ಗ್ರಾಮದ ರೈತರಾದ ಈಶ್ವರಪ್ಪ ಬಡಶೆಟ್ಟಿ ಸೇರಿ ನಾಲ್ವರು ಸಬ್ಸಿಡಿಯಲ್ಲಿ ತಾಡಪತ್ರಿ ಖರೀದಿಸಲು ಧಾರವಾಡ ರೈತ ಸಂಪರ್ಕ ಕೇಂದ್ರಕ್ಕೆ ಶುಕ್ರವಾರ ಹೋಗಿದ್ದರು. ಅವರ ಆಧಾರ್ ಸಂಖ್ಯೆ ನಮೂದಿಸಿದಾಗ ಈ ಹೆಸರಿನಲ್ಲೇ ಈಗಾಗಲೇ ತಾಡಪತ್ರಿ ಖರೀದಿಸಲಾಗಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ನಾವ್ಯಾರೂ ತಾಡಪತ್ರಿ ಖರೀದಿಸಿಲ್ಲ ಎಂದು ರೈತರು ಹೇಳಿದರೂ ಸಿಬ್ಬಂದಿ ಕೇಳಲಿಲ್ಲ.
ಇನ್ನು ಒಂದು ತಾಡಪತ್ರಿಗೆ 1,650 ರೂಪಾಯಿಗೆ ಕೊಡುತ್ತಿದ್ದಾರೆ. ಹಣ ಪಾವತಿಸಿದ ರೈತರಿಗೆ ರಸೀದಿಯನ್ನು ಕೊಡುತ್ತಿಲ್ಲ. ಈ ಬಗ್ಗೆ ಕೇಳಿದರೆ ಬಿಲ್ ಬುಕ್ ಇಲ್ಲ ಎಂದು ಹೇಳಿ ಕಳಿಸಿದ್ದಾರೆ. ಕೃಷಿ ಇಲಾಖೆಯ ಸಲಕರಣೆಗಳನ್ನು ಒಮ್ಮೆ ಪಡೆದರೆ 3 ವರ್ಷ ಮತ್ತೆ ಪಡೆಯಲು ಸಾಧ್ಯವಿಲ್ಲ. ಇದಕ್ಕೆ ಯಾರು ಹೊಣೆ ಎಂದು ವಿಚಾರಿಸಿದರೆ ಅಽಕಾರಿಗಳು ಮಾಹಿತಿ ನೀಡದೆ ಜಾರಿಕೊಂಡರು ಎಂದು ರೈತ ಈಶ್ವರಪ್ಪ ಪುತ್ರ ಮುತ್ತು ಬೇಸರ ವ್ಯಕ್ತಪಡಿಸಿದ್ದಾರೆ.