ಮೈಸೂರು: ಪ್ರತಿನಿತ್ಯ ವಾಹನಗಳ ಕರ್ಕಶ ಶಬ್ದವೇ ಕೇಳುತ್ತಿದ್ದ ಸಾಂಸ್ಕೃತಿಕ ನಗರಿ ಮೈಸೂರಿನ ಜನರಿಗೆ ಶುಕ್ರವಾರ ಕಿವಿಗೆ ಇಂಪೆನಿಸುವ ಹಳ್ಳಿಸೊಗ ಡಿನ ಶಬ್ದಗಳು ಕರ್ಣಾನಂದ ನೀಡಿದವು. ರೈತ ದಸರಾ ಪ್ರಯುಕ್ತ ಆಯೋಜಿಸಿದ್ದ ಮೆರವಣಿಗೆಯಲ್ಲಿ ಎತ್ತಿನ ಗಾಡಿಗಳ ಘಂಟೆಯ ಸದ್ದು, ಹಸು, ಕುರಿಗಳ ಕೂಗು, ಜಾನಪದ ವಾದ್ಯಗಳ ಝೇಂಕಾರ ನಗರಕ್ಕೆ ಗ್ರಾಮೀಣ ಸೊಬಗಿನ ಮೆರುಗು ನೀಡಿದವು.
ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಸ್ವತಃ ಎತ್ತಿನಗಾಡಿ ಓಡಿಸುವ ಮೂಲಕ ರೈತ ದಸರಾ ಮೆರವಣಿಗೆಗೆ ಚಾಲನೆ ನೀಡಿದರು. ಶಾಸಕ ಕೆ. ಹರೀಶ್ ಗೌಡ ಸೇರಿದಂತೆ ಇತರರು ಸಚಿವರಿಗೆ ಸಾಥ್ ನೀಡಿದರು. ತಳಿರು ತೋರಣಗಳಿಂದ ಅಲಂಕರಿಸಿದ್ದ ಎತ್ತಿನಗಾಡಿಯಲ್ಲಿ ಸಚಿವರು ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಿಂದ ಕೆ.ಆರ್. ವೃತ್ತದವರೆಗೆ ಸಾಗಿದರು.
ಎತ್ತಿನಗಾಡಿಯ ಚಕ್ರಗಳು ರಸ್ತೆಯಲ್ಲಿ ಉರುಳುತ್ತಿದ್ದಂತೆ ಹಳ್ಳಿಯ ನೆನಪುಗಳು ಮರುಕಳಿಸಿದವು. ಒಂದು ಕಾಲದಲ್ಲಿ ಕೃಷಿ ಚಟುವಟಿಕೆ ಗಳಿಗೆ ಆಸರೆಯಾಗಿದ್ದ ಎತ್ತಿನಗಾಡಿಗಳು, ಹೊಲದ ಕೆಲಸಗಳಲ್ಲಿ ರೈತರ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿದ್ದ ಜಾನುವಾರುಗಳು ಇಂದಿನ ತಲೆಮಾರಿಗೆ ಗ್ರಾಮೀಣ ಬದುಕಿನ ಪರಿಚಯ ಮಾಡಿಕೊಟ್ಟವು. ಆಧುನಿಕತೆಯ ವೇಗದಲ್ಲಿ ಬದಲಾಗುತ್ತಿರುವ ಬದುಕಿನ ನಡುವೆ ರೈತ ದಸರಾ ಮೆರವಣಿಗೆ ಕೃಷಿಯ ಬೇರುಗಳನ್ನು ನೆನಪಿಸಿತು.
ಮೆರವಣಿಗೆಯ ಮುಂಚೂಣಿಯಲ್ಲಿ ಪೂರ್ಣಕುಂಭ ಹೊತ್ತ ಮಹಿಳೆಯರು, ನಂದಿಧ್ವಜ ಹಾಗೂ ನಾದಸ್ವರ ತಂಡಗಳು ಸಾಗಿದವು. ಅವುಗಳ ಬೆನ್ನಲ್ಲೇ ನಗಾರಿ ಕುಣಿತ, ಪೂಜಾ ಕುಣಿತ, ವೀರಗಾಸೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ತಮ್ಮ ಕಲಾ ವೈಭವವನ್ನು ಪ್ರದರ್ಶಿಸಿದವು. ಟಿಬೇಟಿಯನ್ ನೃತ್ಯ, ಗಿರಿಜನ ನೃತ್ಯ, ವಿದ್ಯುತ್ಚಾಲಿತ ಟ್ರಾೃಕ್ಟರ್ ಗಮನ ಸೆಳೆಯಿತು.
ಮೆರವಣಿಗೆಯು ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಿಂದ ಹೊರಟು ಚಾಮರಾಜ ವೃತ್ತ, ಅಲ್ಬರ್ಟ್ ವಿಕ್ಟರ್ ರಸ್ತೆ, ಕೆ.ಆರ್. ವೃತ್ತ, ದೇವರಾಜ ಅರಸು ರಸ್ತೆ ಹಾಗೂ ದಿವಾನ್ಸ್ ರಸ್ತೆಯ ಮೂಲಕ ಜೆಕೆ ಮೈದಾನ ತಲುಪಿತು. ಮೆರವಣಿಗೆ ಸಾಗಿದ ಮಾರ್ಗದುದ್ದಕ್ಕೂ ಗ್ರಾಮೀಣ ಸಂಸ್ಕೃತಿಯ ವೈವಿಧ್ಯವನ್ನು ಬಿಂಬಿಸುವ ದೃಶ್ಯಗಳು ಕಣ್ಮನ ಸೆಳೆದವು.
ಹಳ್ಳಿಕಾರ್ ಎತ್ತು, ಬಂಡೂರು ಕುರಿಗಳ ಮೆರುಗು:
ನಾಡಿನ ಹೆಮ್ಮೆಯ ಹಳ್ಳಿಕಾರ್ ಎತ್ತುಗಳು ಹಾಗೂ ಬಂಡೂರು ಕುರಿಗಳು ರೈತ ದಸರಾ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿತ್ತು. ಕೃಷಿ ಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಹಳ್ಳಿಕಾರ್ ತಳಿಯ ಎತ್ತುಗಳು ತಮ್ಮ ಗಾಂಭೀರ್ಯದಿಂದ ಗಮನ ಸೆಳೆಯಿತು. ಇದರ ಜತೆಗೆ ಉದ್ದನೆಯ ಕಿವಿಗಳ ಮೇಕೆಗಳು ಹಾಗೂ ಪುಟ್ಟ ಗಾತ್ರದ ಪುಂಗನೂರು ಹಸುಗಳು ಜನರ ಕುತೂಹಲಕ್ಕೆ ಕಾರಣವಾದವು. ಮೆರವಣಿಗೆಯಲ್ಲಿ ನಗರದ ಪೊಲೀಸ್ ಅಶ್ವರೋಹಿ ದಳದ ಕುದುರೆಗಳು ಭಾಗವಹಿಸಿದ್ದವು. ನಗಾರಿ ಶಬ್ದವನ್ನು ಕೇಳಿ ಕೆಲವು ಕುದು ರೆಗಳು ಬೆಚ್ಚಿದವು. ತಕ್ಷಣ ಅವುಗಳನ್ನು ಪೊಲೀಸರು ನಿಯಂತ್ರಿಸಿದರು.
ಹೂವಿನ ರಂಗೋಲಿ:
ಮೆರವಣಿಗೆಗೆ ಚಾಲನೆ ದೊರೆತ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಹೂಗಳಿಂದ ರಚಿಸಿದ್ದ ಬೃಹತ್ ರಂಗೋಲಿ ವಿಶೇಷ ಆಕರ್ಷಣೆಯಾಗಿತ್ತು. ಬಣ್ಣಬಣ್ಣದ ಹೂವುಗಳಿಂದ ಕಲಾತ್ಮಕವಾಗಿ ರೂಪಿಸಿದ್ದ ರಂಗೋಲಿ ನೋಡುಗರ ಕಣ್ಮನ ಸೆಳೆಯಿತು. ಈ ರಂಗೋಲಿಯ ಮೂಲಕ ‘ಬರಕ್ಕೆ ಪರಿಹಾರ ಪರ್ಯಾಯ ಬೆಳೆ ಆಧಾರ’ ಎಂಬ ಮಹತ್ವದ ಸಂದೇಶ ಸಾರಲಾಯಿತು.
ಕೊಡಗಿನ ಕಾಫಿ, ಕರಿಮೆಣಸಿನ ಕಂಪು:
ಮೆರವಣಿಗೆಯಲ್ಲಿ ಕೊಡಗು ಗೌಡ ಸಮಾಜದವರು ಕೊಡಗಿನ ಸಾಂಪ್ರದಾಯಿಕ ಕೋಲಾಟ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು. ಕೊಡಗಿನ ಸಂಸ್ಕೃತಿಯ ಸೊಗಡನ್ನು ಹೊತ್ತ ನೃತ್ಯ ತಂಡದ ಪ್ರದರ್ಶನ ಮೆರವಣಿಗೆಗೆ ಮತ್ತಷ್ಟು ವೈವಿಧ್ಯ ತುಂಬಿತು. ಇದರ ಜತೆಗೆ ಕೊಡಗಿನಲ್ಲಿ ಬೆಳೆಯುವ ಕಾಫಿ, ಕರಿಮೆಣಸು ಸೇರಿದಂತೆ ವಿವಿಧ ತೋಟಗಾರಿಕಾ ಬೆಳೆಗಳನ್ನು ಪ್ರದರ್ಶಿಸಿದರು.
ಕಾಫಿಯ ಘಮಲು, ಕರಿಮೆಣಸಿನ ಖಾರ ಹಾಗೂ ಮಣ್ಣಿನೊಂದಿಗೆ ಬೆಸೆದುಕೊಂಡಿರುವ ಕೃಷಿಕರ ಶ್ರಮದ ಕತೆಗಳನ್ನು ಹೊತ್ತು ತಂದ ಈ ಮೆರವಣಿಗೆ ನಾಡಿನ ವಿವಿಧ ಭಾಗಗಳ ಕೃಷಿ ವೈವಿಧ್ಯವನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸಿತು. ಪ್ರತಿಯೊಂದು ಪ್ರದೇಶಕ್ಕೂ ತನ್ನದೇ ಆದ ಬೆಳೆ, ಬದುಕು ಹಾಗೂ ಕೃಷಿ ಸಂಸ್ಕೃತಿ ಇದೆ ಎಂಬುದನ್ನು ಮೆರವಣಿಗೆ ಮನದಟ್ಟು ಮಾಡಿಸಿತು.
ಒಟ್ಟಾರೆ ರೈತ ದಸರಾ ಮೆರವಣಿಗೆ ಮೈಸೂರಿನ ರಸ್ತೆಗಳಲ್ಲಿ ಹಳ್ಳಿಯ ಸಂಭ್ರಮವನ್ನು ಹರಡಿತು. ನಗರದ ಜನರಿಗೆ ಗ್ರಾಮೀಣ ಬದುಕಿನ ಸೊಗಡನ್ನು ಪರಿಚಯಿಸುವುದರ ಜತೆಗೆ, ಅನ್ನದಾತನ ಶ್ರಮ, ಕೃಷಿ ಪರಂಪರೆಯ ಮಹತ್ವ ಹಾಗೂ ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ನೆನಪಿಸಿದ ರೈತ ದಸರಾ ಮೆರವಣಿಗೆ ದಸರಾ ಸಂಭ್ರಮಕ್ಕೆ ವಿಶೇಷ ಮೆರುಗು ನೀಡಿತು.